ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಜೀವ ಬೆದರಿಕೆ ಹಾಕಿ ₹1 ಲಕ್ಷ ಸುಲಿಗೆ’

ಎಫ್‌ಐಆರ್ ಹಿಂಪಡೆಯದಿದ್ದರೆ ಅಟ್ರಾಸಿಟಿ ಬೆದರಿಕೆ; ಆರೋಪ
Published 1 ಸೆಪ್ಟೆಂಬರ್ 2024, 3:19 IST
Last Updated 1 ಸೆಪ್ಟೆಂಬರ್ 2024, 3:19 IST
ಅಕ್ಷರ ಗಾತ್ರ

ಕಲಬುರಗಿ: ‘ರಿಯಲ್ ಎಸ್ಟೇಟ್ ವಹಿವಾಟಿನ ಸಂಬಂಧ ದಲಿತ ಸೇನೆ ಅಧ್ಯಕ್ಷ ಹಣಮಂತ ಯಳಸಂಗಿ ಹಾಗೂ ಆತನ ಸಂಗಡಿಗರು ಜೀವ ಬೆದರಿಕೆ ಹಾಕಿ ₹1 ಲಕ್ಷ ಕಸಿದುಕೊಂಡಿದ್ದಾರೆ’ ಎಂದು ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಕರಬಸಪ್ಪ ಮಲ್ಲಿಕಾರ್ಜುನ ದೇಶಮುಖ ಆರೋಪಿಸಿದರು.

‘ನನ್ನ ರಿಯಲ್ ಎಸ್ಟೇಟ್‌ ವಹಿವಾಟಿನಲ್ಲಿ ತುಮಕೂರಿನ ಜ್ಯೋತಿ ಅವರು ₹1.20 ಕೋಟಿ ಹೂಡಿಕೆ ಮಾಡಿದ್ದರು. ಹೂಡಿಕೆಗೆ ತಕ್ಕಷ್ಟು ಲಾಭಾಂಶ ನೀಡಿದ್ದರೂ ಇನ್ನೂ ಹಣ ಬರಬೇಕಿದೆ ಎಂದು ಜ್ಯೋತಿ ಅವರು ಕೋರ್ಟ್ ಮೊರೆ ಹೋಗಿದ್ದಾರೆ. ಈ ಸಂಬಂಧ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇದೇ ವಿಚಾರವಾಗಿ ಜ್ಯೋತಿ, ಯಳಸಂಗಿ ಹಾಗೂ ಆತನ ಸಂಗಡಿಗರು ಕಲಬುರಗಿಯಲ್ಲಿನ ಕಚೇರಿಗೆ ಬಂದು ಗಲಾಟೆ ಮಾಡಿದ್ದಾರೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದರು.

‘ಯಳಸಂಗಿ ಅವರು ನನಗೆ ಅವಾಚ್ಯ ಪದಗಳಿಂದ ಬೈದು, ‘ಕಲಬುರಗಿ ನಗರದಲ್ಲಿನ ರಿಯಲ್ ಎಸ್ಟೇಟ್ ದಂಧೆ ಮಾಡುವ ಎಲ್ಲರೂ ನಮ್ಮ ಸೇನೆ ಕಾಲ ಕೆಳಗೆ ಇದ್ದಾರೆ. ನಾವು ಎಷ್ಟು ಹೇಳುತ್ತೇವೋ ಅಷ್ಟು ಕೇಳಬೇಕು. ನಾವು ಕೇಳಿದಷ್ಟು ಹಣ ಕೊಡದೆ ಇದ್ದರೆ ಚಾಕು ಹಾಕುತ್ತೇನೆ’ ಎಂದು ಜೀವ ಬೆದರಿಕೆ ಹಾಕಿದ್ದಾರೆ. ₹ 25 ಲಕ್ಷಕ್ಕೆ ಬೇಡಿಕೆಯನ್ನೂ ಇಟ್ಟಿದ್ದಾರೆ’ ಎಂದು ದೂರಿದರು.

‘ಸೇನೆಯ ಮಂಜುನಾಥ ಭಂಡಾರಿ, ಅರವಿಂದ ಕಮಲಾಪುರ, ರಾಜು ಲೇಂಗಟಿ, ಸಂತೋಷ ಪಾಳಾ ಹಲ್ಲೆ ಮಾಡಲು ಬಂದರು. ಅರವಿಂದ ಅವರು ನನ್ನ ತಲೆಗೆ ಪಿಸ್ತೂಲ್ ಹಿಡಿದು, ಅವಳ (ಜ್ಯೋತಿ) ಹಣ ಕೊಡುವಂತೆ ತಾಕೀತು ಮಾಡಿದ್ದಾರೆ. ಅಂಗಿ ಹಿಡಿದು ಎಳೆದಾಡಿ ಕಾರಿನಲ್ಲಿ ಕೂಡಿ ಹಾಕಿ, ನನ್ನ ಬಳಿ ಇದ್ದ ₹1 ಲಕ್ಷ ಕಸಿದುಕೊಂಡು ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿದರು.

‘ಹಲ್ಲೆಯ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಕೇಸ್ ಹಿಂದಕ್ಕೆ ತೆಗೆದುಕೊಳ್ಳದೆ ಇದ್ದರೆ ನನ್ನ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸುವುದಾಗಿ ಹೆದರಿಸುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿ ಬೆಂಗಳೂರು, ಕಲಬುರಗಿ ಸೇರಿ ಹಲವೆಡೆ ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಿದ್ದೇವೆ. ಈ ರೀತಿ ಜೀವ ಬೆದರಿಕೆ ಹಾಕಿ, ಹಣ ಸೂಲಿಗೆ ಮುಂದಾದರೆ ವ್ಯಾಪಾರ ಮಾಡುವುದು ಕಷ್ಟವಾಗುತ್ತದೆ. ಪೊಲೀಸ್ ಕಮಿಷನರ್‌ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ಆರೋಪಿಗಳನ್ನು ಬಂಧಿಸಬೇಕು’ ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸುಧಾಕರ್, ಅಂಬರೇಶ, ಸುರೇಶ, ರಾಜುಕುಮಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT