ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಇದ್ದೂ ಇಲ್ಲದಂತಾದ ಮಾಹಿತಿ ಆಯೋಗ ಪೀಠ

ಹಸ್ತಾಂತರವಾಗದ ಕಡತಗಳು: ಕಲಬುರಗಿ ಆಯುಕ್ತರು ಬೆಂಗಳೂರಿನಲ್ಲೇ ಕುಳಿತು ಕೆಲಸ
Published 4 ಜೂನ್ 2024, 0:22 IST
Last Updated 4 ಜೂನ್ 2024, 0:22 IST
ಅಕ್ಷರ ಗಾತ್ರ

ಕಲಬುರಗಿ: ಈ ವರ್ಷದ ಆರಂಭದಲ್ಲಿ ಶುರುವಾದ ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠದ ಕಚೇರಿಯು ಆಡಳಿತಾತ್ಮಕ ಸಮಸ್ಯೆ, ಸಿಬ್ಬಂದಿ ಕೊರತೆ, ಕೇಂದ್ರ ಕಚೇರಿಯಿಂದ ಹಸ್ತಾಂತರವಾಗದ ಕಡತಗಳು, ಅಧಿಕಾರಿಗಳ ನಡುವಿನ ಆಂತರಿಕ ಸಂಘರ್ಷದಿಂದಾಗಿ ಇದ್ದೂ ಇಲ್ಲದಂತಾಗಿದೆ.

ಕಲಬುರಗಿ ವಿಭಾಗದ ಜನರು ಆಯೋಗದ ಪ್ರಧಾನ ಪೀಠ ಇರುವ ಬೆಂಗಳೂರಿಗೆ ಅಲೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕಲಬುರಗಿಯಲ್ಲೇ 2024ರ ಜನವರಿ 1ರಿಂದ ಪೀಠ ಆರಂಭವಾಗಿತ್ತು. ಪೀಠದ ಕಚೇರಿ ಆರಂಭಗೊಂಡು ಐದು ತಿಂಗಳು ಕಳೆದರೂ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ.

ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿನ ಅವ್ಯವಹಾರಗಳ ವಿರುದ್ಧದ ಆರೋಪಗಳ ಸಂಬಂಧ ಮಾಹಿತಿ ನೀಡಲು ಅಧಿಕಾರಿಗಳು ಅರ್ಜಿದಾರರಿಗೆ ನಿರಾಕರಿಸಿದ್ದಲ್ಲಿ ಅದರ ವಿರುದ್ಧ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಆದರೆ, ಕಲಬುರಗಿ ಪೀಠದ ಆಯೋಗವು ಗೊಂದಲದ ಗೂಡಾಗಿದೆ.

ನಗರದ ಮಹಲ್–ಇ –ಶಾಹಿ ಅತಿಥಿಗೃಹದ ಆವರಣದಲ್ಲಿನ ಪೀಠದ ಕಚೇರಿಯಲ್ಲಿ ಕುಳಿತು ಕೆಲಸ ಮಾಡಬೇಕಿದ್ದ ಪೀಠದ ಆಯುಕ್ತ ರವೀಂದ್ರ ಗುರುನಾಥ ಡಾಕಪ್ಪ ಅವರು ಬೆಂಗಳೂರಿನ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಅರ್ಜಿದಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ ಜತೆಗೆ ಮಾತನಾಡಿದ ರವೀಂದ್ರ ಅವರು, ‘ಕಲಬುರಗಿ ಪೀಠಕ್ಕೆ ಪೂರ್ಣಪ್ರಮಾಣದ ಆಡಳಿತಾತ್ಮಕ ಹುದ್ದೆಗಳು ನೇಮಕವಾಗಿಲ್ಲ. ಪ್ರಕರಣಗಳಿಗೆ ಸಂಬಂಧಿಸಿದ ತಿಳಿವಳಿಕೆ ಪತ್ರ ಹೊರಡಿಸುವ ಅಧಿಕಾರ ಆಯುಕ್ತರಿಗೆ ಇಲ್ಲ. ಅದನ್ನು ಅಧೀನ ಕಾರ್ಯದರ್ಶಿ ಅಥವಾ ಸೆಕ್ಷನ್ ಅಧಿಕಾರಿಗಳು ಹೊರಡಿಸಬೇಕು. ಕಲಬುರಗಿ ಪೀಠಕ್ಕೆ ಸೆಕ್ಷನ್ ಅಧಿಕಾರಿ ಹುದ್ದೆ ಸಹ ಮಂಜೂರು ಆಗಿಲ್ಲ. ಇದರ ಜತೆಗೆ ಬಹುತೇಕ ಕಡತಗಳು ಬೆಂಗಳೂರಿನಲ್ಲಿವೆ. ಹೀಗಾಗಿ, ಕೆಲವು ಆಡಳಿತಾತ್ಮಕ ಕೆಲಸಕ್ಕಾಗಿ ಬೆಂಗಳೂರಿನ ಕಚೇರಿಯಲ್ಲಿ ಇದ್ದೇನೆ’ ಎಂದರು.

‘ಪ್ರಕರಣದ ವಿಚಾರಣೆಯ ಬಳಿಕ ಅರ್ಜಿದಾರ, ಮೊದಲನೇ ಮತ್ತು ಎರಡನೇ ಪ್ರತಿವಾದಿಗಳಿಗೆ ತೀರ್ಪು ಕಳುಹಿಸಬೇಕು. ಅದಕ್ಕೆ ಪರಿಣತ ತೀರ್ಪು ಬರಹಗಾರರು, ಶೀಘ್ರಲಿಪಿಗಾರರು ಮತ್ತು ಬೆರಳಚ್ಚುಗಾರರು ಬೇಕು. ನಮ್ಮಲ್ಲಿ ಅಂತಹ ಪರಿಣತರು ಇಲ್ಲ. ಪ್ರತಿ ಬಾರಿ ವಿಚಾರಣೆಯ ಬಳಿಕ ಬೆಂಗಳೂರಿಗೆ ಕಳುಹಿಸಬೇಕು. ಅರ್ಜಿಯ ಸ್ವೀಕಾರ ಮತ್ತು ತೀರ್ಪು ಪ್ರಕಟಣೆಗೆ ಬೆಂಗಳೂರಿನ ಕಚೇರಿಯನ್ನೇ ಅವಲಂಬಿಸುವಂತೆ ಆಗಿದೆ’ ಎಂದು ಹೇಳಿದರು.

‘ಆಯೋಗದಲ್ಲಿನ ಕೆಲವು ಅಧಿಕಾರಿಗಳು ತಾವು ಮಾಡಿದ ತಪ್ಪುಗಳನ್ನು ಮುಚ್ಚಿ ಹಾಕಲು ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಿದ್ದಾರೆ’ ಎಂದು ದೂರಿದರು.

ಬೆಂಗಳೂರಿನಲ್ಲೇ ಅರ್ಜಿಗಳ ಪರಿಶೀಲನೆ
‘ಕಲಬುರಗಿ ಪೀಠದಲ್ಲಿ ತೀರ್ಪು ಬರಹಗಾರರು ಶೀಘ್ರಲಿಪಿಗಾರರು ಬೆರಳಚ್ಚುಗಾರರು ದತ್ತಾಂಶ ನಮೂದಿಸುವವರು ಸಹಾಯಕ ನೌಕರರ ಹುದ್ದೆಗಳಿವೆ. ಆದರೆ ಬಹತೇಕರು ಹೊಸಬರಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ ತಿಳಿಸಿದರು. ‘ಸ್ವೀಕೃತ ಅರ್ಜಿಗಳನ್ನು ಪರಿಶೀಲಿಸುವ ಸೆಕ್ಷನ್ ಅಧಿಕಾರಿಗಳೇ ಇಲ್ಲ. ಹೀಗಾಗಿ ಕಲಬುರಗಿ ಪೀಠದ ಕಚೇರಿಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳು ಬೆಂಗಳೂರಿನ ಕಚೇರಿಯಲ್ಲಿ ಪರಿಶೀಲನೆಗೆ ಒಳಪಟ್ಟು ಅಲ್ಲಿಂದ ವಾಪಸ್ ಬರುತ್ತಿವೆ. ಅವು ಬರುವವರೆಗೂ ನಾವು ಕಾಯಬೇಕು. ಕಲಬುರಗಿಯಲ್ಲಿ ಕಚೇರಿ ಇದ್ದೂ ಇಲ್ಲದಂತೆ ಆಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT