ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನ| ಮೂರು ದಶಕದ ನಂತರ ಪುಟಿದೆದ್ದ ಉತ್ಸಾಹ

Last Updated 5 ಫೆಬ್ರುವರಿ 2020, 5:56 IST
ಅಕ್ಷರ ಗಾತ್ರ

ಕಲಬುರ್ಗಿ: ಕನ್ನಡಿಗರ ಸಾರ್ವಭೌಮತೆಯ ದ್ಯೋತಕ ಸಾಹಿತ್ಯ ಸಮ್ಮೇಳನಕ್ಕೆ ಕಲಬುರ್ಗಿ ಸಿದ್ಧಗೊಂಡಿದೆ. ಬರೋಬ್ಬರಿ ಮೂರು ದಶಕದ ನಂತರ ನಡೆಯುತ್ತಿರುವ ಕನ್ನಡ ಜಾತ್ರೆಗೆ ಇಡೀ ನಗರವೇ ತುದಿಗಾಲಲ್ಲಿ ನಿಂತಿದೆ. 30 ವರ್ಷಗಳಿಂದ ಅದುಮಿಟ್ಟುಕೊಂಡ ಉತ್ಸಾಹ ಈಗ ಬಣ್ಣದ ಕಾರಂಜಿಯಾಗಿದೆ.ಇಡೀ ನಗರವೇ ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳುವ ಹುಮ್ಮಸ್ಸಿನಲ್ಲಿದೆ.

ಹಬ್ಬ ನಡೆಯಲಿರುವ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರವೂ ಗಡಿಬಿಡಿ ಕೆಲಸಗಳು ನಡೆದವು. ಸಾಹಿತಿಗಳು, ಕಲಾವಿದರು, ಪರಿಷತ್ತಿನ ಸದಸ್ಯರು, ಅಧಿಕಾರಿಗಳು, ಕನ್ನಡಾಭಿಮಾನಿಗಳಿಗೆ ಬಿಡುವಿಲ್ಲದ ಓಡಾಟ. ಲೀಟಿಂಗ್‌, ಪೇಂಟಿಂಗ್‌, ಇಂಟರ್ನೆಟ್‌ ಸಂಪರ್ಕಗಳಿಂದ ಆರಂಭವಾಗಿ ಆಸನ ವ್ಯವಸ್ಥೆ, ಮೈಕ್‌ಸೆಟಪ್‌, ಹೋಲ್ಡಿಂಗ್ಸ್‌, ಬಂಟಿಂಗ್ಸ್‌, ಭಿತ್ತಿಚಿತ್ರಗಳು, ಕನ್ನಡ ಒಕ್ಕಣೆಗಳನ್ನು ಬರೆಯುವ ಕೆಲಸ ಭರ್ಜರಿಯಾಗೇ ನಡೆದಿದೆ.

ಪೂರ್ವಾಭಿಮುಖವಾಗಿರುವ ಸಮ್ಮೇಳನದ ಮಹಾದ್ವಾರ ಪೂರ್ಣಗೊಂಡಿದ್ದು ನಿಮ್ಮನ್ನು ಬರಸೆಳೆಯುತ್ತಿದೆ. ಇದನ್ನು ದಾಟಿ ನಾಲ್ಕು ಹೆಜ್ಜೆ ಇಟ್ಟರೆ ಸಾಕು; ಲಿಂಗಪೂಜೆಯಲ್ಲಿ ತಲ್ಲೀಣನಾದ ಬಸವಣ್ಣ ಎದುರುಗೊಳ್ಳುತ್ತಾನೆ. 12ನೇ ಶತಮಾನದ ಅನುಭವ ಮಂಟಪವೇ ಇಲ್ಲಿ ಮೈದಳೆದು ನಿಂತಿದೆ. ಅಲ್ಲಲ್ಲಿ ಅಂತಿಮ ಸ್ಪರ್ಶ ನೀಡುತ್ತಿರುವ ಮೈಸೂರಿನ ಕಲಾವಿದರಿಗೆ ಮಾತನಾಡಲೂ ಬಿಡುವಿಲ್ಲದಷ್ಟು ಕೆಲಸ. ಪಾರಂಪರಿಕ ಶೈಲಿಯ ಕಂಬಗಳು, ಕಲ್ಯಾಣ ಚಾಲುಕ್ಯರ ಶೈಲಿಯ ವಾಸ್ತುಶಿಲ್ಪದ ಮಾದರಿ, ಶಿವಶರಣ– ಶರಣೆಯರ ಚಿತ್ರಪಟಗಳು, ವಚನಗಳ ಸಾಲು ಎಲ್ಲವೂ ನಿಮ್ಮನ್ನು ಇತಿಹಾಸಕ್ಕೆ ಎಳೆದೊಯ್ಯುತ್ತದೆ.

ಇದನ್ನು ದಾಟಿ ಒಳಬಂದರೆ ಬೃಹತ್‌ ಶಾಮಿಯಾನ ಬರಮಾಡಿಕೊಳ್ಳುತ್ತದೆ. ಇಕ್ಕೆಲಗಳಲ್ಲೂ ಸುಮಾರು 25 ಸಾವಿರಕ್ಕೂ ಹೆಚ್ಚು ಕುರ್ಚಿಗಳನ್ನೂ ಈಗಾಗಲೇ ಸಾಲಾಗಿ ಜೋಡಿಸಿ ಇಡಲಾಗಿದೆ.ಇದರ ಮಧ್ಯೆ ಹಾಗೂ ಶಾಮಿಯಾನದ ಆಚೀಚೆಧೂಳು ಹರಡದಂತೆ ದಪ್ಪನೆಯ ಮ್ಯಾಟ್‌ ಹಾಸಲಾಗಿದೆ.

ಆವರಣದ ಸುತ್ತ ಕೂಡ ಧೂಳು ನಿಯಂತ್ರಣಕ್ಕಾಗಿ ನಿರಂತರವಾಗಿ ನೀರು ಸಿಂಪಡಿಸುವ ವ್ಯವಸ್ಥೆ ಮಾಡಲಾಗಿದೆ. ಮೂರು ಟ್ರ್ಯಾಕ್ಟರ್‌ಗಳು ನಾಲ್ಕು ತಾಸಿಗೊಮ್ಮೆ ಈ ಆವರದಲ್ಲಿ ನೀರು ಸಿಂಪಡಿಸಲಿವೆ. ಇದೇ ತರದ ವ್ಯವಸ್ಥೆಯನ್ನು ಊಟದ ಶಾಮಿಯಾನ ಬಳಿಯೂ ಮಾಡಲಾಗಿದೆ.

ಇನ್ನಷ್ಟು ಮುಂದೆಸಾಗಿದರೆ ಮುಖ್ಯವೇದಿಕೆ. ಒಂದು ಕ್ಷಣ ನಿಮ್ಮ ಮನಸ್ಸು ಉಲ್ಲಾಸಗೊಳ್ಳದೇ ಇರದು. ಅಷ್ಟು ಸೊಗಸಾಗಿ, ಅಚ್ಚುಕಟ್ಟಾದ ವೇದಿಕೆ ಸಿದ್ಧಗೊಳಿಸಿದ್ದಾರೆ ಕಲಬುರ್ಗಿ ಕಲಾವಿದರು. ರಾಷ್ಟ್ರಕೂಟರ ರಾಜಧಾನಿ ಆಗಿದ್ದ ಮಳಖೇಡ ಕೋಟೆಯ ಪ್ರತಿರೂಪ ಗಾಂಭೀರ್ಯದಿಂದ ಕೂಡಿದೆ. ನೂರಕ್ಕೂ ಹೆಚ್ಚು ಕುರ್ಚಿಗಳನ್ನು ಮೂರು ಸಾಲುಗಳಲ್ಲಿ ಹಾಕಲಾಗಿದೆ. ವೇದಿಕೆಯ ಬೆನ್ನು, ಎಡ–ಬಲ ಹಾಗೂ ಅಭಿಮುಖವಾಗಿ ವರ್ಣಮಯ ವಿದ್ಯುದ್ದೀಪಗಳ ಸಾಲು, ಎಲ್‌ಇಡಿ ಪರದೆಗಳು ಸಿದ್ಧಗೊಂಡಿವೆ.

ವೇದಿಕೆಯ ಬಲಬದಿಯಲ್ಲಿ ಪುಸ್ತಕ ಮಳಿಗೆ, ಎಡಬದಿಗೆ ವಾಣಿಜ್ಯ ಮಳಿಗೆಗಳನ್ನು ಹಂಚುವ ಕೆಲಸ ಭರದಿಂದ ಸಾಗಿದೆ. ಚಿತ್ರಕಲಾ ಸಮಿತಿ ನಿರ್ಮಿಸಿದ ಗ್ಯಾಲರಿಯಲ್ಲಿ ಆಯ್ದ ಪೇಂಟಿಂಗ್‌ಗಳನ್ನು ಒಪ್ಪ ಓರಣವಾಗಿ ಜೋಡಿಸಿ ಇಡಲಾಗಿದೆ.‌

ಯುವ ಸಮುದಾಯಸೆಳೆಯಲುಸೆಲ್ಫಿ ಸ್ಟಾಟ್

ಯುವ ಸಮುದಾಯವನ್ನು ಸೆಳೆಯಲು ಪರಿಷತ್ತು ವಿಶೇಷ ಗಮನ ಹರಿಸಿದೆ. ವೇದಿಕೆ ಆಚೀಚೆ, ಅನುಭವ ಮಂಟಪದ ಬಳಿ ಸೆಲ್ಫಿ ಸ್ಟಾಟ್ ಗುರುತಿಸಿದ್ದು, ಅಲ್ಲಿ ವಿಶೇಷ ಲೀಟಿಂಗ್‌ ವ್ಯವಸ್ಥೆ ಕೂಡ ಮಾಡಲಾಗಿದೆ.

ಸ್ವಯಂ ಸೇವಕರಾಗಿ ನಿಯೋಜನೆಗೊಂಡ ವಿವಿಧ ಕಾಲೇಜುಗಳ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ತಂಡಗಳಿಗೂ ಅವರವರ ಕಲಸದ ಜವಾಬ್ದಾರಿ ಹೊರಿಸಲಾಯಿತು.

ಸಮ್ಮೇಳನಾಧ್ಯಕ್ಷರ ರಥ ಹಾಗೂ ಹಿಂದೆ ಸಾಗುವ ಆರು ವಿಶೇಷ ಸ್ತಬ್ಧಚಿತ್ರಗಳ ವಾಹನಗಳನ್ನೂ ಪ್ರಾಯೋಗಿಕವಾಗಿ ಓಡಿಸಿ ನೋಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT