ಗುರುವಾರ , ಆಗಸ್ಟ್ 18, 2022
25 °C
ಸಚಿವ ಮುರುಗೇಶ ನಿರಾಣಿ ನೇತೃತ್ವದಲ್ಲಿ ಕೆಕೆಆರ್‌ಡಿಬಿ ಜಿಲ್ಲಾ ಸಲಹಾ ಸಮಿತಿ ಸಭೆ:

ಕಲಬುರಗಿ: ₹ 350 ಕೋಟಿ ಕ್ರಿಯಾ ಯೋಜನೆಗೆ ಅನುಮೋದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 2022–23ನೇ ಸಾಲಿಗೆ ಮೈಕ್ರೊ ಮತ್ತು ಮ್ಯಾಕ್ರೊ ಯೋಜನೆಯಡಿ ಜಿಲ್ಲೆಗೆ ಹಂಚಿಕೆಯಾದ ₹ 350.88 ಕೋಟಿ ಮೊತ್ತಕ್ಕೆ ಕ್ರಿಯಾ ಯೋಜನೆ ರೂಪಿಸಲು ಶನಿವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅಧ್ಯಕ್ಷತೆಯಲ್ಲಿ ಜರುಗಿದ ಕೆಕೆಆರ್‌ಡಿಬಿ ಜಿಲ್ಲಾ ಸಲಹಾ ಸಮಿತಿ ಅನುಮೋದನೆ ನೀಡಿತು.

ಜಿಲ್ಲೆಗೆ ಮ್ಯಾಕ್ರೊ ಯೋಜನೆಗೆ ₹ 105.26 ಕೋಟಿ ಮತ್ತು ಮೈಕ್ರೊ ಯೋಜನೆಗೆ ₹ 245.62 ಕೋಟಿ ಸೇರಿ ಒಟ್ಟು ₹ 350.88 ಕೋಟಿ ಹಂಚಿಕೆಯಾಗಿದೆ. ಮ್ಯಾಕ್ರೊ ಅನುದಾನವನ್ನು ಜಿಲ್ಲೆಯ ಎಲ್ಲಾ ಕ್ಷೇತ್ರದ ಶಾಸಕರಿಗೆ ನ್ಯಾಯಬದ್ಧವಾಗಿ ಅನುದಾನ ಹಂಚಿಕೆ ಮಾಡಲು ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಮುರುಗೇಶ ನಿರಾಣಿ ಅವರಿಗೆ ಸಭೆಯು ಸರ್ವಾನುಮತದ ಅಧಿಕಾರ ನೀಡಿತು.

ಮುರುಗೇಶ ನಿರಾಣಿ ಮಾತನಾಡಿ, ‘2022–23ನೇ ಸಾಲಿನ ಮ್ಯಾಕ್ರೊ ಅನುದಾನವನ್ನು ಎಲ್ಲಾ ಶಾಸಕರಿಗೆ ಸಮಾನವಾಗಿ ಹಂಚಿಕೆ ಮಾಡಲಾಗುವುದು. ಮೈಕ್ರೊ ಯೋಜನೆಯಡಿ ಸಾಮಾಜಿಕ ಮತ್ತು ಸಾಮಾಜಿಕೇತರ ಕ್ಷೇತ್ರಕ್ಕೆ ಖರ್ಚು ಮಾಡಲು ಜಿಲ್ಲೆಯ ಅವಿಭಜಿತ 7 ತಾಲ್ಲೂಕುಗಳಿಗೆ ಹಂಚಿಕೆಯಾದ ₹ 245.62 ಕೋಟಿ ಅನುದಾನಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯ ಶಾಸಕರು ₹ 130.89 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಪ್ರಸ್ತಾವನೆಗೆ ಮಂಡಳಿ ಈಗಾಗಲೇ ಮಂಜೂರಾತಿ ನೀಡಿದ್ದರಿಂದ ಅದಕ್ಕೆ ಸಭೆಯು ಘಟನೋತ್ತರವಾಗಿ ಮಂಜೂರಾತಿ ನೀಡಿದೆ. ಉಳಿದ ₹ 114.72 ಕೋಟಿ ಮೊತ್ತಕ್ಕೆ ಕ್ರಿಯಾ ಯೋಜನೆ ತಯಾರಿಸಲು ಸಂಬಂಧಪಟ್ಟ ಶಾಸಕರು ಕೂಡಲೇ ಕಾಮಗಾರಿಗಳ ಪಟ್ಟಿಯನ್ನು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಬೇಕು’ ಎಂದರು.

ಕೃಷಿ, ಶಿಕ್ಷಣಕ್ಕೆ ಆದ್ಯತೆ ಕೊಡಿ: ಕಲಬುರಗಿ ಜಿಲ್ಲೆ ಮಳೆಯಾಶ್ರಿತ ಪ್ರದೇಶವಾಗಿದ್ದು, ಲಭ್ಯ ನೀರನ್ನು ಸದ್ಬಳಕೆ ಮಾಡಿಕೊಂಡು ಕೃಷಿ ಇಳುವರಿ ಹೆಚ್ಚಳ ಮತ್ತು ರೈತರ ಆದಾಯ ದ್ವಿಗುಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ದೀಪದ ಕೆಳಗೆ ಕತ್ತಲೆಂಬಂತೆ ಜಲಾಶಯಗಳ ಅಕ್ಕಪಕ್ಕದಲ್ಲಿ ಭೂಮಿ ಒಣಗಿರುವುದನ್ನು ಕಲಬುರಗಿ, ಬೀದರ್ ಜಿಲ್ಲೆಯಲ್ಲಿ ಕಾಣಬಹುದಾಗಿದೆ. ಹೀಗಾಗಿ ಇಸ್ರೇಲ್ ಮಾದರಿ ಕೃಷಿ ನೀತಿ ಅಳವಡಿಸಲು ಇಸ್ರೇಲ್‍ನ ದಕ್ಷಿಣ ಭಾರತದ ಕಾನ್ಸುಲೇಟ್ ಜನರಲ್ ಅವರು ಜಿಲ್ಲೆಗೆ ಬರಲು ಒಪ್ಪಿದ್ದು, ಪ್ರಾಯೋಗಿಕವಾಗಿ ಜಿಲ್ಲೆಯ 500 ಎಕರೆ ಕೃಷಿ, ತೋಟಗಾರಿಕೆ ಪ್ರದೇಶದಲ್ಲಿ ಅದನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ಸುಧಾರಣೆಗೆ ಹೆಚ್ಚಿನ ಗಮನ ಹರಿಸಿಬೇಕಿದೆ. ರಾಜ್ಯದಲ್ಲಿ ಈ ಬಾರಿ ಅಗ್ರ ರ‍್ಯಾಂಕ್ ಪಡೆದ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಡಿಡಿಪಿಐ, ಬಿಇಒ ಅವರನ್ನು ಸಂಪರ್ಕಿಸಿ ಅಲ್ಲ ಫಲಿತಾಂಶ ಸುಧಾರಣೆಗೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಪಡೆದು ಅದನ್ನು ಇಲ್ಲಿ ಅನುಷ್ಠಾನ ಮಾಡಬೇಕು. ಅವಶ್ಯವಿದ್ದರೆ ಇಲ್ಲಿನ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಅಲ್ಲಿಗೆ ಪ್ರವಾಸ ಮಾಡಿ ಅಧ್ಯಯನ ಮಾಡಿಸಿ ಎಂದು ಜಿ.ಪಂ. ಸಿಇಒ ಡಾ.ಗಿರೀಶ್ ಡಿ. ಬದೋಲೆ ಅವರಿಗೆ ಸಚಿವರು ನಿರ್ದೇಶನ ನೀಡಿದರು.

ಘಟನೋತ್ತರ ಮಂಜೂರಾತಿ: ಕೆಕೆಆರ್‌ಡಿಬಿಯ 2021–22ನೇ ಸಾಲಿನ ಮ್ಯಾಕ್ರೊ ಯೋಜನೆಯಡಿ ಜಿಲ್ಲೆಗೆ ಹಂಚಿಕೆಯಾದ ₹ 104.77 ಕೋಟಿ ಪೈಕಿ ಅನುಮೋದನೆಯಾದ ₹ 103.95 ಕೋಟಿ ಅನುದಾನದಲ್ಲಿ ಹೆಚ್ಚಿನ ಕಾಮಗಾರಿಗಳು ಒಂದೇ ಕ್ಷೇತ್ರಕ್ಕೆ ಹಂಚಿಕೆ ಮಾಡಿದ್ದಕ್ಕೆ ಸಭೆಯಲ್ಲಿದ್ದ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.

ಸಚಿವ ಸಂಪುಟ ಸಮಿತಿ ಒಪ್ಪಿಗೆ ಸೂಚಿಸಿದ ಕಾಮಗಾರಿಗಳಿಗೆ ಘಟನೋತ್ತರ ಮಂಜೂರಾತಿ ನೀಡಬೇಕು. ಉಳಿದ ಕಾಮಗಾರಿಯನ್ನು ಪುನರ್ ಅವಲೋಕಿಸಿ ನ್ಯಾಯಬದ್ಧವಾಗಿ ವಿಧಾನಸಭಾ ಕ್ಷೇತ್ರವಾರು ಮರು ಹಂಚಿಕೆ ಮಾಡಲು ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವ ಮುರುಗೇಶ ನಿರಾಣಿ ಅವರಿಗೆ ಸಭೆ ಸಂಪೂರ್ಣ ಅಧಿಕಾರ ನೀಡಿತು. ಅದರಂತೆ ಮ್ಯಾಕ್ರೊ ಅನುದಾನದಡಿ ಸಚಿವ ಸಂಪುಟ ಒಪ್ಪಿಗೆ ನೀಡಿದ ಕಾಮಗಾರಿಗಳು ಸೇರಿದಂತೆ 2021–22ನೇ ಸಾಲಿಗೆ ಮೈಕ್ರೊ ನಿಧಿಯಡಿ ಹಂಚಿಕೆಯಾದ ₹ 244.46 ಕೋಟಿ ಪೈಕಿ ₹ 243.60 ಕೋಟಿ ಮೊತ್ತದ ಕಾಮಗಾರಿಯನ್ನು ಮಂಡಳಿ ಅನುಮೋದನೆಯೊಂದಿಗೆ ಈಗಾಗಲೇ ಅನುಷ್ಠಾನ ಮಾಡುತ್ತಿರುವುರಿಂದ ಅದಕ್ಕೆ ಸಭೆ ಮಂಜೂರಾತಿ ನೀಡಿತು.

ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು 2021–22 ಮತ್ತು 2022–23ನೇ ಸಾಲಿನ ಕೆಕಆರ್‌ಡಿಬಿಯಿಂದ ಜಿಲ್ಲೆಗೆ ಹಂಚಿಕೆಯಾದ ಅನುದಾನ, ಕ್ರಿಯಾ ಯೋಜನೆ ತಯಾರಿ, ಅನುಷ್ಠಾನ ಕುರಿತು ವರದಿಯನ್ನು ಮಂಡಿಸಿದರು.

ಸಭೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಶಾಸಕರಾದ ಸುಭಾಷ ಗುತ್ತೇದಾರ, ಕನೀಜ್ ಫಾತಿಮಾ, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು