ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡ್ರಾಮಿ: ಜೋತು ಬಿದ್ದ ವಿದ್ಯುತ್ ತಂತಿ

ವಿದ್ಯುತ್ ಕಂಬಗಳಿಗೆ ಹಬ್ಬಿಕೊಂಡ ಬಳ್ಳಿ, ಅಪಾಯದ ಭೀತಿಯಲ್ಲಿ ಜನರು
Last Updated 5 ನವೆಂಬರ್ 2020, 2:35 IST
ಅಕ್ಷರ ಗಾತ್ರ

ಯಡ್ರಾಮಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳಿಗೆ ಅಳವಡಿಸಿರುವ ಬೀದಿ ದೀಪಗಳ ಸ್ವಿಚ್ ಬೋರ್ಡ್‌ಗಳು ತೆರೆದುಕೊಂಡಿವೆ. ಹಳೆಯ ವಿದ್ಯುತ್ ಕಂಬಗಳ ತಂತಿಗಳು ಜೋತು ಬಿದ್ದು ಅಪಾಯವನ್ನು ಆಹ್ವಾನಿಸುತ್ತಿವೆ.

ವಿದ್ಯುತ್ ಕಂಬಗಳ ಮೇಲೆ ಬಳ್ಳಿ ಬೆಳೆದು ವಿದ್ಯುತ್ ಪ್ರವಹಿಸುವ ತಂತಿಯವರೆಗೆ ತಲುಪಿವೆ. ಜೆಸ್ಕಾಂ ಸಿಬ್ಬಂದು ಕಂಬ, ತಂತಿಗಳಿಗೆ ತಾಗುವ ಬಳ್ಳಿಗಳ ತೆರವು ಕಾರ್ಯ ಇನ್ನೂ ನಡೆಸಿಲ್ಲ. ಸುರಕ್ಷತೆಯ ಚೌಕಟ್ಟು ಇಲ್ಲದಿರುವುದರಿಂದ ಅಪಾಯದ ಸ್ಥಿತಿ ಉಂಟಾಗಿದೆ. ಇದರಿಂದಾಗಿ ಪಟ್ಟಣ ಮತ್ತು ಗ್ರಾಮಗಳಲ್ಲಿ ಸಂಚಾರಿಸಲು ಸಾರ್ವಜನಿಕರು, ವಾಹನ ಸವಾರರು ಭಯಪಡುವಂತಾಗಿದೆ.

ಸೂಕ್ತ ನಿರ್ವಹಣೆ ಇಲ್ಲದೆ ಸ್ವಿಚ್ ಬೋರ್ಡ್‌ಗಳು ತೆರೆದುಕೊಂಡು ಅವುಗಳ ವೈರ್‌ಗಳು ನೇತಾಡುತ್ತಿವೆ. ಪಟ್ಟಣದಲ್ಲಿ ತಾಲ್ಲೂಕು ಪಂಚಾಯಿತಿ ಕಚೇರಿ ಬಳಿ ಎರಡು ವರ್ಷಗಳಿಂದ ಕಂಬದ ಸ್ವಿಚ್ ಬೋರ್ಡ್‌ ಕೈಗೆಟುಕುವ ಸ್ಥಿತಿಯಲ್ಲಿದೆ. ಫ್ಯೂಸ್ ಹಾಗೂ ಅದರ ವೈರ್‌ಗಳು ಹೊರಬಂದು ನೇತಾಡಿಕೊಂಡಿವೆ. ಕೆಲವೊಮ್ಮೆ ವಿದ್ಯುತ್‌ ಪ್ರವಹಿಸುತ್ತಿರುತ್ತದೆ ಎನ್ನುತ್ತಾರೆ ಸ್ಥಳೀಯರು.

ಯಾರು ಹೊಣೆ?: ಪಟ್ಟಣದ ಹಲವೆಡೆ ವಿದ್ಯುತ್ ಕಂಬಗಳ ಕೆಳಗಡೆ ವ್ಯಾಪರಸ್ಥರು ವ್ಯಾಪಾರ ಮಾಡುತ್ತಾರೆ. ವಾಹನ ಸವಾರರು ವಾಹನಗಳನ್ನು ಕಂಬಗಳ ಬದಿಯಲ್ಲಿ ನಿಲುಗಡೆ ಮಾಡುತ್ತಾರೆ. ರಸ್ತೆಯಲ್ಲಿ ಸಂಚರಿಸುವ ಮಕ್ಕಳು ಕಂಬಗಳನ್ನು ಮುಟ್ಟುತ್ತಾರೆ. ಕಂಬ ಬಿದ್ದು, ವಿದ್ಯುತ್ ತಂತಿಗಳ ಸ್ವರ್ಶಿಸಿ ಅನಾಹುತವಾದರೆ ಯಾರು ಹೊಣೆ ಎನ್ನುವ ಪ್ರಶ್ನೆ ಇಲ್ಲಿ ಮೂಡುತ್ತದೆ. ಇಲ್ಲಿನ ಜೆಸ್ಕಾಂ ಉಪ ವಿಭಾಗ ಕೇಂದ್ರದ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಅರಳಗುಂಡಗಿಯಲ್ಲಿ ಈಚೆಗೆ ಲೈನ್‌ಮನ್ ಸಾವನ್ನಪ್ಪಿದರು.

ಈಗ ಯಡ್ರಾಮಿ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ 30 ವರ್ಷಗಳಿಗಿಂತಲೂ ಹಳೆಯದಾದ ಕಂಬಗಳಲ್ಲಿ ಕೆಲವು ಬಾಗಿದರೆ ಇನ್ನು ಕೆಲವು ಮುರಿದು ಬಿದ್ದಿವೆ. ಕಂಬ ಬಿದ್ದ ಸ್ಥಳದಲ್ಲಿ ಹೊಸ ಕಂಬ ಹಾಕಿಲ್ಲ. ಕೆಲವು ಕಂಬಗಳ ಒಳಗಿನ ಸರಳುಗಳು ಕಾಣುತ್ತಿದ್ದರೂ ಕಂಬ ತೆರವು ಮಾಡಿ ಹೊಸ ಕಂಬ ಹಾಕಿಲ್ಲ. ಒಂದು ವೇಳೆ ಕಂಬ ಮುರಿದು ಬಿದ್ದರೆ ಅಪಾಯ ಖಂಡಿತ. ಇಲ್ಲಿನ ಜೆಸ್ಕಾಂ ಉಪ ವಿಭಾಗ ಕೇಂದ್ರ ಜನರ ಜೀವನದ ಜೊತೆ ಆಟವಾಡುತ್ತಿದೆ ಎಂದು ಈ ಭಾಗದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈಗಷ್ಟೇ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಸ್ಥಳಗಳನ್ನು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು
- ರಾಜೇಂದ್ರ ಕಟ್ಟಿಮನಿ, ಎಇಇ, ಯಡ್ರಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT