ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ಛಾಯೆಗೆ ಬತ್ತಿದ ಕೆರೆಗಳು: ಬೇಸಿಗೆಯಲ್ಲಿ ಮತ್ತೆ ಕಾಡಲಿದೆ ನೀರಿನ ಸಂಕಟ

Published 9 ಡಿಸೆಂಬರ್ 2023, 5:42 IST
Last Updated 9 ಡಿಸೆಂಬರ್ 2023, 5:42 IST
ಅಕ್ಷರ ಗಾತ್ರ

ಆಳಂದ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿನ ಹಲವು ಕೆರೆಗಳು ಬರದ ಹೊಡೆತದಿಂದ ಬತ್ತುವ ಸ್ಥಿತಿಗೆ ತಲುಪಿವೆ.

ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಂಕಟ ಅಧಿಕಗೊಳ್ಳಲಿದೆ ಎನ್ನುವ ಆತಂಕ ಒಂದೆಡೆಯಾದರೆ, ಕೆರೆ, ಬಾವಿ ಹಾಗೂ ಅಂತರ್ಜಲ ಮಟ್ಟವನ್ನು ಅವಲಂಬಿಸಿ ಬೆಳೆದು ನಿಂತ ಬೆಳೆಯು ಬಾಡುವ ಸಂಕಟ ರೈತರಿಗೆ ಕಾಡುತ್ತಿದೆ.

ತಾಲ್ಲೂಕಿನಲ್ಲಿ ಒಟ್ಟು 35 ಕೆರೆಗಳಿವೆ. ಇವುಗಳಲ್ಲಿ ಹನ್ನೆರಡು ಕೆರೆಗಳಲ್ಲಿ ಮಾತ್ರ ಶೇ 40ರಷ್ಟು ಪ್ರಮಾಣದ ನೀರು ಇದೆ. ಉಳಿದಂತೆ ಆರು ಕೆರೆಗಳಲ್ಲಿ ಶೇ 20ರಷ್ಟು ಪ್ರಮಾಣದ ನೀರು ಸಂಗ್ರಹವಿದೆ. ಹದಿನಾಲ್ಕು ಕೆರೆಗಳು ಸಂಪೂರ್ಣ ಬತ್ತುವ ಸ್ಥಿತಿಯಲ್ಲಿದ್ದು, ಕೆಲವು ಮಾತ್ರ ಕೆರೆಗಳಲ್ಲಿನ ತೆಗ್ಗು, ಗುಂಡಿಗಳಲ್ಲಿ ಅಲ್ಪಸ್ವಲ್ಪ ಮಾತ್ರ ನೀರು ಕಾಣುತ್ತಿದೆ. ತಾಲ್ಲೂಕಿನ ಝಳಕಿ, ನಿಂಬಾಳದ 2 ಕೆರೆ, ಕವಲಗಾ, ಮಾಡಿಯಾಳ, ನಿಂಗದಳ್ಳಿ, ಕೆರೂರು, ಮದಗುಣಕಿ, ಮಾದನ ಹಿಪ್ಪರಗಿ, ವಾಗ್ದರಿ, ನರೋಣಾ ಕೆರೆಗಳು ಸಂಪೂರ್ಣವಾಗಿ ಖಾಲಿಯಾಗಿವೆ. ಮಾದನ ಹಿಪ್ಪರಗಿ ಹೋಬಳಿ ವ್ಯಾಪ್ತಿಯಲ್ಲಿನ (ಹಡಲಗಿ ಹೊರತು ಪಡೆಸಿ) ಎಲ್ಲ ಕೆರೆಗಳು ಬತ್ತಿವೆ.

ಈ ಭಾಗದಲ್ಲಿ ಅತಿಹೆಚ್ಚು ತೋಟಗಾರಿಕೆ ಬೆಳೆ ಮತ್ತು ತರಕಾರಿ ಬೆಳೆಯುವ ರೈತರು ಇದ್ದಾರೆ. ನಿಂಬಾಳ , ಚಲಗೇರಾ, ಖೇಡ ಉಮರ್ಗಾ ಮದಗುಣಕಿ ಸುತ್ತಲೂ ಗ್ರಾಮದಲ್ಲಿ ಅತಿ ಹೆಚ್ಚು ಬಾಳೆ, ನುಗ್ಗೆ, ಕಬ್ಬು ಮತ್ತು ಎಲೆತೋಟಗಳಿವೆ. ಮಾದನ ಹಿಪ್ಪರಗಿ, ಝಳಕಿ, ನಿಂಗದಳ್ಳಿ ಸುತ್ತಲೂ ತರಕಾರಿ ಬೆಳೆಯನ್ನೇ ಅವಲಂಬಿಸಿ ರೈತರು ಕೃಷಿ ಮಾಡುತ್ತಿದ್ದಾರೆ. ಮುಂಗಾರು ಮಳೆ ಪ್ರಮಾಣ ಕಡಿಮೆಯಾಗಿ ಈ ಭಾಗದ ಹಳ್ಳಕೊಳ್ಳಕ್ಕೆ ನೀರು ಹರಿದಾಡಲಿಲ್ಲ. ಕಳೆದ ವರ್ಷ ತುಂಬಿದ ಕೆರೆಗಳಿಗೆ ಹೊಸ ನೀರು ಹರಿದು ಬರಲಿಲ್ಲ. ಇದರಿಂದ ಅಂತರ್ಜಲ ಮಟ್ಟವು ಕುಸಿಯುವ ಸ್ಥಿತಿ ಕಾಡುತ್ತಿದೆ. ಕೆರೆ ನೀರು ಜೀವಾಳವಾಗಿಸಿಕೊಂಡ ಕೆರೆ ಸುತ್ತಲಿನ ರೈತರ ಬೆಳೆಯು ಒಣಗುವ ಹಂತ ತಲುಪಿದೆ. ಕೊಳವೆ ಬಾವಿಗೂ ನೀರಿನ ಬರ ಕಾಡುತ್ತಿದೆ.

ಅಧಿಕ ಸಂಖ್ಯೆಯಲ್ಲಿ ತರಕಾರಿ ಬೆಳೆ, ಬಾಳೆತೋಟ, ರೇಷ್ಮೆ, ಎಲೆತೋಟ ಬಾಹುಳ್ಯದ ನಿಂಬಾಳ, ಮಾದನ ಹಿಪ್ಪರಗಿ, ಝಳಕಿ, ನಿಂಗದಳ್ಳಿ, ಖೇಡ ಉಮರ್ಗಾದ ರೈತರೂ ಇದ್ದ ಬೆಳೆ ತೆಗೆದು ಗೋಧಿ, ಕಡಲೆ ಬಿತ್ತನೆ ಮಾಡಿದ್ದಾರೆ. ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯು ಜನ ಜಾನುವಾರುಗಳಿಗೆ ಎದುರಾಗಲಿದೆ ಎಂದು ರೈತ ಮಹಾದೇವ ಸಣಮನಿ ತಿಳಿಸಿದರು.

ಖಜೂರಿ ವಲಯದ ವ್ಯಾಪ್ತಿಯಲ್ಲಿನ ಸಾಲೇಗಾಂವ, ಹೊನ್ನಳ್ಳಿ, ಆಳಂದ, ದಣ್ಣೂರು, ಧುತ್ತರಗಾಂವ, ಮಟಕಿ, ಖಜೂರಿ, ತಡೋಣಾ, ಅಳಂಗಾ, ಹಳ್ಳಿ ಸಲಗರ, ತಡಕಲ, ಶುಕ್ರವಾಡಿ ಕೆರೆಗಳಲ್ಲಿ ಅರ್ಧದಷ್ಟು ನೀರಿನ ಪ್ರಮಾಣ ಇದೆ. ಆದರೆ ಈ ಭಾಗದಲ್ಲಿ ತೋಟಗಾರಿಕೆ ಬೆಳೆಗಿಂತ ತೊಗರಿ, ಜೋಳ, ಗೋಧಿ, ಕಡಲೆ ಬೆಳೆಯ ಪ್ರದೇಶ ಹೆಚ್ಚು. ಈಗಾಗಲೇ ಸುತ್ತಲಿನ ರೈತರೂ ಹೊಲದಲ್ಲಿ ಬೆಳೆದ ನಿಂತ ತೊಗರಿ, ಗೋಧಿ, ಜೋಳ, ಕಡಲೆ ಮತ್ತಿತರ ಬೆಳೆಗೆ ಕೆರೆ ನೀರು ಮೋಟಾರ್‌ ಪಂಪ್ ಸೆಟ್‌ ಮೂಲಕ ಅನಧಿಕೃತವಾಗಿ ಬಳಕೆ ಮಾಡುತ್ತಿರುವುದು ಆತಂಕ ತಂದಿದೆ. ಒಂದೆಡೆ ಬೆಳೆಗೆ ನೀರು ಬಳಕೆಯಾದರೆ ಕೆರೆ ಖಾಲಿಯಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಪರಿತಪಿಸುವ ಸ್ಥಿತಿ ತಲುಪಲಿದೆ.

ಸಾಲೇಗಾಂವ ಕೆರೆಯು ಸುತ್ತಲಿನ ಖಜೂರಿ, ಕಿಣ್ಣಿ ಸುಲ್ತಾನ, ಸಾಲೇಗಾಂವ ಮತ್ತಿತರ ಗ್ರಾಮದ ಕುಡಿಯುವ ನೀರಿನ ಮೂಲವಾಗಿದೆ. ಮಟಕಿ, ತಡೋಳಾ, ಆಳಂದ, ಹೊನ್ನಳ್ಳಿ, ತಡಕಲ, ಶುಕ್ರವಾಡಿ ಕೆರೆಗಳು ಕುಡಿಯುವ ನೀರಿನ ಮೂಲವಾಗಿದ್ದಲ್ಲದೇ ಜನ, ಜಾನುವಾರು, ಬಟ್ಟೆ ತೊಳೆಯಲು ಹಾಗೂ ಸುತ್ತಲಿನ ಗ್ರಾಮದ ಬಾವಿ, ಕೊಳವೆ ಬಾವಿಯ ಅಂತರ್ಜಲದ ಜೀವಾಳವಾಗಿವೆ. ಈಗಾಗಲೇ ಬೇಸಿಗೆ ಗಂಭೀರತೆ ಅರ್ಥ ಮಾಡಿಕೊಂಡ ತಾಲ್ಲೂಕು ಆಡಳಿತವು ಕೆರೆ ನೀರು ಬಳಕೆಗೆ ತಡೆಯಲು ಎಚ್ಚರ ವಹಿಸಿದೆ. ತಾಲ್ಲೂಕು ಮಟ್ಟದ ಅಧಿಕಾರಿಗಳು ಪೊಲೀಸರೊಂದಿಗೆ ಗ್ರಾಮಗಳಿಗೆ ತೆರಳಿ ಪಂಪ್‌ ಸೆಟ್‌ ಮೂಲಕ ಅನಧಿಕೃತವಾಗಿ ಕೆರೆ ನೀರು ಬಳಕೆ ಮಾಡದಿರಲು ರೈತರಿಗೆ ತಾಕೀತು ಮಾಡುತ್ತಿದ್ದಾರೆ.

ನವೆಂಬರ್‌ ಕೊನೆಯ ವಾರದಲ್ಲಿ ಕೆಲವು ಗ್ರಾಮಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದು, ಹಿಂಗಾರು ಬೆಳೆಗಳಾದ ಜೋಳ, ಗೋಧಿ, ಕಡಲೆ ಮತ್ತಿತರ ಬೆಳೆ ಜತೆಯಲ್ಲಿ ತರಕಾರಿ ಬೆಳೆಗೂ ಅನುಕೂಲವಾಗಿದೆ. ಆದರೆ ತೇವಾಂಶ ಕಡಿಮೆಯಾದರೆ ಕೆರೆ ಸುತ್ತಲಿನ ರೈತರೂ ಅಂತರ್ಜಲ ಮಟ್ಟ ಕುಸಿತ ಭೀತಿ ಎದುರಾಗಿದೆ. 

ಬಿ.ಆರ್.ಪಾಟೀಲ
ಬಿ.ಆರ್.ಪಾಟೀಲ
ಬರವು ಹೆಚ್ಚಿದ ಪರಿಣಾಮ ಮುಂಬರುವ ಆರು ತಿಂಗಳು ಕಾಲ ಕುಡಿಯುವ ನೀರಿನ ಸಮಸ್ಯೆ ಆಗದಂತೆ ತುರ್ತು ಸಂದರ್ಭದಲ್ಲಿ ಕೆರೆ ನೀರು ಕುಡಿಯುವುದಕ್ಕೆ ಬಳಕೆಯಾಗಲಿದೆ. ಅದಕ್ಕೆ ಕೆರೆ ನೀರು ಪೋಲು ಆಗದಂತೆ ಎಚ್ಚರವಹಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ
ಬಿ.ಆರ್.ಪಾಟೀಲ ಶಾಸಕ ಆಳಂದ
ಮಾದನ ಹಿಪ್ಪರಗಿ ಹೋಬಳಿ ವ್ಯಾಪ್ತಿಯಲ್ಲಿನ ಕೆರೆಗಳು ಸಂಪೂರ್ಣ ಬತ್ತಿದ ಪರಿಣಾಮ ತೋಟಗಾರಿಕೆ ತರಕಾರಿ ಬೆಳೆ ಪ್ರಮಾಣ ಕುಸಿದಿದೆ. ನೀರಿನ ಬವಣೆ ಹೆಚ್ಚಲಿದ್ದು ತಾಲ್ಲೂಕು ಆಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು
ಲಕ್ಷ್ಮಣ ತಳಕೇರಿ ಸದಸ್ಯ ಗ್ರಾ.ಪಂ ನಿಂಬಾಳ
ಕೆರೆಗಳಲ್ಲಿ ಸಂಗ್ರಹವುಳ್ಳ ನೀರು ಪೋಲಾಗದಂತೆ ಅಗತ್ಯ ಎಚ್ಚರವಹಿಸಲು ಕಾರ್ಯಪಡೆ ರಚಿಸಲಾಗಿದ್ದು ಆಯಾ ಗ್ರಾಮ ಪಂಚಾಯಿತಿಗೆ ಅಧಿಕಾರ ನೀಡಿ ಅನಧಿಕೃತ ನೀರು ಬಳಕೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ
ಶಾಂತಪ್ಪ ಜಾಧವ ಎಇಇ ಸಣ್ಣ ನೀರಾವರಿ ಇಲಾಖೆ ಆಳಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT