ಮಂಗಳವಾರ, ಅಕ್ಟೋಬರ್ 27, 2020
19 °C
ನೀರಿನಿಂದಾವೃತವಾದ ಬೆಳೆಗಳು; ಸಂಪರ್ಕ ಕಳೆದುಕೊಂಡ ಪಟ್ಟಣಗಳು

ಕಲಬುರ್ಗಿ: ಮಹಾಮಳೆಗೆ ಕೊಚ್ಚಿಹೋದ ಬದುಕು!

ಮನೋಜಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇತ್ತೀಚಿನವರೆಗೂ ಜಿಲ್ಲೆಯ ಜನತೆಯಲ್ಲಿ ಸಂಭ್ರಮ ತಂದಿದ್ದ ಮಳೆ, ಇದೀಗ ಕೆಲ ತಾಲ್ಲೂಕುಗಳ ಜನಜೀವನವನ್ನು ತೊಂದರೆಗೆ ಸಿಲುಕಿಸಿದೆ. ನಿತ್ಯವೂ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವು ಗ್ರಾಮ, ಪಟ್ಟಣಗಳು ಸಂಪರ್ಕ ಕಳೆದುಕೊಂಡಿದ್ದು, ಸುತ್ತಿ ಬಳಸಿ ಪ್ರಯಾಣಿಸಬೇಕಾಗಿದೆ.

ಭಾರಿ ಮಳೆಗೆ ಸೇತುವೆಗಳು ಮುಳುಗಿ ರಸ್ತೆ ಸಂಪರ್ಕ ಬಂದ್ ಆಗಿದ್ದರಿಂದ ಸೇಡಂ ತಾಲ್ಲೂಕಿನ ಹಲವು ವಿದ್ಯಾರ್ಥಿಗಳು ಪಿಯು ಪೂರಕ ಪರೀಕ್ಷೆಯನ್ನು ಬರೆಯಲು ಸಾಧ್ಯವಾಗಿಲ್ಲ. ಚಿಂಚೋಳಿಯಲ್ಲಿ 17.8 ಸೆಂಟಿ ಮೀಟರ್ ಮಳೆ ಸುರಿದಿದ್ದರೆ, ಸೇಡಂನಲ್ಲಿ 13.3 ಸೆಂಟಿ ಮೀಟರ್ ಭಾರಿ ಮಳೆ ಶುಕ್ರವಾರ ಬೆಳಗಿನ ಜಾವ ಸುರಿದಿದೆ. ಕಟಾವಿಗೆ ಬಂದಿದ್ದ ಹೆಸರು, ಉದ್ದು ಬೆಳೆಗಳು ಹಾಳಾಗುವ ಮೂಲಕ ರೈತರ ಕನಸು ನುಚ್ಚುನೂರಾಗಿದೆ.

ಮಳೆ ಪೀಡಿತ ಗುಂಡಗುರ್ತಿ, ಮಾಡಬೂಳ, ಮಳಖೇಡ, ದಂಡೋತಿ, ಕೋರವಾರ ಬಳಿಯ ವಚ್ಚಾ ಗ್ರಾಮಗಳಿಗೆ ಶುಕ್ರವಾರ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಗಿಣಾ ನದಿ ಹಾಗೂ ಹಲವು ಹಳ್ಳಕೊಳ್ಳಗಳು ಭರ್ತಿಯಾಗಿ ಬಿರುಸಿನಿಂದ ಹರಿಯುತ್ತಿರುವ ನೋಟ ಕಂಡು ಬಂತು.

ಗುಂಡಗುರ್ತಿ ಬಳಿಯ ಸೇತುವೆ ಕೆಳಭಾಗದಲ್ಲಿ ಹರಿಯುತ್ತಿದ್ದ ಹಳ್ಳವು ಅಕ್ಕ ‍ಪಕ್ಕದ ಜಮೀನುಗಳಲ್ಲಿನ ತೊಗರಿ, ಉದ್ದು, ಬಾಳೆ ಗಿಡಗಳು ನೀರಿನಿಂದ ಆವೃತವಾಗಿದ್ದವು. ಮುಳ್ಳು ಕಂಟಿಗಳು ನೀರಿನ ಸೆಳೆತಕ್ಕೆ ಕಿತ್ತುಕೊಂಡು ದಿಕ್ಕಾಪಾಲಾಗಿ ಹೋಗಿದ್ದವು. ಮಳಖೇಡ–ಸಮಖೇಡ ತಾಂಡಾ ಮಧ್ಯದಲ್ಲಿ ಕಾಗಿಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಪಕ್ಕದಲ್ಲಿರುವ ಉತ್ತರಾಧಿಮಠದ ಬಹುತೇಕ ಭಾಗ ಜಲಾವೃತವಾಗಿದೆ. ಚಿಂಚೋಳಿ ತಾಲ್ಲೂಕಿನ ಹಲವು ಜಲಾಶಯಗಳಿಂದ ನೀರನ್ನು ಬಿಡುಗಡೆ ಮಾಡಿದ್ದರಿಂದ ಹಾಗೂ ಕಾಗಿಣಾ ನದಿ ಪಾತ್ರದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಕಾಗಿಣಾ ಮೈದುಂಬಿಕೊಂಡು ಹರಿಯುತ್ತಿದೆ. ನಾಲ್ಕು ವರ್ಷಗಳ ಬಳಿಕ ಸತತ ಮೂರು ದಿನವೂ ಮಳಖೇಡ, ಟೆಂಗಳಿ ಹಾಗೂ ದಂಡೋತಿ ಗ್ರಾಮದ ಬಳಿಯ ಸೇತುವೆಗಳು
ಮುಳುಗಡೆಯಾಗಿವೆ.

ಕೋವಿಡ್‌ ನಿಯಂತ್ರಣದಲ್ಲಿ ತೊಡಗಿರುವ ಜಿಲ್ಲಾಡಳಿತಕ್ಕೆ ಅತಿವೃಷ್ಟಿಯನ್ನು ನಿಭಾಯಿಸುವುದು ಮತ್ತೊಂದು ಸವಾಲಾಗಿದೆ. ಹಲವು ದಿನಗಳ ಬಳಿಕ ಅಖಾಡಕ್ಕಿಳಿದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಕಮಲಾಪುರ ಹಾಗೂ ಶಹಾಬಾದ್‌ ತಾಲ್ಲೂಕಿನ ನೆರೆ ಪೀಡಿತ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಸ್ಥಿತಿಯನ್ನು ಅರಿತುಕೊಂಡರು.

ಲಾರಿ ಚಾಲಕರಿಗೆ ದುಃಸ್ವಪ್ನ: ಮಹಾರಾಷ್ಟ್ರದ ಮುಂಬೈ, ಗುಜರಾತ್‌ನ ಅಹ್ಮದಾಬಾದ್ ಸೇರಿದಂತೆ ಹಲವು ನಗರಗಳಿಂದ ಸರಕುಗಳನ್ನು ಹೊತ್ತು ತಂದಿರುವ ಲಾರಿ ಚಾಲಕರಿಗೆ ಮಳೆ ದುಃಸ್ವಪ್ನವಾಗಿ ಕಾಡುತ್ತಿದೆ. ಸೇಡಂ ಮೂಲಕ ತೆಲಂಗಾಣಕ್ಕೆ ತೆರಳಿ ಅಲ್ಲಿಂದ ಆಂಧ್ರಪ್ರದೇಶ, ಚೆನ್ನೈಗೆ ತೆರಳಬೇಕಿತ್ತು. ಆದರೆ, ಮಳಖೇಡ ಹಾಗೂ ಬಟಗೇರಾ ಗ್ರಾಮಗಳ ಬಳಿಯ ಸೇತುವೆಗಳು ಮುಳುಗಿ ಸಂಚಾರ ಸ್ಥಗಿತಗೊಂಡಿದ್ದರಿಂದ ಮೂರು ದಿನಗಳಿಂದ ಮಾಡಬೂಳ ಕ್ರಾಸ್‌ನ ಟೋಲ್‌ ಗೇಟ್‌ ಬಳಿ ಲಾರಿಗಳನ್ನು ನಿಲ್ಲಿಸಿದ್ದಾರೆ. ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಹೋಟೆಲ್ ಮಾಲೀಕರು ದುಬಾರಿ ದರಕ್ಕೆ ಊಟ ಪೂರೈಕೆ ಮಾಡುತ್ತಿದ್ದಾರೆ. ಹೆಚ್ಚು ಹಣ ಖರ್ಚು ಮಾಡಲಾಗದ ಸ್ಥಿತಿಯಲ್ಲಿರುವ ಲಾರಿ ಚಾಲಕರು, ಕ್ಲೀನರ್‌ಗಳು ತಮ್ಮೊಂದಿಗೆ ತಂದಿರುವ ಸಾಮಗ್ರಿಗಳನ್ನು ಬಳಸಿಕೊಂಡು ಅಡುಗೆ ಮಾಡಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು