ಸೋಮವಾರ, ಆಗಸ್ಟ್ 15, 2022
27 °C
ಜೂನ್ 28ರಂದು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಕೆ: ಹಿರೇಮಠ

ಗ್ರಾಮ ವಿದ್ಯುತ್ ಪ್ರತಿನಿಧಿಗಳ ಕಾಯಮಾತಿಗೆ ಒತ್ತಾಯ: ಚಂದ್ರಶೇಖರ ಹಿರೇಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕೆಲಸ ಮಾಡುವ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸೇವೆಯನ್ನು ಕಾಯಂ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಇದೇ 28ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಶ್ರಮ ಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘18 ವರ್ಷದ ಹಿಂದೆ ಮೀಸಲಾತಿ, ವಯೋಮಿತಿ ಸೇರಿ ಎಲ್ಲ ಅರ್ಹತೆಗಳೊಂದಿಗೆ ಗ್ರಾಮ ಪಂಚಾಯಿತಿ ವಿದ್ಯುತ್ ಪ್ರತಿನಿಧಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಮನೆ ಮನೆಗೂ ಹೋಗಿ ಬಿಲ್ ಸಂಗ್ರಹ ಮಾಡಿ, ಸಮಯಕ್ಕೆ ಸರಿಯಾಗಿ ಕಚೇರಿಗೆ ತಲುಪಿಸುತ್ತಿದ್ದಾರೆ. ವಿಳಂಬವಾದರೆ ಶೇ 2ರಷ್ಟು ದಂಡವನ್ನು ಕಟ್ಟುತ್ತಿದ್ದಾರೆ. ಇವರು ಕೇವಲ ₹ 12 ಸಾವಿರ ಸಂಬಳದಲ್ಲಿ ದುಡಿಯುತ್ತಿದ್ದಾರೆ. ಹಲವು ಜನರಿಗೆ 40 ವಯಸ್ಸು ಮೀರಿದ್ದು, ಬೇರೆ ಕಡೆ ಅವರಿಗೆ ಉದ್ಯೋಗವೂ ಸಿಗುವುದಿಲ್ಲ. ಆದ್ದರಿಂದ ಅವರಿಗೆ ಸೇವಾಭದ್ರತೆ ಒದಗಿಸಬೇಕು’ ಎಂದರು.

‘ಗ್ರಾಮೀಣ ಭಾಗದಲ್ಲಿ ಪ್ರತಿ ಮನೆ ಮನೆಗೂ ಹೋಗಿ ಮೀಟರ್ ರೀಡ್ ಮಾಡಲಾಗುತ್ತಿದೆ. ಜ್ಯೂನಿಯರ್ ಮೀಟರ್ ರೀಡರ್ ಹುದ್ದೆ ಸೃಷ್ಟಿಸಿ, ಗ್ರಾ.ಪಂ. ವಿದ್ಯುತ್ ಪ್ರತಿನಿಧಿಗಳಿಗೆ ಕಾಯಂ ಹುದ್ದೆ ನೀಡಬೇಕು. ವಿದ್ಯುತ್ ಪ್ರತಿನಿಧಿಗಳನ್ನು ಕಾಯಂ ಮಾಡಿಕೊಳ್ಳುವ ಕುರಿತು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವೂ ನಮ್ಮ ಬೇಡಿಕೆ ಎತ್ತಿ ಹಿಡಿದು, ಸೂಕ್ತ ಹುದ್ದೆ ರಚಿಸಿ ಕಾಯಂ ಮಾಡಿಕೊಳ್ಳಲು ಆದೇಶಿಸಿದೆ. ಆದರೂ ಸರ್ಕಾರ ಮೌನವಾಗಿದೆ ಎಂದು ಟೀಕಿಸಿದರು.

ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಯ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ನಾಗರಾಜ ಹರಸೂರ, ಪ್ರಭು ಗದ್ದುಗೆ, ಅಮೃತ ಮನೋಳಿ, ಶಿವಕುಮಾರ ದಂಡೋತಿ, ಅಶೋಕ ಕಾಳಗಿ, ಲಕ್ಷ್ಮಿಕಾಂತ ಕೊಗನೂರ, ಶರಣಗೌಡ ರೇವೂರ, ಶರಣು ಹಿರೋಳ್ಳಿ, ರಾಜು ದಿಗ್ಗಾಂವ, ಖಂಡಪ್ಪ ಯಾದಗಿರಿ, ಜಗದೀಶ ಪಾಟೀಲ ಓಕಳಿ, ಶೈಲೇಂದ್ರ ಪೂಜಾರಿ, ಮಲ್ಲಿಕಾರ್ಜುನ ನಂದೂರ, ಸಾಯಿಬಣ್ಣ ಸೇಡಂ, ಗುರುಪಾದಯ್ಯ ಗುರುಮಿಟಕಲ್, ಸತೀಶ ಸಜ್ಜನ್ ಇತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು