ಚಿತ್ತಾಪುರ: ತಾಲ್ಲೂಕಿನ ದಂಡಗುಂಡ ಗ್ರಾಮದ ಗುಡ್ಡದ ಅರಣ್ಯ ಪ್ರದೇಶದಲ್ಲಿ ಶನಿವಾರ ಆಕಳು ಕರುವಿನ ಮೇಲೆ ಚಿರತೆ ದಾಳಿ ನಡೆಸಿದೆ.
ಗ್ರಾಮದ ಹಣಮಂತ ಭೀಮಣ್ಣ ಅವರಿಗೆ ಸೇರಿದ ಆಕಳು ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಹೊತ್ತೊಯ್ಯಲು ಪ್ರಯತ್ನಿಸಿದೆ. ಹಣಮಂತ ಅವರು ಜೋರಾಗಿ ಚೀರಾಡಿದಾಗ ಕರುವನ್ನು ಬಿಟ್ಟು ಪರಾರಿಯಾಗಿದೆ.
‘ಕರುವಿಗೆ ಚಿರತೆ ಹಿಡಿದಿದ್ದರಿಂದ ತೀವ್ರ ಗಾಯವಾಗಿದೆ. ಕರುವು ಹಾಲು ಕುಡಿಯುತ್ತಿಲ್ಲ. ಬಾಯಿಯಲ್ಲಿ ರೊಟ್ಟಿ ಇಟ್ಟರೂ ತಿನ್ನುತ್ತಿಲ್ಲ’ ಎಂದು ಹಣಮಂತ ‘ಪ್ರಜಾವಾಣಿ’ಗೆ ತಿಳಿಸಿದರು.
ಸೆ.2ರ ರಾತ್ರಿ ದಂಡಗುಂಡ–ಯಾಗಾಪುರಕ್ಕೆ ರಸ್ತೆಯ ಮಾರ್ಗದಲ್ಲಿ ಚಿರತೆಯೊಂದು ಕಾರಿನ ಲೈಟಿನ ಬೆಳಕಿನಲ್ಲಿ ಕಾಣಿಸಿಕೊಂಡಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಚಿರತೆಯನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳ ತಂಡ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸಿ ಬೋನನ್ನು ಇರಿಸಿದ್ದರು. ಆದರೆ, ಚಿರತೆ ಅತ್ತ ಸುಳಿದಿರಲಿಲ್ಲ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.
ರೈತರು ಮತ್ತು ದನಗಾಹಿಗಳು ಕುರಿ, ಆಡು, ಹಸು, ಎಮ್ಮೆಗಳನ್ನು ಮೇಯಿಸಲು ಸಹಜವಾಗಿ ಅರಣ್ಯ ಪ್ರದೇಶದಲ್ಲಿ ಹೋಗುತ್ತಾರೆ. ಅರಣ್ಯದೊಳಗಿರುವ ಚಿರತೆ ಆಹಾರಕ್ಕೆಂದು ಬಯಲಿಗೆ ಬಂದು ದಾಳಿ ಮಾಡಿ ಹಸು, ಕುರಿ, ಆಡುಗಳನ್ನು ಹೊತ್ತೊಯುತ್ತದೆ ಎಂದು ಗ್ರಾಮಸ್ಥರ ಅಲವತ್ತುಕೊಂಡರು.
‘ಆಕಳ ಕರುವಿಗೆ ಚಿರತೆ ಹಿಡಿದು ಗಾಯಗೊಳಿಸಿ ಬಿಟ್ಟು ಹೋಗಿರುವುದು ಗಮನಕ್ಕೆ ಬಂದಿದೆ. ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ವಿಜಯಕುಮಾರ ಬಡಿಗೇರ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.