ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈತ ಹೋರಾಟ, ಅಧಿಕಾರಿಗಳ ಕಾಳಜಿಯ ಫಲ: ಸಚಿವ ಪ್ರಿಯಾಂಕ್ ಖರ್ಗೆ

ದೋಷಮುಕ್ತ 513 ಪಹಣಿ ಪತ್ರಗಳ ವಿತರಣೆ: ಸಚಿವರ ಮೆರವಣಿಗೆ
Published : 14 ಆಗಸ್ಟ್ 2024, 5:19 IST
Last Updated : 14 ಆಗಸ್ಟ್ 2024, 5:19 IST
ಫಾಲೋ ಮಾಡಿ
Comments

ವಾಡಿ: ‘ಸುಮಾರು 30 ವರ್ಷಗಳಿಂದ ಹಲಕರ್ಟಿ ಗ್ರಾಮದ ರೈತರಿಗೆ ತಲೆನೋವಾಗಿದ್ದ ಪಹಣಿ ಸಮಸ್ಯೆಯನ್ನು ಇತ್ಯರ್ಥ ಪಡಿಸುವಲ್ಲಿ ರೈತರ ಹೋರಾಟ ಹಾಗೂ ಕಂದಾಯ ಅಧಿಕಾರಿಗಳ ಕಾಳಜಿ ಜತೆಗೆ ನಮ್ಮದೇ ಸರ್ಕಾರ ಇರುವುದರಿಂದ ಇದು ಸಾಧ್ಯವಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಎಂ. ಖರ್ಗೆ ಹೇಳಿದರು.

ಹಲಕರ್ಟಿ ಗ್ರಾಮದಲ್ಲಿ ಕಂದಾಯ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ದೋಷಮುಕ್ತ 513 ಪಹಣಿ ಪತ್ರಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ನನಗೆ ರೈತರ ಕಷ್ಟದ ಅರಿವಿದೆ. ಪಹಣಿ ಸಮಸ್ಯೆ ಪರಿಹಾರಕ್ಕೆ ಕಳೆದ ಬಾರಿ ಪ್ರಯತ್ನಿಸಿದ್ದೆ. ಆದರೆ ಬಿಜೆಪಿ ಸರ್ಕಾರದಲ್ಲಿ ಅದು ಸಾಧ್ಯವಾಗಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕಂದಾಯ ಇಲಾಖೆ ಅಧಿಕಾರಿಗಳು ಅತ್ಯಂತ ಶ್ರಮವಹಿಸಿ ಕೆಲಸ ಮಾಡಿದ್ದು ಪಹಣಿ ಸಮಸ್ಯೆ ಪರಿಹಾರ ಕಂಡಿದೆ. ನನ್ನ ಕ್ಷೇತ್ರದಲ್ಲಿ ರೈತರಿಗೆ ಸಂಬಂಧಿಸಿದ ಯಾವುದೇ ಕೆಲಸ ಇರಲಿ ಅಧಿಕಾರಿಗಳು ಸತಾಯಿಸದೆ ಶೀಘ್ರ ಮುಗಿಸಿಕೊಡಬೇಕು ಎಂದು ಈಗಾಗಲೇ ಸೂಚಿಸಿದ್ದೇನೆ’ ಎಂದರು.

‘ಇನ್ನೂ ನಾಲ್ಕು ವರ್ಷ ನಮ್ಮ ಸರ್ಕಾರಕ್ಕೆ ಯಾವುದೇ ಅಡೆತಡೆ ಇಲ್ಲದ ಕಾರಣ ಸಂಪೂರ್ಣ ಅಭಿವೃದ್ಧಿ ಕಡೆ ಗಮನ ಹರಿಸುತ್ತೇವೆ. ಈ ಅವಧಿಯಲ್ಲಿ ಚಿತ್ತಾಪುರ ಚಿತ್ರಣ ಸಂಪೂರ್ಣ ಬದಲಾಯಿಸುತ್ತೇನೆ. ಕಲ್ಯಾಣ ಪಥ ಪ್ರಗತಿಪಥ ಯೋಜನೆಯಲ್ಲಿ ರಸ್ತೆಗಳ ಅಭಿವೃದ್ಧಿಗೆ ನಾಂದಿ ಹಾಡುತ್ತೇನೆ. ಜಿಲ್ಲೆಯಲ್ಲಿ ಪಹಣಿಗೆ ಆಧಾರ್ ಲಿಂಕ್ ಮಾಡುವ ಅಭಿಯಾನಕ್ಕೆ ತಕ್ಷಣ ಚಾಲನೆ ನೀಡಲಾಗುವುದು. ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಯೇ ನಮ್ಮ ಸರ್ಕಾರಕ್ಕೆ ಬುನಾದಿಯಾಗಿದ್ದು ಜನಪರ ಆಡಳಿತ ನೀಡುತ್ತಿದ್ದೇವೆ’ ಎಂದು ಹೇಳಿದರು.

ಪಹಣಿಗಳಲ್ಲಿನ ಹೆಸರುಗಳ ಸರಿಪಡಿಸುವಿಕೆಗೆ ಕೈಗೊಂಡ ಕ್ರಮಗಳನ್ನು ಜಿಲ್ಲಾಧಿಕಾರಿ ಫೌಜಿಯಾ ತರನ್ಮುಮ್ ಎಳೆಎಳೆಯಾಗಿ ಬಿಡಿಸಿ‌ ಹೇಳಿದರು. ‘ಗ್ರಾಮದ ರೈತರ ಸಮಸ್ಯೆಗೆ ಸಂಬಂಧಿಸಿದಂತೆ ಅತ್ಯಂತ ನಾಜೂಕಾಗಿ ಕ್ರಮ ಕೈಗೊಂಡು ಕಂದಾಯ‌, ಸರ್ವೆ ಇಲಾಖೆಗಳ ಹಿರಿಯ ಅಧಿಕಾರಿಗಳ ಸಹಕಾರದಿಂದ ಹಾಗೂ ಮುಖ್ಯವಾಗಿ ಸಚಿವರ ವಿಶೇಷ ಆಸಕ್ತಿ ಹಾಗೂ ಸೂಕ್ತ ಮಾರ್ಗದರ್ಶನದಲ್ಲಿ ಇದೆಲ್ಲ ಸಾಧ್ಯವಾಗಿದೆ. ಇದು ನನ್ನ ವೃತ್ತಿ ಜೀವನದಲ್ಲಿ‌‌ ನೆನಪಿನಲ್ಲಿರುವಂಥ ಕ್ರಮವಾಗಿದೆ’ ಎಂದರು.

513 ರೈತರ ಪೈಕಿ 15 ರೈತರಿಗೆ ಸಾಂಕೇತಿಕವಾಗಿ ಪಹಣಿಗಳನ್ನು ವಿತರಿಸಲಾಯಿತು.

ಹೆದ್ದಾರಿ ಮುಖ್ಯರಸ್ತೆಯಿಂದ ವೇದಿಕೆವರೆಗೂ ಹೂವುಗಳಿಂದ‌ ಅಲಂಕರಿಸಿದ ಎತ್ತಿನ ಗಾಡಿಯಲ್ಲಿ ಸಚಿವರನ್ನು ಮೆರವಣಿಗೆ ಮೂಲಕ ಗ್ರಾಮಸ್ಥರು ಕರೆತಂದರು. ಕಟ್ಟಿಮನಿ ಹಿರೇಮಠದ ಮುನೀಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ತಹಶೀಲ್ದಾರ್ ಅಮರೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ ಸಿಇಒ ಭಂವರಸಿಂಗ್ ಮೀನಾ, ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ಡಿಎಸ್‌ಪಿ ಶಂಕರಗೌಡ ಪಾಟೀಲ್, ಗ್ರಾ.ಪಂ ಅಧ್ಯಕ್ಷ ರಾಕೇಶ್ ಸಿಂಧೆ, ರೈತ ಸಂಘಟನೆ ತಾಲ್ಲೂಕು ಕಾರ್ಯದರ್ಶಿ ಶಿವಕುಮಾರ ಆಂದೋಲ, ಭೀಮಣ್ಣ ಸಾಲಿ, ಶಿವಾನಂದ ಪಾಟೀಲ, ಅಜೀಜ್ ಸೇಠ, ಸಯ್ಯದ್ ಮಹೆಬೂಬ್ ಸಾಬ್, ನಾಗರೆಡ್ಡಿ ಪಾಟೀಲ ಕರದಾಳ, ಶ್ರೀನಿವಾಸ ಸಗರ, ಜಗದೀಶ್ ಸಿಂಧೆ, ವೀರಣ್ಣಗೌಡ‌ ಪರಸರೆಡ್ಡಿ, ಸಿದ್ದು ಮುಗುಟಿ, ರಾಘವೇಂದ್ರ ಅಲ್ಲಿಪುರ ಸೇರಿದಂತೆ ಹಲವರಿದ್ದರು.

ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು
ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT