ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಜಿಲ್ಲೆಯ 9 ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಗೆ: ಕನ್ಹಯ್ಯ

ಕಾಂಗ್ರೆಸ್ ಯುವ ಮುಖಂಡ ಕನ್ಹಯ್ಯ ಕುಮಾರ್ ಪತ್ರಿಕಾಗೋಷ್ಠಿ
Published 5 ಮೇ 2023, 14:34 IST
Last Updated 5 ಮೇ 2023, 14:34 IST
ಅಕ್ಷರ ಗಾತ್ರ

ಕಲಬುರಗಿ: ’ರಾಜ್ಯದ ಜನತೆ ಈ ಬಾರಿ ಬಿಜೆಪಿ ಸರ್ಕಾರದ ದುರಾಡಳಿತದಿಂದ ರೋಸಿ ಹೋಗಿದ್ದು, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸಲಿದೆ. ಕಲಬುರಗಿ ಜಿಲ್ಲೆಯ ಎಲ್ಲ ಒಂಬತ್ತು ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ’ ಎಂದು ಕಾಂಗ್ರೆಸ್ ಯುವ ಮುಖಂಡ ಕನ್ಹಯ್ಯ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾಮಗಾರಿಗಳ ಬಿಲ್ ಮಂಜೂರು ಮಾಡಿಸಿಕೊಳ್ಳಬೇಕಾದರೆ 40 ಪರ್ಸೆಂಟ್ ಕಮಿಷನ್ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಪತ್ರ ಬರೆದರೂ ಮೋದಿ ಅವರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕಾಗಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಪೇ ಸಿಎಂ ಅಭಿಯಾನ ನಡೆಯಿತು. ಜನರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳಿಂದ ಬೇಸತ್ತಿದ್ದಾರೆ. ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ₹ 400 ಇದ್ದ ಅಡುಗೆ ಅನಿಲ ಸಿಲಿಂಡರ್ ಈಗ ₹ 1200ಕ್ಕೆ ಹೆಚ್ಚಳವಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ನೂರರ ಆಸುಪಾಸಿನಲ್ಲಿದೆ. ಅಡುಗೆ ಎಣ್ಣೆ ಸೇರಿದಂತೆ ಗೃಹಬಳಕೆಯ ವಸ್ತುಗಳು ವಿಪರೀತ ಏರಿಕೆಯಾಗಿವೆ. ಹೀಗಾಗಿ, ಈ ಬಾರಿ ಜನವಿರೋಧಿ ಬಿಜೆಪಿ ಸರ್ಕಾರವನ್ನು ಕಿತ್ತೆಸೆದು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲಿದ್ದಾರೆ. ಮೇ 10ರಂದು ಜನಾದೇಶ ಕಾಂಗ್ರೆಸ್ ಪರವಾಗಿ ಇರಲಿದೆ’ ಎಂದರು.

’ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸಂವಿಧಾನ ವಿರೋಧಿ ಕೆಲಸ ಮಾಡುವ ಸಂಘಟನೆಗಳನ್ನು ನಿಷೇಧಿಸುವ ಅಂಶಗಳಿವೆ. ಇದರಲ್ಲಿ ತಪ್ಪೇನಿದೆ? ದೇವರ ಹೆಸರಿನಲ್ಲಿ ಸಂಘಟನೆ ಇದ್ದರೆ ಅವರು ಮಾಡುವ ಕೃತ್ಯಗಳನ್ನು ಸಹಿಸಿಕೊಳ್ಳಬೇಕೇ’ ಎಂದು ಪ್ರಶ್ನಿಸಿದರು.

‘ನನ್ನ ಹೆಸರು ಕನ್ಹಯ್ಯಕುಮಾರ್. ಕೃಷ್ಣನ ಹೆಸರಿಟ್ಟುಕೊಂಡಿದ್ದೇನೆ ಎಂದು ನಾನು ಅಪರಾಧ ಮಾಡಿದರೆ ನನ್ನ ವಿರುದ್ಧ ತನಿಖೆ ನಡೆಸುವುದಿಲ್ಲವೇ? ನಾಥೂರಾಮನ ಹೆಸರಲ್ಲಿ ರಾಮ ಇದೆ ಎಂಬ ಕಾರಣಕ್ಕೆ ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಅವನನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡಲಾಯಿತೇ? ವ್ಯಕ್ತಿ ತಪ್ಪು ಮಾಡಿದರೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಬೇಕಾಗುತ್ತದೆ. ಹೀಗಾಗಿ, ಹನುಮಂತನ ಹೆಸರಿಟ್ಟುಕೊಂಡ ಮಾತ್ರ ಬಜರಂಗದಳ ತಪ್ಪು ಮಾಡಿದರೆ ಶಿಕ್ಷೆಯಿಂದ ವಿನಾಯಿತಿ ಸಿಗುವುದಿಲ್ಲ’ ಎಂದು ಸಮರ್ಥಿಸಿಕೊಂಡರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಪ್ರಧಾನ ಕಾರ್ಯದರ್ಶಿ ಡಾ. ಕಿರಣ ದೇಶಮುಖ, ರಾಜಗೋಪಾಲರೆಡ್ಡಿ ಗೋಷ್ಠಿಯಲ್ಲಿದ್ದರು.

ಉಕ್ರೇನ್–ರಷ್ಯಾ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಸಿಲುಕಿದ್ದ ಭಾರತೀಯರನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕರೆ ಮಾಡಿ ನಿಲ್ಲಿಸಿದರಂತೆ. ಮಣಿಪುರದ ಹಿಂಸಾಚಾರವನ್ನು ನಿಲ್ಲಿಸಲು ಏಕೆ ಆಗುತ್ತಿಲ್ಲ?
ಕನ್ಹಯ್ಯಕುಮಾರ್ ಕಾಂಗ್ರೆಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT