ಬುಧವಾರ, ಡಿಸೆಂಬರ್ 8, 2021
28 °C
ಕೆಕೆಆರ್‌ಡಿಬಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶಾಸಕ ದತ್ತಾತ್ರೇಯ ಪಾಟೀಲ ರೇವೂರ

ಕೋವಿಡ್‌ ನಿಯಂತ್ರಣಕ್ಕೆ ಕೆಕೆಆರ್‌ಡಿಬಿ ಆದ್ಯತೆ: ದತ್ತಾತ್ರೇಯ ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಈ ಭಾಗದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಬೇಕಾದ ಎಲ್ಲ ಸಹಕಾರ ನೀಡುವುದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮೊದಲ ಆದ್ಯತೆ’ ಎಂದು ಮಂಡಳಿಯ ನೂತನ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ಹೇಳಿದರು.

ನಗರದಲ್ಲಿ ಸೋಮವಾರ ಕೆಕೆಆರ್‌ಡಿಬಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅವರು, ಮಾಧ್ಯಮದವರೊಂದಿಗೆ ಮಾತನಾಡಿದರು.

‘ಈ ಹಿಂದಿನಿಂದಲೂ ಮಂಡಳಿಯು ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತ ಬಂದಿದೆ. ಜನಪರ ಕಾರ್ಯಗಳು ಇನ್ನು ಮತ್ತಷ್ಟು ವೇಗ ಪಡೆಯಲಿವೆ. ಮುಖ್ಯವಾಗಿ ಈ ಭಾಗದ ಎಲ್ಲ ಜಿಲ್ಲೆಗಳೂ ಕೋವಿಡ್‌ನಿಂದ ತತ್ತರಿಸಿವೆ. ಇದರ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಚಿಸಿದ್ದಾರೆ’ ಎಂದರು.

‘ಆಯಾ ಜಿಲ್ಲೆಗಳ ಅಧಿಕಾರಿಗಳನ್ನು ಕರೆಯಿಸಿ ಮಾಹಿತಿ ಪಡೆಯುತ್ತೇನೆ. ಎಲ್ಲಿ ಏನು ಅಗತ್ಯ ಇದೆಯೋ ಅದನ್ನು ಶೀಘ್ರವೇ ಪೂರೈಸಲು ಕ್ರಮ ಕೈಗೊಳ್ಳುತ್ತೇನೆ. ಹೊಸ ಲ್ಯಾಬ್‌ ಸ್ಥಾಪನೆ, ಬೆಡ್‌ ಕೊರತೆ ನಿವಾರಣೆ, ಔಷಧ, ವೆಂಟಿಲೇಟರ್‌... ಹೀಗೇ ಈ ಸಾಂಕ್ರಾಮಿಕ ನಿಯಂತ್ರಣಕ್ಕೆ ಏನು ಅಗತ್ಯವಿದೆ ಎಂದು ಪಟ್ಟಿ  ತರಿಸಿಕೊಂಡು ತುರ್ತು ಕ್ರಮ ವಹಿಸುತ್ತೇನೆ’ ಎಂದೂ ಹೇಳಿದರು.‌

‘ಹೈದರಾಬಾದ್‌ ಕರ್ನಾಟಕ ಎಂಬ ಹೆಸರನ್ನು ಬದಲಿಸಿ, ಕಲ್ಯಾಣ ಕರ್ನಾಟಕ ನಾಮಕರಣ ಮಾಡಿದ ನಂತರ, ಯಡಿಯೂರಪ್ಪ ಅವರು ಈ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಅದರಂತೆ ಮಂಡಳಿಗೂ ₹ 1500 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದ್ದಾರೆ. ಅದರಲ್ಲಿ ಹೆಚ್ಚಿನ ಹಣವನ್ನು ಪಡೆದುಕೊಂಡು ಅಭಿವೃದ್ಧಿ ಕಾರ್ಯಕ್ಕೆ ಮುಂದಾಗುತ್ತೇನೆ’ ಎಂದೂ ಶಾಸಕರು ತಿಳಿಸಿದರು.

ನಿರೀಕ್ಷೆ ಹಾಗೇ ಇರುತ್ತದೆ

‘ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದ ನೀವು ಈಗ ಕೆಕೆಆರ್‌ಡಿಬಿ ಅಧ್ಯಕ್ಷತೆಯಿಂದ ತೃಪ್ತರಾಗಿದ್ದೀರೇ?’ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ದತ್ತಾತ್ರೇಯ ಅವರು, ‘ಈ ಭಾಗದ ಯಾರಿಗೂ ಇನ್ನೂ ಸಚಿವ ಸ್ಥಾನ ಸಿಕ್ಕಿಲ್ಲ. ಅದರ ನಿರೀಕ್ಷೆ ಹಾಗೇ ಇರುತ್ತದೆ. ಆದರೆ, ಸದ್ಯ ಮುಖ್ಯಮಂತ್ರಿಗಳು ನನಗೆ ವಹಿಸಿಕೊಟ್ಟ ಹುದ್ದೆಯನ್ನು ಕ್ರಿಯಾಶೀಲವಾಗಿ, ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಸದ್ಯ ಇದಕ್ಕೇ ನಾನು ಆದ್ಯತೆ ನೀಡುತ್ತೇನೆ’ ಎಂದು ಉತ್ತರಿಸಿದರು.

‘ಈ ಸ್ಥಾನ ಸಿಗಲು ಸಹಕರಿಸಿದ ಕ್ಷೇತ್ರದ ಮತದಾರರಿಗೆ, ಜಿಲ್ಲೆಯ ಸಂಸದರು, ಶಾಸಕ ಮಿತ್ರರು ಹಾಗೂ ಪಕ್ಷದ ಹಿರಿಯ ಮುಖಂಡರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ’ ಎಂದೂ ಹೇಳಿದರು.

‌ಸಂಸದ ಡಾ.ಉಮೇಶ ಜಾಧವ, ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಶಾಸಕ ಸುಭಾಷ ಗುತ್ತೇದಾರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ, ಬಿಜೆಪಿ ಮುಖಂಡರಾದ ಬಾಬುರಾವ ಚಿಂಚನಸೂರ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಕೆಕೆಆರ್‌ಡಿಬಿ ಕಾರ್ಯದರ್ಶಿ ‍ಪ್ರಸನ್ನ, ನಗರ ಪೊಲೀಸ್ ಆಯುಕ್ತ ಸತೀಶಕುಮಾರ ಇದ್ದರು.

ಮುಗಿಬಿದ್ದ ಅಭಿಮಾನಿಗಳು: ದತ್ತಾತ್ರೇಯ ಪಾಟೀಲ ಅವರು ಅಧಿಕಾರ ವಹಿಸಿಕೊಂಡ ನಂತರ, ಅವರ ನೂರಾರು ಅಭಿಮಾನಿಗಳು ಅಭಿನಂದನೆ ಸಲ್ಲಿಸಲು ಮುಗಿಬಿದ್ದರು. ಇದರಿಂದ ಕನಿಷ್ಠ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗಲಿಲ್ಲ.

ಕೆಕೆಆರ್‌ಡಿಬಿ ಕಟ್ಟಡದ ಸಭಾಂಗಣದ ಒಳಗೆ ಗುಂಪಾಗಿ ಸೇರಿದ ಜನರಿ; ಹಾರ, ಶಾಲು ಹಾಕಿ, ಹಣ್ಣು ಹಂಪಲು ನೀಡಿ ಸನ್ಮಾನಿಸಿದರು. ಪಕ್ಷದ ಹಲವು ಮುಖಂಡರು, ಕಾರ್ಯಕರ್ಯರು, ಮಹಿಳೆಯರು ಕೂಡ ಅಭಿಮಾನ ತೋರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು