ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಬಡ್ತಿಗೆ ಒತ್ತಾಯಿಸಿ ಉಪನ್ಯಾಸಕರ ಪ್ರತಿಭಟನೆ

Last Updated 29 ನವೆಂಬರ್ 2019, 10:34 IST
ಅಕ್ಷರ ಗಾತ್ರ

ಕಲಬುರ್ಗಿ: ಪದವಿಪೂರ್ವಕಾಲೇಜುಉಪನ್ಯಾಸಕರಿಗೆ ವೇತನ ಸರಿಪಡಿಸುವ ಸಂಬಂಧ ಸರ್ಕಾರದ ಲಿಖಿತ ಭರವಸೆಯಂತೆ ಎರಡನೇ ಹೆಚ್ಚುವರಿ ವೇತನ ಬಡ್ತಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಇದೇ 28ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ‘ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ವೇತನ ತಾರತಮ್ಯ ಸರಿಪಡಿಸುವ ಸಂಬಂಧ ಸರ್ಕಾರದ ಲಿಖಿತ ಭರವಸೆಯಂತೆ ಎರಡನೇ ಹೆಚ್ಚುವರಿ ವೇತನ ಬಡ್ತಿಯನ್ನು ಮಂಜೂರು ಮಾಡಬೇಕು. 2008ರ ಆಗಸ್ಟ್‌ ನಂತರ ಆಯ್ಕೆಯಾದ ಉಪನ್ಯಾಸಕರಿಗೆ ನೀಡುತ್ತಿದ್ದ ₹ 500 ಎಕ್ಸ್‌ಗ್ರೇಷಿಯಾವನ್ನು ಕೂಡಲೇ ಮೂಲವೇತನದಲ್ಲಿ ವಿಲೀನಗೊಳಿಸಬೇಕು. ಪ್ರೌಢಶಾಲೆಯಿಂದ ಪದೋನ್ನತಿ ಹೊಂದಿ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ 10, 15, 20, 25 ಹಾಗೂ 30 ವರ್ಷಗಳ ಕಾಲಮಿತಿ ವೇತನ ಬಡ್ತಿಯನ್ನು ಕೂಡಲೇ ಮಂಜೂರು ಮಾಡಬೇಕು. ಉಪನ್ಯಾಸಕರ ಕಾರ್ಯಭಾರದ ಕುರಿತು ಉನ್ನತ ಮಟ್ಟದ ಪರಿಷತ್‌ ಸಮಿತಿಯನ್ನು ರಚಿಸುವುದು. ಅಲ್ಲಿಯವರೆಗೆ ಪ್ರತಿ ಉಪನ್ಯಾಸಕರಿಗೆ ವಾರದಲ್ಲಿ 16 ಗಂಟೆಗಳ ಬೋಧನಾ ಅವಧಿಯನ್ನು ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.

‘ಪದವಿಪೂರ್ವ ಕಾಲೇಜುಗಳಲ್ಲಿ ಎನ್‌ಸಿಇಆರ್‌ಟಿ ನಿಯಮಾವಳಿಯಂತೆ ಪ್ರತಿ ತರಗತಿಗೆ ವಿದ್ಯಾರ್ಥಿಗಳ ಗರಿಷ್ಠ ಸಂಖ್ಯೆಯನ್ನು 80ರಿಂದ 40ಕ್ಕೆ ನಿಗದಿಪಡಿಸಬೇಕು. ಪಿಯು ಕಾಲೇಜು ಉಪನ್ಯಾಸಕರಿಗೆ ನೆಟ್‌, ಸ್ಲೆಟ್‌, ಪಿಎಚ್‌.ಡಿ. ವಿದ್ಯಾರ್ಹತೆ ಹೊಂದಿರುವ ಉಪನ್ಯಾಸಕರಿಗೆ ಪದವಿ ಕಾಲೇಜುಗಳಿಗೆ ಬಡ್ತಿ ನೀಡಬೇಕು. ಅನುದಾನಿತ ಪಿಯು ಕಾಲೇಜು ಉಪನ್ಯಾಸಕರ ಕಾಲ್ಪನಿಕ ವೇತನ ಸಮಸ್ಯೆಯನ್ನು ಬಗೆಹರಿಸಬೇಕು. 2013ರಲ್ಲಿ ಪಿಯು ಶಿಕ್ಷಣ ಇಲಾಖೆಯಿಂದ ನೇಮಕಗೊಂಡು ಪದವಿ ಹೊಂದಿರದ ಉಪನ್ಯಾಸಕರು ವೇತನ ರಹಿತವಾಗಿ ಎರಡು ವರ್ಷಗಳ ಕಾಲ ಬಿ.ಇಡಿ ಪದವಿ ಪೂರೈಸಿ ಇಲಾಖೆಗೆ ಮರಳಿ ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಬಿ.ಇಡಿ. ಪದವಿ ಪಡೆಯಲು ತೆರಳಿದ ಎರಡು ವರ್ಷಗಳ ಅವಧಿಯನ್ನು ವೇತನ ಸಹಿತ ರಜೆ ಎಂದು ಪರಿಗಣಿಸಿ ಸೂಕ್ತ ಆದೇಶ ಹೊರಡಿಸಬೇಕು’ ಎಂದರು.

ಅನುದಾನಿತ ಪದವಿ ಕಾಲೇಜುಗಳಿಂದ ಬೇರ್ಪಟ್ಟಿರುವ ಅನುದಾನ ರಹಿತ ಪಿ.ಯು. ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರನ್ನು ಅನುದಾನಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಶಿಕ್ಷಣ ಸಚಿವ ಎಸ್‌. ಸುರೇಶಕುಮಾರ್‌ ಅವರಿಗೆ ಸಲ್ಲಿಸಲಾಯಿತು.

ಸಂಘದ ಗೌರವ ಅಧ್ಯಕ್ಷ ನಾಮದೇವ ಕಡಕೋಳ, ಅಧ್ಯಕ್ಷ ಜೆ. ಮಲ್ಲಪ್ಪ, ಕಾರ್ಯಾಧ್ಯಕ್ಷ ಶರಣಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ನರಸಪ್ಪ ರಂಗೋಲಿ, ಖಜಾಂಚಿ ಬಸಣ್ಣ ಪೂಜಾರಿ, ರಾಜ್ಯ ಪದಾಧಿಕಾರಿಗಳಾದ ಶಿವರಾಯ ಮಾಲಿಪಾಟೀಲ, ಡಾ.ಭೀಮರಾಯ ಅರಕೇರಿ, ಬಿ.ಎಸ್‌.ಮಾಲಿಪಾಟೀಲ, ಚನ್ನಬಸಪ್ಪ ಗವಿ, ಸುಲೇಖಾ ಮಾಲಿಪಾಟೀಲ, ತಾಲ್ಲೂಕು ಅಧ್ಯಕ್ಷರಾದ ಶಿವಕುಮಾರ ಕರಹರಿ (ಆಳಂದ), ಅಲ್ಲಾ ಪಟೇಲ ಬಿರಾದಾರ (ಚಿತ್ತಾಪೂರ), ಮಹಾದೇವ ವಿ. ನಲಕಂಟೆ (ಕಲಬುರ್ಗಿ ದಕ್ಷಿಣ), ಶಾಂತರಸ ಎಸ್‌. ಹೊಸಮನಿ (ಅಫಜಲಪುರ), ಶಂಕರ ಹೂಗಾರ (ಜೇವರ್ಗಿ), ಯಲ್ಲಪ್ಪ ತಳವಾರ (ಕಲಬುರ್ಗಿ ಉತ್ತರ), ಮಲ್ಲಿಕಾರ್ಜುನ ಪಾಲಮೋರ್ (ಚಿಂಚೋಳಿ), ಸೇಡಂನ ಭೀಮರೆಡ್ಡಿ ಭಜ್ಜಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT