ಕಾನೂನು ರಚನೆಯಿಂದ ದಿಢೀರ್‌ ಬದಲಾವಣೆ ಅಸಾಧ್ಯ

ಬುಧವಾರ, ಜೂನ್ 19, 2019
23 °C
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಸುನೀಲ ದತ್ತ ಯಾದವ್ ಅಭಿಮತ

ಕಾನೂನು ರಚನೆಯಿಂದ ದಿಢೀರ್‌ ಬದಲಾವಣೆ ಅಸಾಧ್ಯ

Published:
Updated:
Prajavani

ಕಲಬುರ್ಗಿ: ‘ಹೈದರಾಬಾದ್–ಕರ್ನಾಟಕ ಪ್ರದೇಶಕ್ಕೆ 371(ಜೆ) ಕಲಂ ಅಡಿ ವಿಶೇಷ ಸ್ಥಾನಮಾನ ಸಿಕ್ಕಿದೆ. ಆದರೆ, ಇದರಿಂದ ದಿಢೀರ್‌ ಬದಲಾವಣೆ ನಿರೀಕ್ಷಿಸಲಾಗದು. ಅನುಷ್ಠಾನಕ್ಕೆ ಸಮಯ ಬೇಕಾಗುತ್ತದೆ’ ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಸುನೀಲ ದತ್ತ ಯಾದವ್ ಹೇಳಿದರು.

ಹೈದರಾಬಾದ್ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಎಚ್‌ಕೆಸಿಸಿಐ) ಸಭಾಂಗಣದಲ್ಲಿ ಬುಧವಾರ ವಿ.ಬಿ.ದೇಶಪಾಂಡೆ ಪ್ರತಿಷ್ಠಾನವು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಸಂವಿಧಾನ ಕಾರ್ಯನಿರ್ವಹಣೆಯಲ್ಲಿ ನಾಗರಿಕರ ಪಾತ್ರ’ (371 ಜೆ ಕಲಂ ಹಿನ್ನೆಲೆಯಲ್ಲಿ) ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ‘ಕಾನೂನು ರಚನೆಯಿಂದ ಎಲ್ಲವೂ ಬದಲಾಗಲ್ಲ. ಕಾನೂನು ಎಂಬುದು ಪ್ರಕ್ರಿಯೆ. ಅದು ಹಂತಹಂತವಾಗಿ ಅಭಿವೃದ್ಧಿ ಮತ್ತು ಪರಿವರ್ತನೆಗೆ ಪೂರಕವಾಗುತ್ತದೆ’  ಎಂದರು.

‘ಸಮಾಜದಲ್ಲಿ ಪರಿವರ್ತನೆಯಾಗಬೇಕಿದ್ದರೆ ಜನರು ಪ್ರಮುಖ ಪಾತ್ರ ವಹಿಸಬೇಕು. ಕಾನೂನನ್ನು ಯಾವುದೆಲ್ಲ ಸ್ವರೂಪದಲ್ಲಿ ಸದ್ಬಳಕೆ ಮಾಡಿಕೊಳ್ಳಬಹುದು ಮತ್ತು ಹೇಗೆ ಪ್ರಯೋಜನ ಪಡೆದುಕೊಳ್ಳಬಹುದು ಎಂಬುದು ಜನರು ಅರಿತುಕೊಳ್ಳಬೇಕು. ಯಾರೂ ಸಹ ಸೌಲಭ್ಯ ಮತ್ತು ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಕೂಡ ಜನರ ಮೇಲೆ ಅವಲಂಬಿಸಿದೆ’ ಎಂದು ತಿಳಿಸಿದರು.

‘ಪ್ರಾದೇಶಿಕ ಅಸಮಾನತೆ ನಿವಾರಿಸುವಲ್ಲಿ 371 ಜೆ ಕಲಂ ಪ್ರಮುಖ ಪಾತ್ರ ವಹಿಸುತ್ತದೆ. ಕಲಂನಡಿ ಸಿಗುವ ಮೀಸಲಾತಿ ಮತ್ತು ಇನ್ನಿತರ ಸೌಲಭ್ಯಗಳನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು. ಕಾನೂನು ವಿಷಯದಲ್ಲಿ ಜನರು ಜಾಗೃತಗೊಳ್ಳುವುದು ಕೂಡ ತುಂಬಾ ಮುಖ್ಯ’ ಎಂದು ಅವರು ಸಲಹೆ ನೀಡಿದರು. 

ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್ ಮಾತನಾಡಿ, ‘ಅಮೆರಿಕ, ಬ್ರಿಟಿಷ್ ಸೇರಿದಂತೆ ವಿಶ್ವದ ಯಾವುದೇ ಸಂವಿಧಾನದ ಜೊತೆ ಹೋಲಿಕೆ ಮಾಡಿದರೂ ನಮ್ಮ ದೇಶದ ಸಂವಿಧಾನ ಶ್ರೇಷ್ಠತೆಯಿಂದ ಕೂಡಿದೆ. ಡಾ. ಬಿ.ಆರ್‌.ಅಂಬೇಡ್ಕರ್‌ ನೇತೃತ್ವದ ರಚನಾ ಸಮಿತಿಯು ವಿಶ್ವದಾದ್ಯಂತ ಸಂಚರಿಸಿ ಆಯಾ ದೇಶಗಳ ಸಂವಿಧಾನಗಳ ಅಂಶಗಳನ್ನು ಅಧ್ಯಯನ ಮಾಡಿ, ನಮ್ಮ ದೇಶದ ಸಂವಿಧಾನದಲ್ಲಿ ಅಳವಡಿಸಿದರು’ ಎಂದರು. 

‘ವಿವಿಧ ದೇಶಗಳಲ್ಲಿ ಸಂವಿಧಾನ ರಚನೆ ಸಂದರ್ಭದಲ್ಲಿ ಸೇನೆ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ತೀವ್ರ ನಿಗಾ ವಹಿಸಲಾಗಿತ್ತು. ಆದರೆ ನಮ್ಮ ದೇಶದಲ್ಲಿ ಸಂವಿಧಾನ ರಚನೆ ವೇಳೆ ಭದ್ರತೆಗೆ ನಾಲ್ಕು ಪೊಲೀಸ್‌ ಕಾನ್‌ಸ್ಟೆಬಲ್‌ ಹೊರತುಪಡಿಸಿದರೆ ಬೇರೆ ಯಾರೂ ಇರಲಿಲ್ಲ. ನಮ್ಮ ದೇಶದ ಸಂವಿಧಾನ ರಚನಾ ಸಮಿತಿಯವರು ಪರಸ್ಪರ ಚರ್ಚೆ ಮುಖಾಂತರ ಸಂವಿಧಾನ ರಚಿಸಿದರೆ, ಉಳಿದ ದೇಶಗಳಲ್ಲಿ ಜಗಳ, ಹಿಂಸೆ ನಡೆದವು’ ಎಂದು ತಿಳಿಸಿದರು.

‘ಸಂವಿಧಾನ ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ದೇಶದಲ್ಲಿ 550 ರಾಜ ಸಂಸ್ಥಾನಗಳಿದ್ದವು. ಅವುಗಳನ್ನು ಮಣಿಸುವುದು ಮತ್ತು ಆಯಾ ಪ್ರದೇಶಗಳನ್ನು ಸಂವಿಧಾನದಡಿ ಅನುಷ್ಠಾನಕ್ಕೆ ತರುವುದು ಸುಲಭದ ಸಂಗತಿಯಾಗಿರಲಿಲ್ಲ. ಆದರೆ ಅಂದಿನ ಆಡಳಿತ ವ್ಯವಸ್ಥೆಯು ‍ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಿ, ಸಂವಿಧಾನವನ್ನು ಜಾರಿಗೊಳಿಸಿತು’ ಎಂದು ಹೇಳಿದರು.

ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ.ಪಾಟೀಲ, ಗೌರವ ಕಾರ್ಯದರ್ಶಿ ಶಶಿಕಾಂತ ಬಿ.ಪಾಟೀಲ, ಉಪನ್ಯಾಸ ಕಾರ್ಯಕ್ರಮ ಉಪಸಮಿತಿ ಅಧ್ಯಕ್ಷ ಆನಂದ ದಂಡೋತಿ, ಪ್ರತಿಷ್ಠಾನದ ಪಿ.ವಿ.ದೇಶಪಾಂಡೆ, ಅಮಿತ್ ದೇಶಪಾಂಡೆ ಇದ್ದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !