ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಲಾರಿ ಅಪಘಾತವೆಂದು ಬಿಂಬಿಸಿ ₹63.16 ಲಕ್ಷ ಮೌಲ್ಯದ ಮದ್ಯ ವಂಚನೆ

Published 18 ಜೂನ್ 2024, 15:58 IST
Last Updated 18 ಜೂನ್ 2024, 15:58 IST
ಅಕ್ಷರ ಗಾತ್ರ

ಕಲಬುರಗಿ: ಕೋಟ್ಯಂತರ ರೂಪಾಯಿ ಮದ್ಯ ಸಾಗಿಸುತ್ತಿದ್ದ ಲಾರಿ ಚಾಲಕ ಮತ್ತು ಇತರರು ಮಾರ್ಗ ಮಧ್ಯದಲ್ಲಿ ಲಾರಿ ಉರುಳಿ ಬಿದ್ದಿದೆ ಎಂದು ಬಿಂಬಿಸಿ, ₹63.16 ಲಕ್ಷ ಮೌಲ್ಯದ ಮದ್ಯದ ಬಾಕ್ಸ್‌ಗಳನ್ನು ವಂಚಿಸಿದ ಆರೋಪದಡಿ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿಯ ಟ್ರಾನ್ಸ್‌ಪೋರ್ಟ್‌ವೊಂದರ ಶಾಖಾ ಮ್ಯಾನೇಜರ್ ಪರಮೇಶ್ವರ ಧನರಾಜ್ ಅವರು ನೀಡಿದ ದೂರಿನ ಅನ್ವಯ ಚಾಲಕ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ಜೂನ್ 8ರ ರಾತ್ರಿ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ ಮದ್ಯದ ತಯಾರಿಕೆ ಕಂಪನಿಗೆ ಸೇರಿದ 1,100 ಮದ್ಯದ ಪೆಟ್ಟಿಗೆಗಳನ್ನು ಲೋಡ್ ಮಾಡಿಕೊಂಡ ಚಾಲಕ ಬೆಳಗಾವಿಯ ರಾಯಬಾಗದಿಂದ ಬೀದರ್‌ಗೆ ಹೊರಟರು. ಜೂನ್ 10ರ ಬೆಳಿಗ್ಗೆ 10.55ಕ್ಕೆ ಲಾರಿ ಮಾಲೀಕ ಶಿವಕುಮಾರ ಅವರು ಪರಮೇಶ್ವರ ಅವರಿಗೆ ಕರೆ ಮಾಡಿ, ‘ವಾಹನದ ಗೇರ್ ಬಾಕ್ಸ್ ಕೆಟ್ಟು ಹೋಗಿದೆ’ ಎಂದು ಹೇಳಿದರು. ಮರುದಿನ (ಜೂ.11) ಬೆಳಿಗ್ಗೆ 11ಕ್ಕೆ ಮತ್ತೆ ಕರೆ ಮಾಡಿ ಸಂಜೆವರೆಗೂ ಬೀದರ್ ತಲುಪುವುದಾಗಿ ಹೇಳಿದರು. ಆ ನಂತರ ಕರೆ ಮಾಡಿದರೂ ಸ್ವೀಕರಿಸಲಿಲ್ಲ ಎಂದು ಮ್ಯಾನೇಜರ್ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

ಜೂ.12ರ ಬೆಳಿಗ್ಗೆ 8ಕ್ಕೆ ವಾಹನದ ಮಾಲೀಕ ಮತ್ತೆ ಮ್ಯಾನೇಜರ್‌ಗೆ ಕರೆ ಮಾಡಿ, ‘ಮದ್ಯ ಸಾಗಿಸುತ್ತಿದ್ದ ಲಾರಿ ಫರಹತಾಬಾದ್‌ ಸಮೀಪ ಉರುಳಿ ಬಿದ್ದಿದೆ’ ಎಂದರು.  ಫರಹತಾಬಾದ್‌ ಪೊಲೀಸ್ ಠಾಣೆಯಲ್ಲಿ ದೂರು ಕೊಡುವ ಬದಲು ವಾಹನದ ಮಾಲೀಕ ಸಂಚಾರ ಪೊಲೀಸ್ ಠಾಣೆ–1ರಲ್ಲಿ 1,100 ಮದ್ಯದ ಪೆಟ್ಟಿಗೆಗಳ ಪೈಕಿ ಸುಮಾರು 603 ಪೆಟ್ಟಿಗೆಗಳು ಕಳುವಾಗಿದ್ದಾಗಿ ದೂರು ಕೊಟ್ಟರು ಎಂದು ಮ್ಯಾನೇಜರ್ ದೂರಿನಲ್ಲಿ ತಿಳಿಸಿದ್ದಾರೆ.

ಲಾರಿ ಉರುಳಿ ಬಿದ್ದ ಸ್ಥಳಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದರು. ಗಾಯವಾಗದೆ ಇದ್ದರೂ ವಾಹನದ ಚಾಲಕ ತಲೆಗೆ ಪಟ್ಟಿ ಕಟ್ಟಿಕೊಂಡಿದ್ದರು. ಲಾರಿಯ ಗಾಜಿಗೂ ಯಾವುದೇ ಹಾನಿಯಾಗಿರಲಿಲ್ಲ. ಲಾರಿಯಲ್ಲಿ ವಿವಿಧ ಬ್ರ್ಯಾಂಡ್‌ಗಳ ₹ 1.81 ಕೋಟಿ ಮೌಲ್ಯದ ಮದ್ಯದ ಬಾಕ್ಸ್‌ಗಳು ಇದ್ದವು. ಅವುಗಳ ಪೈಕಿ ₹63.16 ಲಕ್ಷ ಮೌಲ್ಯದ ಮದ್ಯದ ಪೆಟ್ಟಿಗೆಗಳು ಲಾರಿ ಉರುಳಿ ಬಿದ್ದ ಸ್ಥಳದಲ್ಲಿ ಇರಲಿಲ್ಲ. ವಾಹನದ ಚಾಲಕ ಮತ್ತು ಇತರರು ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿ ಮ್ಯಾನೇಜರ್ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT