ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಫೋನ್ ಇನ್ | ನೊಂದವರ ಸಂಕಷ್ಟಗಳಿಗೆ ಸ್ಪಂದಿಸಿ ಅಪ್ಪುಗೌಡ

ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ; ಕ್ಷೇತ್ರದ ಬಡ ಜನರಿಗೆ
Last Updated 19 ಏಪ್ರಿಲ್ 2020, 16:35 IST
ಅಕ್ಷರ ಗಾತ್ರ

ಕೊರೊನಾ ನಿಯಂತ್ರಣ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಅವರು ಕೈಗೊಂಡ ಕ್ರಮಗಳ ಬಗ್ಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಯಿತು. ‘ಪ್ರಜಾವಾಣಿ’ ಕಲಬುರ್ಗಿ ಕಚೇರಿಯಲ್ಲಿ ಭಾನುವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಶಾಸಕರಿಗೆ ಕರೆಗಳ ಮಹಾಪೂರವೇ ಹರಿದುಬಂತು. ಫೋನ್‌ ಇನ್‌ ಒಂದು ತಾಸು ನಿಗದಿಯಾಗಿತ್ತು. ಆದರೆ, ಕರೆಗಳ ಮಹಾಪೂರದಿಂದಾಗಿ ಎರಡು ತಾಸುಗಳಿಗೆ ವಿಸ್ತರಿಸಲಾಯಿತು. ಎಲ್ಲ ಕರೆಗಳಿಗೂ ಶಾಸಕರು ಸಮಾಧಾನದ ಉತ್ತರ ನೀಡಿದರು. ಆಯ್ದ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

*

ಕ್ಷೇತ್ರದ ಬಡಜನರು ಹಸಿವಿನಿಂದ ಬಳಲುವುದನ್ನು ತಡೆಯಲು ಕಲಬುರ್ಗಿ ದಕ್ಷಿಣ ಮತ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ತಮ್ಮ ತಂದೆ ದಿ.ಚಂದ್ರಶೇಖರ ಪಾಟೀಲ ರೇವೂರ ಅವರ ನೆನಪಿನಲ್ಲಿ ಆಹಾರ ಧಾನ್ಯಗಳಿರುವ 25 ಸಾವಿರ ‘ಮೋದಿ ಕಿಟ್‌’ ವಿತರಿಸಲು ನಿರ್ಧರಿಸಿದ್ದಾರೆ.ಪಡಿತರ ವಿತರಣೆ ಆಗದ ಕುಟುಂಬಗಳಿಗೆ ಹಾಗೂ ತೀರಾ ಅಗತ್ಯವಿರುವವರಿಗೆ ಕರೆ ಬಂದ ತಕ್ಷಣವೇ ಅವರ ಕಾರ್ಯಕರ್ತರ ಮೂಲಕ ಆಹಾರ ಸಾಮಗ್ರಿಗಳನ್ನು ತಲುಪಿಸಲಿದ್ದಾರೆ. ಬೇಡಿಕೆ ಬಂದರೆ ಮತ್ತಷ್ಟು ಸಾಮಗ್ರಿಗಳನ್ನು ತಲುಪಿಸುವುದಾಗಿಯೂ ಅವರು ಹೇಳಿದರು.

ಇದರಲ್ಲಿ 2 ಕೆ.ಜಿ. ಅಕ್ಕಿ, 1 ಕೆ.ಜಿ. ಬೇಳೆ, ಸಕ್ಕರೆ, ಗೋದಿ ಹಿಟ್ಟು, ಖಾರ, ಅರಿಷಿಣ ಪುಡಿ ಸೇರಿದಂತೆ ಹಲವು ಅತ್ಯವಶ್ಯಕ ಸಾಮಗ್ರಿಗಳು ಇದರಲ್ಲಿ ಇರುತ್ತವೆ.

ಆಹಾರ ಸಾಮಗ್ರಿ, ಊಟದ ವ್ಯವಸ್ಥೆ, ಕ್ವಾರಂಟೈನ್ ಕೇಂದ್ರಗಳ ಸ್ಥಿತಿಗತಿ, ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ, ವಲಸಿಗರ ಸಮಸ್ಯೆಗಳೂ ಸೇರಿದಂತೆ ಹಲವಾರು ಪ್ರಶ್ನೆಗಳಿಗೆ ಜನ ಉತ್ತರ ಪಡೆದುಕೊಂಡರು. ಕೆಲವರಿಗೆ ಸ್ಥಳದಲ್ಲೇ ಪರಿಹಾರವನ್ನೂ ಸೂಚಿಸಿದರು.

* ಚಂದ್ರಕಾಂತ, ಪಟ್ಟಣ:ಕಿರಾಣಿ ಅಂಗಡಿಗಳಲ್ಲಿ ವಸ್ತುಗಳಿಗೆ ಹೆಚ್ಚಿನ ಹಣ ವಸೂಲಿ ಮಾಡುತ್ತಾರೆ. ಲಾಕ್‌ಡೌನ್‌ ಉಲ್ಲಂಘಿಸಿ ಜನರು ಓಡಾಡುತ್ತಿದ್ದಾರೆ.

ಅಂಥ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಲಾಕ್‌ಡೌನ್‌ ಉಲ್ಲಂಘಿಸುವುದು ಸರಿಯಲ್ಲ. ಪಟ್ಟಣಕ್ಕೆ ಪೊಲೀಸರನ್ನು ಕಳಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ.

*ಸಂದೀಪ್‌, ತಿಲಕ್‌ ನಗರ:ಹಲವು ದಿನಗಳಿಂದ ಲಾಕ್‌ಡೌನ್‌ ಇರುವುದರಿಂದ ಉದ್ಯೋಗವಿಲ್ಲ. ಊಟಕ್ಕೂ ತತ್ವಾರ ಬಂದಿದೆ. ಏನಾದರೂ ಸಹಾಯ ಮಾಡಿ.

ಊಟದ ಸಮಸ್ಯೆಯನ್ನು ನೀಗಿಸಲು ನಮ್ಮ ತಂದೆಯವರ ನೆನಪಿನಲ್ಲಿ 25 ಸಾವಿರ ‘ಮೋದಿ ಕಿಟ್‌’ಗಳ ಮೂಲಕ ಆಹಾರ ಸಾಮಗ್ರಿಗಳನ್ನು ಬಡವರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದು, ನಿಮ್ಮ ಬಡಾವಣೆಯಲ್ಲಿ ಹೀಗೆ ಸಮಸ್ಯೆಗೆ ಒಳಗಾಗಿರುವವರ ಪಟ್ಟಿ ನೀಡಿದರೆ ನಿಮ್ಮ ಜೊತೆಗೆ ಅವರಿಗೂ ಕಿಟ್‌ ತಲುಪಿಸುತ್ತೇವೆ.

*ಆಕಾಶ, ಹಡಗಿಲ್ ಹಾರುತಿ:ನಮ್ಮ ಗ್ರಾಮದಲ್ಲಿ ಹಲವು ದಿನಗಳಿಂದ ನೀರಿನ ಸಮಸ್ಯೆ ಇದೆ.

15 ದಿನಗಳ ಹಿಂದೆಯಷ್ಟೇ ನಿಮ್ಮ ಗ್ರಾನದಲ್ಲಿ ಬೋರ್‌ವೆಲ್‌ ಹಾಕಿಸಿದ್ದೇವೆ. ತುರ್ತು ನೀರನ್ನು ಪೂರೈಸಲು ₹ 1 ಕೋಟಿ ಹಣವನ್ನು ಮೀಸಲಾಗಿ ಇಡಲಾಗಿದೆ. ಗ್ರಾಮದಲ್ಲಿರುವ ಕೆಟ್ಟಿರುವ ಬೋರ್‌ವೆಲ್‌ಗಳನ್ನು ದುರಸ್ತಿ ಮಾಡಲು ಗ್ರಾಮೀಣ ಕುಡಿಯುವ ನೀರು ವಿಭಾಗದ ಎಂಜಿನಿಯರ್‌ಗೆ ಸೂಚನೆ ನೀಡುತ್ತೇನೆ.‌

*ಮಲ್ಲಿಕಾರ್ಜುನ ಹಡಪದ, ಹಡಪದ ಯುವ ವೇದಿಕೆ ಅಧ್ಯಕ್ಷ: ಕ್ಷೌರಿಕ ವೃತ್ತಿ ನಿಂತುಹೋಗಿದ್ದು, ಸರ್ಕಾರದಿಂದ ಆರ್ಥಿಕ ನೆರವು ಕೊಡಿಸುವಿರಾ?

ಸವಿತಾ ಸಮಾಜದವರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ನನಗೆ ಮಾಹಿತಿ ಇದ್ದು, ನಿಮ್ಮ ಸಮಾಜಕ್ಕೆ ಅಗತ್ಯ ನೆರವು ನೀಡುವೆ. ಮುಖ್ಯಮಂತ್ರಿಯವರೊಂದಿಗೂ ಈ ಬಗ್ಗೆ ಚರ್ಚಿಸುವೆ.

*ಸಂತೋಷ, ಸಂತ್ರಾಸವಾಡಿ:ನಮ್ಮ ಮನೆಯಲ್ಲಿ ಮಗುವಿಗೆ ಹುಷಾರು ತಪ್ಪಿದೆ. ಬಡಾವಣೆಯ ಅಕ್ಕಪಕ್ಕದ ದವಾಖಾನೆಗಳನ್ನು ಮುಚ್ಚಲಾಗಿದೆ. ಎಲ್ಲಿ ತೋರಿಸಬೇಕು ಎಂಬುದು ಗೊತ್ತಾಗುತ್ತಿಲ್ಲ?

ಕೊರೊನಾ ಸೋಂಕಿತರ ಚಿಕಿತ್ಸೆಗೆಂದು ಇಎಸ್‌ಐಸಿ ಹಾಗೂ ಜಿಮ್ಸ್‌ ಆಸ್ಪತ್ರೆಗಳನ್ನು ನಿಗದಿಪಡಿಸಲಾಗಿದೆ. ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಅಲ್ಲಿಗೆ ಹೋಗಿ.

*ಶಿವಕುಮಾರ್, ಸುಂದರ ನಗರ:ವೈದ್ಯರು ಹಾಗೂ ಸ್ಟಾಫ್‌ ನರ್ಸ್‌ಗಳು ತಮ್ಮ ಜೀವವನ್ನು ಒತ್ತೆಯಿಟ್ಟು ಕೋವಿಡ್‌ ಸೋಂಕಿತರಿಗೆ ಆರೈಕೆ ಮಾಡುತ್ತಿದ್ದಾರೆ. ಅವರ ಜೀವನಕ್ಕೆ ಏನಾದರೂ ಆದರೆ ಹೇಗೆ?

ವೈದ್ಯರು, ನರ್ಸ್‌ಗಳು ಸೇರಿದಂತೆ ಒಟ್ಟಾರೆ ಕೋವಿಡ್‌ ಕಾಯಿಲೆಯಿಂದ ಬಳಲುವವರಿಗೆ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ ₹ 50 ಲಕ್ಷದ ವಿಮಾ ರಕ್ಷಣೆಯನ್ನು ಒದಗಿಸಲಾಗಿದೆ. ಎಲ್ಲ ಜೀವರಕ್ಷಕ ಸಾಧನಗಳನ್ನೂ ನೀಡಲಾಗಿದೆ.

*ಸಯ್ಯದ್‌ ಅನ್ವರ್‌ ಅಲಿ:ಕೋಲಾರ ಜಿಲ್ಲೆಯಲ್ಲಿ ನಾವು ಹಲವು ಜನ ಕಲಬುರ್ಗಿ ಜಿಲ್ಲೆಯವರು ಸಿಲುಕಿಕೊಂಡಿದ್ದೇವೆ. ದಯವಿಟ್ಟು ನಮ್ಮನ್ನು ಕಲಬುರ್ಗಿಗೆ ಕರೆಸಿಕೊಳ್ಳಲು ಸಹಾಯ ಮಾಡಿ.

ಲಾಕ್‌ಡೌನ್‌ ಮುಗಿಯುವವರೆಗೂ ಜನರು ಎಲ್ಲಿದ್ದಾರೋ ಅಲ್ಲಿಯೇ ಇರಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಎಲ್ಲರ ಹಿತದೃಷ್ಟಿಯಿಂದ ನಾವು ಇದನ್ನು ಪಾಲಿಸಲೇಬೇಕು. ಕೋಲಾರದಲ್ಲಿ ಏನಾದರೂ ತೊಂದರೆಯಾದರೆ ತಿಳಿಸಿ, ನೀವಿದ್ದಲ್ಲಿಗೇ ಅಲ್ಲಿಯ ನಮ್ಮ ಕಾರ್ಯಕರ್ತರು ಬಂದು ಸಹಾಯ ಮಾಡುತ್ತಾರೆ. ಈ ಸಂಬಂಧ ಅಲ್ಲಿನ ಬಿಜೆಪಿ ಮುಖಂಡರೊಂದಿಗೆ ಮಾತನಾಡುತ್ತೇನೆ.

* ಶ್ರೀಮಂತ, ಓಂನಗರ: ಲಾಕ್‌ಡೌನ್‌ನಿಂದಾಗಿ ಆಟೊ ಚಾಲಕರ ಜೀವನ ಕೂಡ ದುಸ್ತರವಾಗಿದೆ. ದೆಹಲಿಯ ಹಾಗೆ ರಾಜ್ಯದಲ್ಲೂ ಪರಿಹಾರ ನೀಡಿ.

ಆಟೊ ಓಡಿಸಿ ಜೀವನ ಸಾಗಿಸುವವರಿಗೆ ಎಷ್ಟು ಕಷ್ಟವಾಗುತ್ತಿದೆ ಎಂದು ನಮಗೂ, ಸರ್ಕಾರಕ್ಕೂ ಮನವರಿಕೆ ಆಗಿದೆ. ಆದರೆ, ಲಾಕ್‌ಡೌನ್‌ ನಿಯಮ ಮುರಿಯುವಂತಿಲ್ಲ. ದೆಹಲಿ ಸರ್ಕಾರ ಆಟೊ ಚಾಲಕರಿಗೆ ತಲಾ ₹ 6000 ಮಾಸಿಕ ಪರಿಹಾರ ಧನ ನೀಡುತ್ತಿರುವ ಬಗ್ಗೆ ಕೇಳಿದ್ದೇನೆ. ಅದೇ ರೀತಿ ರಾಜ್ಯದಲ್ಲೂ ಕ್ರಮ ಜಾರಿ ಮಾಡುವಂತೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯುತ್ತೇನೆ.

* ಬಿ.ಎಂ. ಪಾಟೀಲ: ಅಫಜಲಪುರ ಮಾರ್ಗವೂ ಸೇರಿದಂತೆ ಹಲವೆಡೆ ವೈರಾಣು ನಾಶಕ ದ್ರಾವಣ ಸಿಂಪಡಿಸಿ.

‌ರಾಸಾಯನಿಕ ದ್ರಾವಣವನ್ನು ನಗರದ ಮೂಲೆಮೂಲೆಗೂ ಸಿಂಪಡಣೆ ಮಾಡಲು ಸೂಚಿಸಲಾಗಿದೆ. ಅಫಜಲಪುರ ಮಾರ್ಗದಲ್ಲೂ ಸಿಂಪಡಣೆ ಮಾಡಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸುತ್ತೇನೆ.

* ಬರಾಕ್‌, ಅಶೋಕನಗರ: ಇಲ್ಲಿನ ಅಂಗನವಾಡಿ ಸಂಖ್ಯೆ 3ಕ್ಕೆ ಸಂದಾಯ ಮಾಡಿದ ಆಹಾರ ಧಾನ್ಯಗಳನ್ನು ವಿತರಿಸಿಲ್ಲ. ನೆಪಕ್ಕೆ ಮಾತ್ರ ಒಂದು ದಿನ ಕೆಲವರಿಗೆ ನೀಡಿದ್ದಾರೆ. ಉಳಿದವರ ಗತಿ ಏನು?

ಲಾಕ್‌ಡೌನ್‌ನಿಂದ ಜನ ಆಹಾರದ ಕೊರತೆಯಿಂದ ಬಳಲದಂತೆ ರಾಜ್ಯ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ಪ್ರತಿಯೊಂದು ಕುಟುಂಬಕ್ಕೂ ಎರಡು ತಿಂಗಳ ಪಡಿತರ ಧಾನ್ಯ ವಿತರಿಸಲು ಸೂಚಿಸಿಲಾಗಿದೆ. ಇದರ ಮಾಹಿತಿಗಾಗಿ ಅಲ್ಲಲ್ಲಿ ಕೊರೊನಾ ವಾರಿಯರ್ಸ್‌, ಹೆಲ್ಪ್‌ಲೈನ್‌ ಕೂಡ ತರೆಯಲಾಗಿದೆ. ಜನರಿಗೆ ತೊಂದರೆ ಆಗಿದ್ದರೆ ಸಹಾಯ ಪಡೆಯಬಹುದು.

* ಖಾದ್ರಿ, ಬಳ್ಳಾರಿ: ಮಳಖೇಡ ದರ್ಗಾದ ಅತಿಥಿಗ್ರಹದಲ್ಲಿ ಹೊರಗಿನಿಂದ ಬಂದ ಕೆಲವರು ಅವಿತಿದ್ದಾರೆ. ಇದರಿಂದ ಸುತ್ತಲಿನ ಜನರಿಗೆ ಆತಂಕ ಹುಟ್ಟಿದೆ. ಕ್ರಮ ಕೈಗೊಳ್ಳಿ.

ಹೊರಗಿನಿಂದ ನಗರ ಅಥವಾ ಜಿಲ್ಲೆಯ ಯಾವುದೇ ಭಾಗಕ್ಕೆ ಬಂದರೂ ಸ್ವಯಂಪ್ರೇರಣೆಯಿಂದ ವರದಿ ಮಾಡಿಕೊಳ್ಳಬೇಕು. ಒಂದು ವೇಳೆ ದರ್ಗಾದಲ್ಲಿ ಅವಿತು ಕುಳಿತಿದ್ದರೆ ಅದನ್ನು ತುಂಬ ಗಂಭೀರ ವಿಷಯ ಎಂದು ಪರಿಗಣಿಸಲಾಗುವುದು. ಪೊಲೀಸರಿಗೆ ಮಾಹಿತಿ ನೀಡುತ್ತೇನೆ.

* ಅಂಬಾರಾಯ, ಸೈಯದ್‌ ಚಿಂಚೋಳಿ: ಗ್ರಾಮದಲ್ಲಿ ಈಗಲೇ ನೀರಿನ ಸಮಸ್ಯೆ ಆರಂಭವಾಗಿದೆ. ಪರಿಹಾರ ಏನು?

ಈ ಬಾರಿ ಸಾಕಷ್ಟು ನೀರು ಸಂಗ್ರಹವಿದೆ. ಎಲ್ಲಿಯೂ ಕೊರತೆ ಆಗುವುದಿಲ್ಲ. ತಾಂತ್ರಿಕ ಸಮಸ್ಯೆಗಳಿಂದ ತೊಂದರೆ ಆಗಿದ್ದರೆ, ಆಯಾ ಗ್ರಾಮದ ಪಿಡಿಒಗಳಿಗೆ ಸೂಚನೆ ನೀಡಿ, ಸಮಸ್ಯೆ ಪರಿಹರಿಸುತ್ತೇನೆ.

* ನಾಗೇಶ, ಪಾಣೇಗಾಂವ: ನಮ್ಮೂರಿನ ಜನ ಮುಂಬೈ, ಹೈದರಾಬಾದ್‌, ಬೆಂಗಳೂರಿನಲ್ಲಿ ಸಿಕ್ಕಿಕೊಂಡಿದ್ದಾರೆ. ವಾಪಸ್‌ ಕರೆಸುವ ವ್ಯವಸ್ಥೆ ಮಾಡಿ.

ಕೊರೊನಾ ನಿಯಂತ್ರಣಕ್ಕಾಗಿ ಯಾರೂ ಎಲ್ಲಿಂದಲೂ ಪ್ರಯಾಣ ಮಾಡುವಂತಿಲ್ಲ. ಇದನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸುವ ಅನಿವಾರ್ಯ ಇದೆ. ನಮ್ಮ ಭಾಗದವರು ಎಲ್ಲಿ ಸಿಕ್ಕಿಕೊಂಡಿದ್ದಾರೆ ಎಂದು ಹೇಳಿದರೆ ಅವರಿಗೆ ಅಗತ್ಯ ಸೌಕರ್ಯ, ಊಟದ ವ್ಯವಸ್ಥೆಯನ್ನು ಇಲ್ಲಿಂದಲೇ ಕಲ್ಪಿಸುತ್ತೇವೆ. ಲಾಕ್‌ಡೌನ್‌ ಮುಗಿಯುವವರೆಗೆ ಎಲ್ಲಿದ್ದಾರೋ ಅಲ್ಲೇ ಇರುವುದು ಅವರಿಗೂ ಸುರಕ್ಷಿತ.

* ರಾಚಪ್ಪ, ಪಟ್ಟಣ ಗ್ರಾಮ: 50 ಟನ್‌ ಕಲ್ಲಂಗಡಿ ಬೆಳೆದಿದ್ದೇನೆ. ಕೊಳ್ಳುವರೇ ಇಲ್ಲ.

ರೈತರು ಫಸಲು ಗ್ರೀನ್‌ ಪಾಸ್‌ ಪಡೆದು ಎಲ್ಲಿಗೆ ಬೇಕಾದರೂ ಹೋಗಿ ಫಸಲು ಮಾರಬಹುದು. ನಗರಕ್ಕೆ ತಂದರೆ ಇಲ್ಲಿನ ವ್ಯಾಪಾರಿಗಳೊಂದಿಗೆ ಸಂಪರ್ಕ ಏರ್ಪಡಿಸಿ ಹಣ್ಣು ಖರೀದಿಸುವ ವ್ಯವಸ್ಥೆ ಮಾಡುತ್ತೇವೆ.

* ಸ್ನೇಹಾ ಕಟ್ಟಿಮನಿ: ಹನುಮಾನ್‌ ನಗರ, ಪಂಚಶೀಲ ನಗರ, ಇಂದಿರಾ ನಗರಗಳಲ್ಲಿ ಸ್ಲಂ ಜನ ಹೆಚ್ಚಾಗಿದ್ದಾರೆ. ಅವರಿಗೆ ಆಹಾರ ಹಾಗೂ ವೈದ್ಯಕೀಯ ಸೌಕರ್ಯ ನೀಡಿ.

ರಾಜ್ಯ ಸರ್ಕಾರ ನೀಡುತ್ತಿರುವ ಪಡಿತರ ಧಾನ್ಯವಲ್ಲದೇ, ಚಂದ್ರಶೇಖರ ಪಾಟೀಲ ರೇವೂರ ಅವರ ಜನ್ಮದಿನದ ಅಂಗವಾಗಿ ‘ಮೋದಿ ಕಿಟ್‌’ ಹೆಸರಿನಲ್ಲಿ ಆಹಾರ ಧಾನ್ಯ ನೀಡುತ್ತಿದ್ದೇವೆ. ಸ್ಲಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿತರಿಸಲು ಸೂಚಿಸುತ್ತೇನೆ. ನಗರದ ವಿವಿಧೆಡೆ ಫಿವರ್‌ ಕ್ಲಿನಿಕ್‌ ತೆರೆಯಲಾಗಿದ್ದು, ಸಾಮಾನ್ಯ ಕಾಯಿಲೆ ಬಂದವರು ಅಲ್ಲಿ ತಪಾಸಣೆ ಮಾಡಿಸಿಕೊಳ್ಳಬಹುದು. ಸ್ಲಂ ನಿವಾಸಿಗಳಿಗಾಗಿಯೇ ಒಂದು ಫಿವರ್‌ ಕ್ಲಿನಿಕ್‌ ತೆರೆಯಲು ಕ್ರಮ ಕೈಗೊಳ್ಳುತ್ತೇನೆ.

ವೈದ್ಯಕೀಯ ತ್ಯಾಜ್ಯ ವಿಲೇವಾರಿದಾರರಿಗೂ ಇಲ್ಲ ಪಿಪಿಇ

* ಇಎಸ್‌ಐಸಿ ಆಸ್ಪತ್ರೆಯಿಂದ ಹೊರಬರುವ ಕೋವಿಡ್‌–19 ಸೋಂಕಿತರಿಗೆ ಸಂಬಂಧಿಸಿದ ವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ ಮಾಡುವವರಿಗೇ ವೈಯಕ್ತಿಕ ಸುರಕ್ಷತಾ ಕಿಟ್‌ (ಪಿಪಿಇ) ಕೊಟ್ಟಿಲ್ಲ. ನಮ್ಮ ಜೀವಕ್ಕೆ ಬೆಲೆ ಇಲ್ಲವೇ? ಎಂದು ವ್ಯಕ್ತಿಯೊಬ್ಬರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಈ ಬಗ್ಗೆ ಇಎಸ್‌ಐಸಿ ಡೀನ್‌ ಅವರೊಂದಿಗೆ ಮಾತನಾಡಿ ತಕ್ಷಣವೇ ತ್ಯಾಜ್ಯ ವಿಲೇವಾರಿ ಮಾಡುವವರಿಗೂ ಅಗತ್ಯ ಕಿಟ್ಸ್‌ ಕೊಡಲು ಕ್ರಮ ಕೈಗೊಳ್ಳುತ್ತೇನೆ ಎಂದರು.

ಸಾರ್ವಜನಿಕರ ದೂರಿಗೆ ಸ್ಥಳದಲ್ಲೇ ಪರಿಹಾರ
* ಜೇವರ್ಗಿ ತಾಲ್ಲೂಕಿನ ಯಾತನಾಳ ಗ್ರಾಮದಲ್ಲಿ 200ಕ್ಕೂ ಹೆಚ್ಚು ಜನರಿಗೆ ಚಿಕೂನ್‌ ಗುನ್ಯ ಆಗಿದೆ. ಅವರ ಆರೋಗ್ಯವನ್ನು ಯಾರೂ ಗಮನಿಸುತ್ತಿಲ್ಲ ಎಂದು ಶಂಕರಗೌಡ ಹಾಗೂ ಇತರರು ದೂರಿದರು.

–ಇದಕ್ಕೆ ಸ್ಪಂದಿಸಿ ‘ಪ್ರಜಾವಾಣಿ’ ಕಚೇರಿಯಿಂದಲೇ ಡಿಎಚ್‌ಒ ಅವರಿಗೆ ಕರೆ ಮಾಡಿದ ಶಾಸಕರು, ತಕ್ಷಣಕ್ಕೆ ಯಾತನಾಳದಲ್ಲಿ ವೈದ್ಯಕೀಯ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ರಾಮಮಂದಿರ ರಸ್ತೆಯಲ್ಲಿ ಬೀದಿದೀಪಗಳೇ ಇಲ್ಲ ಎಂದು ಕೇಳಿಬಂದ ಇನ್ನೊಂದು ಪ್ರಶ್ನೆಗೆ ಸ್ಪಂದಿಸಿ, ಮಹಾನಗರ ಪಾಲಿಕೆ ಅಧಿಕಾರಿಗೆ ಕರೆ ಮಾಡಿದ ಶಾಸಕರು, ನಗರದಲ್ಲಿ ಎಲ್ಲೆಲ್ಲಿ ಬೀದಿದೀಪ ಸಮಸ್ಯೆ ಆಗಿದೆಯೋ ಅದನ್ನೆಲ್ಲ ಪರಿಹರಿಸಬೇಕು ಎಂದು ನಿರ್ದೇಶನ ನೀಡಿದರು.

‘ಅಪ್ಪುಗೌಡ್ರ’ಗೆ ಅಭಿನಂದನೆ
ಬೆಂಗಳೂರು, ಬಳ್ಳಾರಿ, ಹೈದರಾಬಾದ್‌ ಸೇರಿದಂತೆ ವಿವಿಧ ನಗರಗಳಿಂದಲೂ ಕರೆ ಮಾಡಿದ ಹಲವರು ಶಾಸಕ ದತ್ತಾತ್ರೇಯ ಸಿ. ಪಾಟೀಲ ಅವರ ಕಾರ್ಯವೈಖರಿ ಪ್ರಶಂಸಿಸಿದರು. ಕೋವಿಡ್ ಮೊದಲ ಪ್ರಕರಣ ಪತ್ತೆಯಾದಾಗಿನಿಂದಲೂ ನಗರದಲ್ಲೇ ಉಳಿದು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೀರಿ ಎಂದು ಅಭಿನಂದಿಸಿದರು.

ಶಾಸಕರ ಕೆಲವು ಸಹಪಾಠಿಗಳು, ಅಭಿಮಾನಿಗಳು ಕೂಡ ಕರೆ ಮಾಡಿ, ‘ಅಪ್ಪುಗೌಡ್ರೆ ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ’‌ ಎಂದು ಪ್ರೀತಿಯಿಂದ ಹೇಳಿದರು.

ಫೇಸ್‌ಬುಕ್‌ನಲ್ಲಿ ಲಕ್ಷಕ್ಕೂ ಹೆಚ್ಚು ಜನ ವೀಕ್ಷಣೆ
ನಿಗದಿತ ಅವಧಿ ಮಧ್ಯಾಹ್ನ 12ರಿಂದ 1 ಗಂಟೆಯವರೆಗೆ ಮಾತ್ರ ಶಾಸಕರ ಫೋನ್‌ ಇನ್‌ ಕಾರ್ಯಕ್ರಮ ನಿಗದಿ ಮಾಡಲಾಗಿತ್ತು. ಆದರೆ, ಜನರ ಅಪಾರ ಸ್ಪಂದನೆ ಹಾಗೂ ಕರೆಗಳ ಮಹಾಪೂರ ನಿಲ್ಲಲೇ ಇಲ್ಲ. ಇದರಿಂದ ಉತ್ತೇಜನಗೊಂಡ ಶಾಸಕರು ಎಲ್ಲ ಕರೆಗಳಿಗೂ ಸ್ಪಂದಿಸುತ್ತೇನೆ ಎಂದು ಮುಂದುವರಿಸಿದರು. ಎರಡು ತಾಸು ಎಡೆಬಿಡದೇ ಬಂದ ಕರೆಗಳನ್ನು ಅಟೆಂಡ್‌ ಮಾಡಿದರು. ಎಲ್ಲರಿಗೂ ಸಮಾಧಾನದಿಂದ ಉತ್ತರ ಹೇಳಿದರು. ಸಂಜೆ 6ರವರೆಗೂ ಕರೆಗಳು ಬರುತ್ತಲೇ ಇದ್ದವು.

ಫೋನ್‌ ಇನ್‌ ಕಾರ್ಯಕ್ರಮವನ್ನು ‘ಪ್ರಜಾವಾಣಿ’ ಫೇಸ್‌ಬುಕ್‌ ಪೇಜ್‌ನಲ್ಲಿ 1.05 ಲಕ್ಷಕ್ಕೂ ಹೆಚ್ಚು ಜನ ಲೈವ್‌ ವೀಕ್ಷಣೆ ಮಾಡಿದರು. ಹಲವರು ಅಲ್ಲೇ ಪ್ರಶ್ನೆಗಳನ್ನು ಕೇಳಿದರು, ಕಮೆಂಟ್‌ ಹಾಕಿದರು. ಶಾಸಕರ ಕಾರ್ಯವೈಖರಿಗೆ ಸಾವಿರಾರು ‘ಲೈಕ್‌’ಗಳು ಹರಿದುಬಂದವು.

ಹೆಚ್ಚು‍ಪೊಲೀಸರ ನಿಯೋಜನೆ
‘ನಿಷೇಧಾಜ್ಞೆಯ ನಡುವೆಯೂ ಕಲಬುರ್ಗಿ 31ನೇ ವಾರ್ಡ್‌ನ ಮಕ್ತುಂಪುರದಲ್ಲಿ ಜನರು ಓಡಾಡುತ್ತಿದ್ದಾರೆ. ಇಲ್ಲಿ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿದರೆ ಅನುಕೂಲ’ ಎಂದು ಮುಕ್ತಂಪುರದ ನಾಗರಾಜ, ಜಫರಾಬಾದ್‌ನಅಂಬರೀಷ್ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಅಪ್ಪುಗೌಡ, ‘ಜಿಲ್ಲೆಯ ಗಡಿಯಿಂದ ನಗರಕ್ಕೆ ಬರುವ ವೇಳೆಗೆ ಮೂರು ಹಂತಗಳಲ್ಲಿ ಭದ್ರತೆಯನ್ನು ಮಾಡಲಾಗಿದೆ. ಜಿಲ್ಲೆಯ ಗಡಿಭಾಗದಲ್ಲಿ ದಿನದ 24 ಗಂಟೆಯೂ ಪೊಲೀಸರನ್ನು ನಿಯೋಜಿಸಿ ವಾಹನಗಳ ಓಡಾಟವನ್ನು ನಿರ್ಬಂಧಿಸಲಾಗಿದೆ. ಅಲ್ಲಿಂದ ನಗರ ಪ್ರವೇಶಿಸುವ ಸಂದರ್ಭದಲ್ಲಿಯೂ ಒಂದೊಂದು ಚೆಕ್‌ ಪೋಸ್ಟ್‌ ಆರಂಭಿಸಲಾಗಿದೆ. ಓಣಿಗಳಲ್ಲಿಯೂ ಜನರು ಸ್ವಯಂಪ್ರೇರಿತರಾಗಿ ಕಟ್ಟಿಗೆ, ತಗಡಿನ ಷೀಟ್‌ಗಳನ್ನು ಅಡ್ಡಲಾಗಿ ಇಟ್ಟು ಪಹರೆ ಕಾಯುತ್ತಿದ್ದಾರೆ. ವಾರ್ಡ್‌ನ ಪ್ರಮುಖ ರಸ್ತೆಯೊಂದನ್ನು ಮಾತ್ರ ಮುಕ್ತವಾಗಿರಿಸಿದ್ದೇವೆ. ಪೊಲೀಸರೂ ರೌಂಡ್ಸ್‌ ಮಾಡುತ್ತಿರುತ್ತಾರೆ’ ಎಂದರು.

ಅಗತ್ಯ ಔಷಧಿ ಮನೆ ಬಾಗಿಲಿಗೆ
ಕಲಬುರ್ಗಿಯಲ್ಲಿರುವ ತಾಯಿಗೆ ಧಾರವಾಡದಿಂದ ಔಷಧಿ ತರಿಸಬೇಕಾಗಿದ್ದು, ಕೊರಿಯರ್‌ ಸೇವೆ ಇಲ್ಲದ್ದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೊಸ ಆರ್‌ಟಿಒ ಕಚೇರಿ ಬಳಿಯ ಶಶಾಂಕ್‌ ಎಂಬುವವರು ಕರೆ ಮಾಡಿದರೆ, ಪಿಎನ್‌ಟಿ ಕಾಲೊನಿ ನಿವಾಸಿ ಮಹೇಶ ಅವರು ಹೈದರಾಬಾದ್‌ನಿಂದ ಔಷಧಿ ತರಿಸಬೇಕಿದೆ. ಲಾಕ್‌ಡೌನ್‌ನಿಂದ ಆಗುತ್ತಿಲ್ಲ ಎಂದು ಗೋಳು ತೋಡಿಕೊಂಡರು.

ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ತಮ್ಮ ಮೊಬೈಲ್‌ ಸಂಖ್ಯೆಯನ್ನು ಅವರೊಂದಿಗೆ ಹಂಚಿಕೊಂಡು ಆ ಸಂಖ್ಯೆಗೆ ಯಾವ ಔಷಧಿ ಬೇಕು ಎಂಬುದನ್ನು ವಾಟ್ಸ್‌ ಆ್ಯಪ್‌ ಮಾಡಿರಿ. ಔಷಧಿ ತರಿಸಿಕೊಂಡು ಮನೆಗೆ ತಲುಪಿಸುವುದಾಗಿ ಭರವಸೆ ನೀಡಿದರು.

ಬೆಂಗಳೂರಿನಿಂದ ಕರೆಮಾಡಿದ ವ್ಯಕ್ತಿಯೊಬ್ಬರು ಸಂಜೀವನಗರದಲ್ಲಿರುವ ತಮ್ಮ ತಾಯಿಗೆ ನೆರವಾಗುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ನಿಮ್ಮ ತಾಯಿಯ ಹೊಣೆ ನಮ್ಮಮೇಲೆ ಬಿಡಿ ಎಂದು ಅವರಿಗೆ ಅಭಯ ನೀಡಿದರು.

₹ 600 ಕೋಟಿ ವೆಚ್ಚದಲ್ಲಿ ನಿರಂತರ ನೀರು ಯೋಜನೆ
ಕಲಬುರ್ಗಿ ಮಹಾನಗರ ವ್ಯಾಪ್ತಿಯ ಎಲ್ಲ 55 ವಾರ್ಡ್‌ಗಳ ಪ್ರತಿ ಮನೆಗೆ ನಿರಂತರ (24x7) ನೀರು ಪೂರೈಸುವ₹ 600 ಕೋಟಿ ವೆಚ್ಚದ ಯೋಜನೆಯ ಗುತ್ತಿಗೆಯನ್ನು ಎಲ್‌ ಅಂಡ್‌ ಟಿ ಕಂಪನಿಗೆ ವಹಿಸಲಾಗಿದೆ. ಲಾಕ್‌ಡೌನ್‌ ಮುಗಿದ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ ಎಂದುಶಾಸಕ ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದರು.

ಮೊದಲ ಹಂತದಲ್ಲಿ ನಗರದ 14 ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಈಗ ಇಡೀ ನಗರಕ್ಕೆ ಈ ಯೋಜನೆ ವಿಸ್ತರಿಸಲಾಗುವುದು. ಭೀಮಾ ನದಿ ಮತ್ತು ಬೆಣ್ಣೆತೊರಾ ಜಲಾಶಯಗಳಿಂದ ನೀರು ತರಲಾಗುವುದು. ಈ ಯೋಜನೆ ಅನುಷ್ಠಾನಗೊಂಡ ನಂತರಮನೆ ಮನೆಗೆ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ ಎಂದರು.

ನೀರಿನ ಸಮಸ್ಯೆ ಇಲ್ಲ
ಕಲಬುರ್ಗಿ ನಗರಕ್ಕೆ ಬೇಸಿಗೆಗೆ ಅಗತ್ಯವಿರುವ ನೀರನ್ನು ಸರಡಗಿ ಬ್ಯಾರೇಜ್‌ ಮತ್ತು ಬೆಣ್ಣೆತೊರಾ ಜಲಾಶಯಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಲಾಗಿದೆ. ಹೀಗಾಗಿ ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದು ಎಂದು ದತ್ತಾತ್ರೇಯ ಹೇಳಿದರು.

ಕೆರೆ ದಂಡೆಯಲ್ಲಿ ಶರಣರ ಮೂರ್ತಿಗಳು
₹ 10 ಕೋಟಿ ವೆಚ್ಚದಲ್ಲಿ ಶರಣಬಸವೇಶ್ವರ ಕೆರೆಯನ್ನು ಸೌಂದರೀಕರಣ ಮಾಡಲಾಗುತ್ತಿದೆ. ಅದರ ಭಾಗವಾಗಿ ಕೆರೆಯ ದಂಡೆಯ ರಸ್ತೆ (ಟ್ಯಾಂಕ್‌ ಬಂಡ್‌ ರೋಡ್‌)ಯ ಪಕ್ಕದಲ್ಲಿ ಪ್ರಮುಖ ಶಿವಶರಣರು, ಮಹಾತ್ಮರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುವುದು. ವಿವಿಧ ಸಮುದಾಯದವರು ಮನವಿ ಸಲ್ಲಿಸಿದರೆ ಆ ಸಮುದಾಯದ ಮಹಾತ್ಮರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುವುದು. ವೃತ್ತಗಳಲ್ಲಿ ಪ್ರತಿಮೆಗಳನ್ನು ಇರಿಸದಂತೆ ಸುಪ್ರೀಂಕೋರ್ಟ್‌ನ ಆದೇಶವಿದ್ದು, ಹೀಗಾಗಿ, ಒಟ್ಟಿಗೇ ಒಂದೇ ಸ್ಥಳದಲ್ಲಿ ಪ್ರತಿಮೆಗಳು ಬರಲಿವೆ ಎಂದು ಶಾಸಕರು ಹೇಳಿದರು.

ನಗರಕ್ಕೆ ನೀರು ಪೂರೈಸುತ್ತಿದ್ದ ಬೋಸಗಾ ಕೆರೆಯಲ್ಲಿ ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿಅಮ್ಯೂಸ್‌ಮೆಂಟ್‌ ಪಾರ್ಕ್ ಆರಂಭಿಸುವ ಚಿಂತನೆಯೂ ಇದೆ. ಈ ಕೆರೆಯ ಹೂಳು ತೆಗೆದು ಅದನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT