ಬುಧವಾರ, ಏಪ್ರಿಲ್ 14, 2021
24 °C
ಪ್ರಸಕ್ತ ಸಾಲಿನಲ್ಲಿ ಕೆಕೆಆರ್‌ಡಿಬಿಯಿಂದ ₹ 822 ಕೋಟಿ ಖರ್ಚು

ನಾಲ್ಕನೇ ಕಂತಿನ ಅನುದಾನಕ್ಕೆ ಪ್ರಸ್ತಾವ: ರೇವೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಗೆ 2020–21ನೇ ಸಾಲಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಮತ್ತು ಪ್ರಾರಂಭಿಕ ಶುಲ್ಕ ಅನುದಾನದ ಪೈಕಿ ಒಟ್ಟಾರೆ ಪ್ರಸಕ್ತ ಸಾಲಿನಲ್ಲಿ 822.70 ಕೋಟಿ ಅನುದಾನ ಖರ್ಚು ಮಾಡಲಾಗಿದೆ ಎಂದು ಮಂಡಳಿ ಅಧ್ಯಕ್ಷ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದ್ದಾರೆ.

ರಾಜ್ಯ ಸರ್ಕಾರವು 2020–21ನೇ ಸಾಲಿಗೆ ನಿಗದಿಪಡಿಸಿದ ₹ 1136.81 ಕೋಟಿ ಅನುದಾನದ ಪೈಕಿ ಮೂರು ಕಂತುಗಳಲ್ಲಿ ಒಟ್ಟು ₹ 787.94 ಕೋಟಿ ಬಿಡುಗಡೆ ಮಾಡಿದೆ. ಮಂಡಳಿಯ ಪ್ರಾರಂಭಿಕ ಶಿಲ್ಕು ₹308.70 ಕೋಟಿ ಇದ್ದು, ಪ್ರಸಕ್ತ ಸಾಲಿನಲ್ಲಿ 5,422 ಭೌತಿಕ ಗುರಿಗೆ 3,915ರಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸುವುದರ ಮೂಲಕ ಶೇ 72ರಷ್ಟು ಗುರಿ ಸಾಧಿಸಿದೆ. ಅದೇ ರೀತಿ ಈ ವರ್ಷ ಇದುವರೆಗೆ ₹ 822.70 ಕೋಟಿ ಅನುದಾನವನ್ನು ಖರ್ಚು ಮಾಡುವ ಮೂಲಕ ಶೇ. 75 ರಷ್ಟು ಆರ್ಥಿಕ ಸಾಧನೆ ಮಾಡಲಾಗಿದೆ. ಹೀಗಾಗಿ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನಕ್ಕೆ ಅರ್ಹವಾಗಿದ್ದರಿಂದ ಹಣ ಬಿಡುಗಡೆಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

’ಮಂಡಳಿಯು ನಿಯಮಿತವಾಗಿ ಅನುಷ್ಠಾನಾಧಿಕಾರಿಗಳೊಂದಿಗೆ ಕಾಮಗಾರಿವಾರು ಪರಾಮರ್ಶಿಸಿ, ಕಾಲಬದ್ಧ ಮಿತಿಯೊಳಗಡೆ ಪ್ರಗತಿಯನ್ನು ಸಾಧಿಸಲು ಆದ್ಯತೆ ನೀಡಿದ್ದರಿಂದ ಭೌತಿಕ ಹಾಗೂ ಆರ್ಥಿಕ ಗುರಿಯಲ್ಲಿ ಗಣನೀಯ ಸಾಧನೆ ಮಾಡಿದೆ. ಇದರ ಪ್ರತಿಫಲವಾಗಿ 4ನೇ ಕಂತಿನ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ಮೂಲಕ ಮೈಲುಗಲ್ಲು ಸಾಧಿಸಿದಂತಾಗಿದೆ’ ಎಂದಿದ್ದಾರೆ.

ನಿಗದಿತ ಅವಧಿಯಲ್ಲಿ ಹಣ ಖರ್ಚು ಮಾಡದಿದ್ದರೆ ನಾಲ್ಕನೇ ಕಂತಿನ ಹಣ ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಕಳೆದ ಡಿಸೆಂಬರ್‌ನಲ್ಲಿ ಮಂಡಳಿ ಕಾರ್ಯದರ್ಶಿ ಡಾ.ಎನ್‌.ವಿ. ಪ್ರಸಾದ್ ಅವರಿಗೆ ಪತ್ರ ಬರೆದಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.