ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: 24ರಿಂದ ಕಲ್ಯಾಣ ಕರ್ನಾಟಕ‌ ಉತ್ಸವ

ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜನೆ
Last Updated 4 ಫೆಬ್ರುವರಿ 2023, 14:11 IST
ಅಕ್ಷರ ಗಾತ್ರ

ಕಲಬುರಗಿ: ‘ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಫೆಬ್ರುವರಿ 24ರಿಂದ 26ರ ತನಕ ಮೂರು ದಿನಗಳ ಕಾಲ ಕಲ್ಯಾಣ ಕರ್ನಾಟಕ ಉತ್ಸವ ಆಯೋಜಿಸಲಾಗುವುದು’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.

‘ಉತ್ಸವದಲ್ಲಿ ಕಲಬುರಗಿ ಸೇರಿದಂತೆ ಯಾದಗಿರಿ, ಬೀದರ್‌, ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಕಲಾವಿದರಿಗೆ ಅವಕಾಶ ನೀಡಲಾಗುವುದು. ಜೊತೆಗೆ ಅಂತರರಾಜ್ಯ ಕಲಾವಿದರೂ ಭಾಗವಹಿಸ‌ಲಿದ್ದಾರೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಹಂಪಿ ಉತ್ಸವ, ಚಿಕ್ಕಬಳ್ಳಾಪುರ ಉತ್ಸವ ಹಾಗೂ ಬೀದರ್‌ ಉತ್ಸವದ ರೀತಿಯಲ್ಲಿ ಬೃಹತ್‌ ವೇದಿಕೆಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನೂ ಆಯೋಜಿಸಲಾಗುವುದು. ಉತ್ಸವದ ಯಶಸ್ವಿಗಾಗಿಯೇ ಈಗಾಗಲೇ ‌ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫ್‌ರೆನ್ಸ್‌ ಮೂಲಕ ಸಭೆ ನಡೆಸಿ, ಚರ್ಚಿಸಲಾಗಿದೆ. ಜೊತೆಗೆ ವಿವಿಧ ಇಲಾಖೆಗಳ ಅಧಿಕಾರಿಗಳ ನೇತೃತ್ವದಲ್ಲಿ 20ಕ್ಕೂ ಅಧಿಕ ಸಮಿತಿಗಳನ್ನು ರಚಿಸಲಾಗಿದೆ‘ ಎಂದು ತಿಳಿಸಿದರು.

‘ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್‌ ಸಭಾಂಗಣದಲ್ಲಿ ಸಾಂಸ್ಕೃತಿಕ ಮತ್ತು ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು‌‘ ಎಂದರು.

ಉತ್ಸವ, ಮೆರವಣಿಗೆ ಸಂಭ್ರಮ: ‘ಮೂರು ದಿನಗಳ ಉತ್ಸವದಲ್ಲಿ ಗಾಳಿಪಟ ಉತ್ಸವ ನಡೆಯಲಿದೆ. 75ಕ್ಕೂ ಅಧಿಕ ಜಾನಪದ ಕಲಾತಂಡಗಳ ಮೆರವಣಿಗೆ. 8ರಿಂದ 16 ವಯಸ್ಸಿನ ಒಳಗಿನ ಮಕ್ಕಳ ಉತ್ಸವ ಆಯೋಜಿಸಲಾಗುವುದು. ಇದರಲ್ಲಿ ಮಕ್ಕಳಿಂದ ಸಂಗೀತ, ನೃತ್ಯ, ನಾಟಕ, ಸ್ಥಳದಲ್ಲಿಯೇ ಚಿತ್ರಕಲೆ ಬಿಡಿಸುವ ಸ್ಪರ್ಧೆ ನಡೆಯಲಿದೆ. ಪುಸ್ತಕ ಪ್ರದರ್ಶನ, ಆಹಾರ ಮೇಳ, ಶ್ವಾನಗಳ ಪ್ರದರ್ಶನ, ಫಲಪುಷ್ಪ ಪ್ರದರ್ಶನ. ಮಹಿಳೆಯರ ಉತ್ಸವ ನಡೆಯಲಿದೆ. ಇದರಲ್ಲಿ ಮಹಿಳೆಯರ ಗಾಯನ, ಚಿತ್ರಕಲೆ ಪ್ರದರ್ಶನ, ರಂಗೋಲಿ ಸ್ಪರ್ಧೆ ಇರುತ್ತದೆ. ಇದರಲ್ಲಿ ವಿಜೇತರಾದ ಮಹಿಳೆಯರಿಗೆ ‘ಮಿಸ್‌ ಕಲ್ಯಾಣ ಕರ್ನಾಟಕ‘, ‘ಮಿಸ್‌ ಕಲಬುರಗಿ’ ಪ‍್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು‘ ಎಂದು ಕೆಕೆಆರ್‌ಡಿಬಿ ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ. ಮಾಹಿತಿ ನೀಡಿದರು.

‘ಚಿತ್ರಗೀತೆಗಳ ಗಾಯನ, ಶಾಸ್ತ್ರೀಯ ಸಂಗೀತ– ನೃತ್ಯ, ಜಾನಪದ ಗಾಯನ, ಸೂಫಿ ಗಾಯನ ಕಾರ್ಯಕ್ರಮವನ್ನೂ ಆಯೋಜಿಸಲಾಗುತ್ತದೆ. ಹೆಲಿಕಾಪ್ಟರ್‌ ಪ್ರದರ್ಶನವೂ ಆಕರ್ಷಕವಾಗಿರುತ್ತದೆ. ಜೊತೆಗೆ ಅಪ್ಪನ ಕೆರೆಯಲ್ಲಿ ಬೋಟ್‌ಗಳ ಪ್ರದರ್ಶನ, ಜಲಕ್ರೀಡೆಗಳು ಕೂಡ ನಡೆಯಲಿವೆ‘ ಎಂದೂ ಮಾಹಿತಿ ನೀಡಿದರು.

ಕೆಕೆಆರ್‌ಡಿಬಿ ಉಪ ಕಾರ್ಯದರ್ಶಿ ಆನಂದ ಪ್ರಕಾಶ ಮೀನಾ, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ, ಮಂಡಳಿಯ ಜಂಟಿ ಕಾರ್ಯದರ್ಶಿ ಪ್ರವೀಣಪ್ರಿಯಾ, ಹಣಕಾಸು ನಿಯಂತ್ರಕರಾದ ಅಕ್ಕಮಹಾದೇವಿ ಗೋಷ್ಠಿಯಲ್ಲಿ ಇದ್ದರು.

₹ 5 ಕೋಟಿ ವೆಚ್ಚದಲ್ಲಿ ಉತ್ಸವ ಆಯೋಜನೆ

‘ಕಲ್ಯಾಣ ಕರ್ನಾಟಕದ ವಿಶೇಷ ಅನುದಾನದಡಿಯ ₹ 5 ಕೋಟಿ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಯೋಜಿಸಲಾಗುತ್ತದೆ. ಇದಕ್ಕಾಗಿ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಪ್ಪಿಗೆಯನ್ನೂ ಸೂಚಿಸಿದ್ದಾರೆ‘ ಎಂದು ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.

‘ಉತ್ಸವದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಯೋಜನೆಗಳ ಮಾಹಿತಿ ನೀಡುವುದಕ್ಕಾಗಿಯೇ ವಿವಿಧ ಇಲಾಖೆಗಳಿಂದ ಮಳಿಗೆಗಳನ್ನೂ ತೆರೆಯಲಾಗುವುದು‘ ಎಂದೂ ಹೇಳಿದರು.

‘ಫೆ.26ರಂದು ಉತ್ಸವದ ಸಮಾರೋಪ ನಡೆಯಲಿದೆ. ಮೂರು ದಿನಗಳ ಉತ್ಸವದಲ್ಲಿ ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ. ಉತ್ಸವದ ಯಶಸ್ವಿಗಾಗಿ ಸಾರ್ವಜನಿಕರು ಕೆಕೆಆರ್‌ಡಿಬಿ ಕಚೇರಿಗೆ ಭೇಟಿ ನೀಡಿ, ತಮ್ಮ ಸಲಹೆ ಸೂಚನೆಗಳನ್ನು ನೀಡಬಹುದು‘ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT