ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನರೇಗಾ: ಮೊಬೈಲ್‌ನಲ್ಲೇ ಉದ್ಯೋಗಕ್ಕೆ ಬೇಡಿಕೆ ಸಲ್ಲಿಸಿ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯಿಂದ ನೂತನ ಮೊಬೈಲ್ ಆ್ಯಪ್
Last Updated 9 ಮೇ 2020, 9:32 IST
ಅಕ್ಷರ ಗಾತ್ರ

ಕಲಬುರ್ಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಅಡಿ ಉದ್ಯೋಗದ ಬೇಡಿಕೆ ಸಲ್ಲಿಸಲು ಇನ್ನು ಗ್ರಾಮ ಪಂಚಾಯಿತಿ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಇದಕ್ಕಾಗಿಯೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ‘ಕಾಯಕ ಮಿತ್ರ’ ಎಂಬ ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಿದ್ದು, ಎಷ್ಟು ದಿನ ಬೇಕೋ ಅಷ್ಟು ದಿನ ಉದ್ಯೋಗದ ಬೇಡಿಕೆ ಸಲ್ಲಿಸಬಹುದು.

ಈಮೊಬೈಲ್‌ ಅಪ್ಲಿಕೇಶನ್‌ ಅನ್ನು ಇಲಾಖೆ ವೆಬ್‌ಸೈಟ್‌ನ ಲಿಂಕ್‌ ಅಥವಾ ಗೂಗಲ್ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಕೂಲಿಕಾರರು ತಮಗೆ ಎಷ್ಟು ದಿನಗಳವರೆಗೆ ಕೆಲಸ ಬೇಕು ಎಂಬುದನ್ನು ನಮೂನೆ 6ರ ಮೂಲಕ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬೇಕಿತ್ತು. ಅದನ್ನು ಆಧರಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಎನ್‌ಎಂಆರ್‌ ತಯಾರಿಸಿ ಕೆಲಸವನ್ನು ಹಂಚಿಕೆ ಮಾಡುತ್ತಿದ್ದರು. ಈ ಅಪ್ಲಿಕೇಶನ್‌ ಪರಿಚಯಿಸಿರುವುದರಿಂದ ಪಂಚಾಯಿತಿಗೆ ತೆರಳಿ ಅರ್ಜಿ ಸಲ್ಲಿಸುವ ಕೆಲಸ ತಪ್ಪಲಿದೆ.

ಕಾರ್ಯವಿಧಾನ ಹೇಗೆ? ಕಾಯಕ ಮಿತ್ರ ಆ್ಯಪ್‌ ಡೌನ್‌ಲೋಡ್‌ ಮಾಡಿದ ಬಳಿಕ ಜಾಬ್‌ ಕಾರ್ಡ್‌ ಹೊಂದಿರುವವರು ಒಟ್ಟು ಏಳು ಹಂತಗಳ ಮಾಹಿತಿಯನ್ನು ಅಪ್‌ಲೋಡ್‌ ಮಾಡಬೇಕು.

ತಮ್ಮ ಹೆಸರು, ತಂದೆಯ ಹೆಸರು, ಮೊಬೈಲ್‌ ಸಂಖ್ಯೆ ನಮೂದಿಸಿದ ಬಳಿಕ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯಿತಿ ಮಾಹಿತಿಯನ್ನು ನೀಡಬೇಕು. ಪಂಚಾಯಿತಿ ಹೆಸರು ಕ್ಲಿಕ್‌ ಮಾಡಿದ ಬಳಿಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಾಬ್‌ ಕಾರ್ಡ್‌ ಪಡೆದವರ ಹೆಸರು ಹಾಗೂ ಅವರ ಕಾರ್ಡ್‌ ಸಂಖ್ಯೆ ಕಾಣಿಸುತ್ತವೆ.

ಅದರಲ್ಲಿ ತಮ್ಮ ಹೆಸರನ್ನು ಆಯ್ಕೆ ಮಾಡಿದರೆ ಎಷ್ಟು ದಿನಗಳವರೆಗೆ ಕೂಲಿ ಬೇಕು ಎಂಬ ಸಂದೇಶ ಬರುತ್ತದೆ. ಅಗತ್ಯವಿದ್ದಷ್ಟು ಉದ್ಯೋಗದ ದಿನಗಳನ್ನು ದಾಖಲಿಸಿದ ಬಳಿಕ ಯಾವಾಗಿನಿಂದ ಕೆಲಸ ಬೇಕು ಎಂಬುದನ್ನೂ ತಿಳಿಸಿದರೆ ಆ್ಯಪ್‌ ಮೂಲಕ ಅಷ್ಟೂ ಮಾಹಿತಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯನ್ನು ತಲುಪುತ್ತದೆ.

ವಿವರಗಳನ್ನು ಪರಿಶೀಲಿಸಿದ ಬಳಿಕ ಪಿಡಿಒ ಎನ್‌ಎಂಆರ್‌ ಸೃಷ್ಟಿಸಿ ಕೆಲಸ ಕೊಡುತ್ತಾರೆ. ಅರ್ಜಿ ಸಲ್ಲಿಸಿದ ದಿನದಿಂದ 15 ದಿನಗಳ ಒಳಗಾಗಿ ಕೆಲಸ ಕೊಡದಿದ್ದರೆ ನಿರುದ್ಯೋಗ ಭತ್ಯೆ ಕೊಡಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT