ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉದ್ಯೋಗ ಖಾತ್ರಿ ಕೂಲಿ 200 ದಿನಕ್ಕೆ ವಿಸ್ತರಿಸಿ’

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಾಂತ ರೈತ ಸಂಘದಿಂದ ಪ್ರತಿಭಟನೆ
Last Updated 4 ಜೂನ್ 2019, 20:04 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಾದ್ಯಂತ ಜನ–ಜಾನುವಾರುಗಳು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದು, ಜನರು ದುಡಿಯಲು ಉದ್ಯೋಗವಿಲ್ಲದೇ ಕಂಗಾಲಾಗಿದ್ದಾರೆ. ಕೂಡಲೇ ಬರಗಾಲ ಪರಿಹಾರ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಕೂಡಲೇ ಕೂಲಿ ದಿನಗಳನ್ನು ಒಬ್ಬರಿಗೆ 200 ದಿನಕ್ಕೆ ಹೆಚ್ಚಿಸಬೇಕು. ಜಿಲ್ಲೆಯಲ್ಲಿ ಮೋಡಬಿತ್ತನೆ ಮಾಡಬೇಕು. ಕೊಡ ನೀರನ್ನೂ ರೊಕ್ಕ ಕೊಟ್ಟು ಖರೀದಿ ಮಾಡುವ ಪರಿಸ್ಥಿತಿ ಬಂದಿದೆ. ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಇದರಿಂದಾಗಿ ಅವುಗಳನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ವಿಷಾದಿಸಿದರು.

ಬೆಳೆನಷ್ಟ ಪರಿಹಾರ ಬೆಳೆವಿಮೆ ಇನ್ನೂ ಬಿಡುಗಡೆ ಆಗಿಲ್ಲ. ನೈಸರ್ಗಿಕ ಪ್ರಕೋಪ ನಿರ್ವಹಣೆ ಕೇಂದ್ರ ಸರ್ಕಾರದ ಹೊಣೆಗಾರಿಕೆ ಆಗಿದೆ. ಕೇಂದ್ರದ ನಿಷ್ಕಾಳಜಿಯಿಂದಾಗಿ ಹಣ ಬಿಡುಗಡೆ ಆಗಿಲ್ಲ. ಇದರಿಂದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಕೇಂದ್ರ ತಂಡವು ಬರಗಾಲ ಪರಿಶೀಲನೆ ಮಾಡಿ ಹೋದರೂ ಇನ್ನೂ ನೆರವು ನೀಡದೇ ಕೇಂದ್ರವು ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಟೀಕಿಸಿದರು.

ಸಂಧ್ಯಾಸುರಕ್ಷಾ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನವನ್ನು ಜಿಲ್ಲೆಯಲ್ಲಿ ರದ್ದು ಮಾಡಿದ್ದು, ಇದರಿಂದ ಫಲಾನುಭವಿಗಳು ಆತಂಕಕ್ಕೊಳಗಾಗಿದ್ದಾರೆ. ಬೇಕಾಬಿಟ್ಟಿಯಾಗಿ ರದ್ದುಪಡಿಸಿದ ಸರ್ಕಾರದ ಸೌಲಭ್ಯಗಳನ್ನು ಪುನರ್‌ ಪರಿಶೀಲಿಸಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಕಾರ್ಯದರ್ಶಿ ಅಶೋಕ ಮ್ಯಾಗೇರಿ, ಉಪಾಧ್ಯಕ್ಷ ಪಾಂಡುರಂಗ ಮಾವಿನಕರ್‌, ಖಜಾಂಚಿ ಶಾಂತಪ್ಪ ಪಾಟೀಲ, ಸಹ ಕಾರ್ಯದರ್ಶಿ ಸುಭಾಷ ಹೊಸಮನಿ, ಉಪಾಧ್ಯಕ್ಷರಾದ ಸಿದ್ದಯ್ಯಸ್ವಾಮಿ ಯಂಪಳ್ಳಿ, ಗೌರಮ್ಮ ಪಾಟೀಲ ಮಲ್ಲಣ್ಣಗೌಡ ಬನ್ನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT