ಚಿತ್ತಾಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ದಂಡಗುಂಡ ಗ್ರಾಮದ ಬಳಿ ಶನಿವಾರ ರಾತ್ರಿ ಚಿರತೆ ಪ್ರತ್ಯಕ್ಷವಾಗಿದೆ ಎನ್ನುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಶನಿವಾರ ರಾತ್ರಿ ವಿದ್ಯಾನಂದ ಹಿರೇಮಠ ಎಂಬುವವರು ಕಾರಿನಲ್ಲಿ ದಂಡಗುಂಡ ಗ್ರಾಮಕ್ಕೆ ತೆರಳುತ್ತಿದ್ದಾಗ ಕಾರಿನ ಲೈಟ್ ಬೆಳಕಿನಲ್ಲಿ ಚಿರತೆ ಕಂಡು ವಿಡಿಯೊ ಮಾಡಿದ್ದಾರೆ. ಅದರೆ, ವಿಡಿಯೊದಲ್ಲಿ ಚಿರತೆ ಇರುವಿಕೆ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಚಿರತೆ ನಮ್ಮ ಕಡೆಗೆ ಬರುತ್ತಿದೆ ಎನ್ನುವ ಧ್ವನಿ ವಿಡಿಯೊದಲ್ಲಿದೆ.
ಪ್ರತಿ ವರ್ಷದ ಸಂಪ್ರದಾಯದಂತೆ ಶ್ರಾವಣ ಮಾಸದ ಮೂರನೆ ಸೋಮವಾರ ದಂಡಗುಂಡ ಬಸವಣ್ಣನ ಜಾತ್ರೆ, ಪಲ್ಲಕ್ಕಿ ಉತ್ಸವ, ರಥೋತ್ಸವ ನಡೆಯುತ್ತದೆ. ರಥೋತ್ಸವಕ್ಕಿಂತ ಒಂದು ದಿನ ಮುಂಚೆ ಚಿರತೆ ಪ್ರತ್ಯಕ್ಷವಾದ ವಿಡಿಯೊ ವೈರಲ್ ಆಗಿದ್ದು ಬಸವಣ್ಣನ ಭಕ್ತರಲ್ಲಿ ಆತಂಕ ಮೂಡಿಸಿದೆ.
ವಾರದಿಂದ ಚಿರತೆ ಓಡಾಟ: ದಂಡಗುಂಡ, ಯಾಗಾಪುರ ಗ್ರಾಮಗಳ ನಡುವೆ ಇರುವ ಗುಡ್ಡದ ಅರಣ್ಯ ಪ್ರದೇಶದಲ್ಲಿ ಚಿರತೆ ಓಡಾಡುತ್ತಿರುವುದನ್ನು ಜನರು ಗಮನಿಸಿದ್ದಾರೆ. ದನಕರು, ಕುರಿ ಅಡು ಮೇಯಿಸಲೆಂದು ಹೊಲಕ್ಕೆ ಹೋಗಿದ್ದಾಗ ಸಾಬಣ್ಣ ಗುಡ್ಡೆ ಅವರ ಮೂರು ಕುರಿ, ನರಸಪ್ಪ ಗುಡ್ಡೆ ಅವರ ಎರಡು ಕುರಿ, ಭೀಮಣ್ಣ ಮರೆನೋರ ಅವರ ಎರಡು ಹಸುವಿನ ಕರು ಹಿಡಿದುಕೊಂಡು ಹೋಗಿದೆ. ದೊಡ್ಡ ತಾಂಡಾದ ಹತ್ತಿರ ಎರಡು ಕುರಿ ಹಿಡಿದುಕೊಂಡು ಹೋಗಿದೆ ಎಂದು ದಂಡಗುಂಡ ಗ್ರಾಮಸ್ಥರು ಹೇಳಿದ್ದಾರೆ.
ಗ್ರಾಮಕ್ಕೆ ಅರಣ್ಯಾಧಿಕಾರಿ ಭೇಟಿ: ದಂಡಗುಂಡ ಬಳಿ ಚಿರತೆ ಕಂಡಿದೆ ಎನ್ನುವ ಮಾಹಿತಿ ಆಧರಿಸಿ ವಲಯ ಅರಣ್ಯಾಧಿಕಾರಿ ವಿಜಯಕುಮಾರ ಬಡಿಗೇರ ಅವರು ಸಿಬ್ಬಂದಿಯೊಂದಿಗೆ ಭಾನುವಾರ ಬೆಳಗ್ಗೆ ಗ್ರಾಮಕ್ಕೆ ಭೇಟಿ ನೀಡಿ ಚಿರತೆ ಓಡಾಡಿರುವ ಬಗ್ಗೆ ಮಾಹಿತಿ ಕಲೆ ಹಾಕಿದರು.
ದೃಢಪಟ್ಟರೆ ಸೆರೆ ಹಿಡಿಯಲು ಕಾರ್ಯಾಚರಣೆ: ಚಿರತೆ ಓಡಾಡಿರುವ ಕುರಿತು ದೃಢಪಟ್ಟರೆ ಅದನ್ನು ಸೆರೆ ಹಿಡಿಯಲು ಬೋನು ಅಳವಡಿಸಿ ಕಾರ್ಯಾಚರಣೆ ನಡೆಸುತ್ತೇವೆ. ಮಳೆ ಬಂದಿದ್ದರಿಂದ ಚಿರತೆ ಓಡಾಡಿದ ಹೆಜ್ಜೆ ಗುರುತು ಸಿಗುವುದು ಎಂದು ವಲಯ ಅರಣ್ಯಾಧಿಕಾರಿ ವಿಜಯಕುಮಾರ ಅವರು ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.
ರೈತರು ತಮ್ಮ ದನಕರು ತೆಗೆದುಕೊಂಡು ಒಬ್ಬಂಟಿಗರಾಗಿ ಹೋಗಬಾರದು. ಜನರು ಗುಂಪಾಗಿ ಹೊಲಕ್ಕೆ ಹೋಗಿ ಬರುವುದು ಮಾಡಬೇಕು. ಕಾಡು ಪ್ರಾಣಿಗಳ ಕುರಿತು ತುಂಬಾ ಜಾಗೃತೆ ವಹಿಸಬೇಕು. ಈ ಕುರಿತು ದಂಡಗುಂಡ, ಸಂಕನೂರ, ಯಾಗಾಪುರ ಗ್ರಾಮಗಳಲ್ಲಿ ಡಂಗುರ ಸಾರಿ ಜನರಿಗೆ ಜಾಗೃತಿ ಮೂಡಿಸಲಾಗಿದೆ ಎಂದು ಅವರು ತಿಳಿಸಿದರು.
ಅನಾಮಿಕರು ಹಾಕಿದ್ದ ಬಲೆಗೆ ಚಿರತೆ?: ದಂಡಗುಂಡ ಯಾಗಾಪುರ ಅರಣ್ಯ ಪ್ರದೇಶದಲ್ಲಿ ಕಾಡು ಹಂದಿ ಸೆರೆ ಹಿಡಿಯಲೆಂದು ಅನಾಮಿಕರು ಹಾಕಿದ್ದ ಬಲೆಗೆ ಚಿರತೆಯೊಂದು ಸಿಲುಕಿ ಬಿದ್ದು ಒದ್ದಾಡಿದ ಘಟನೆ ಕಳೆದ ಒಂದು ವಾರದ ಹಿಂದೆ ಜರುಗಿದ ಕುರಿತು ಗ್ರಾಮಸ್ಥರಿಂದ ತಿಳಿದು ಬಂದಿದೆ.
ಬಲೆಗೆ ಸಿಲುಕಿದ್ದ ಚಿರತೆ ಏನಾಗಿದೆ ಎಂಬುದರ ಕುರಿತು ಮಾಹಿತಿ ಹೊರಬಂದಿಲ್ಲ. ಎರಡು ಚಿರತೆಗಳು ಓಡಾಡುತ್ತಿದ್ದವು. ಈಗ ಒಂದು ಚಿರತೆ ಮಾತ್ರ ಶನಿವಾರ ಗೋಚರಿಸಿದ್ದು ರೈತರಲ್ಲಿ, ಜನರಲ್ಲಿ ಭಯ, ಆತಂಕ ಕಾಡುತ್ತಿದೆ.
ಹಂದಿ ಹಿಡಿಯಲೆಂದು ಅರಣ್ಯದೊಳಗೆ ಬಲೆ ಹಾಕಿರುವ ಮತ್ತು ಬಲೆಗೆ ಚಿರತೆ ಸಿಲುಕಿ ಬಿದ್ದಿರುವ ಕುರಿತು ಮಾಹಿತಿ ಲಭಿಸಿಲ್ಲ ಎಂದು ಅರಣ್ಯಾಧಿಕಾರಿ ವಿಜಯಕುಮಾರ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.