ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಪ್ರತಿಭೆ ಒರೆಗೆ ಹಚ್ಚಲಿದೆ ಜ್ಞಾನಗಂಗಾ...

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಂಘದಿಂದ ಪ್ರಕಟವಾಗುವ ಪತ್ರಿಕೆ
Last Updated 17 ಮಾರ್ಚ್ 2021, 3:23 IST
ಅಕ್ಷರ ಗಾತ್ರ

ಕಲಬುರ್ಗಿ: ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳಲ್ಲಿನ ಕತೆ, ಕವಿತೆ, ಪ್ರಬಂಧ ಬರೆಯುವ ಪ್ರತಿಭೆಯನ್ನು ಒರೆಗೆ ಹಚ್ಚಲು ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಂಘವು ಎರಡೂವರೆ ದಶಕದಿಂದ ‘ಜ್ಞಾನಗಂಗಾ’ ಎಂಬ ಸಾಹಿತ್ಯ ಪತ್ರಿಕೆಯನ್ನು ಹೊರತರುತ್ತಿದೆ.

ಕೊರೊನಾ ಲಾಕ್‌ಡೌನ್‌ನಿಂದಾಗಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಿಂದ ಹೊರಗೇ ಉಳಿಯಬೇಕಾಗಿದ್ದರಿಂದ 2020ರಲ್ಲಿ ಪತ್ರಿಕೆ ಹೊರತರಲು ಆಗಿರಲಿಲ್ಲ. ಆದರೆ, ಇದೀಗ ಪ್ರವೇಶ ಪ್ರಕ್ರಿಯೆ ಮುಕ್ತಾಯವಾಗಿ ಆನ್‌ಲೈನ್‌ ಬದಲು ಭೌತಿಕ ತರಗತಿಗಳೇ ನಡೆಯುತ್ತಿರುವುದರಿಂದ ಈ ಪತ್ರಿಕೆಯನ್ನು ಹೊರತರಲು ಕನ್ನಡ ಸಂಘ ಮುಂದಾಗಿದೆ.

ಈ ಪತ್ರಿಕೆಯಲ್ಲಿ ಸಮಕಾಲೀನ ವಿದ್ಯಮಾನಗಳು, ಕನ್ನಡ ಭಾಷೆಯ ಬೆಳವಣಿಗೆ, ಹಳಗನ್ನಡ, ಕನ್ನಡದ ಮಹತ್ವದ ಕವಿಗಳು, ಕನ್ನಡ ಭಾಷೆಯಲ್ಲಿ ಬಂದ ಅಭಿಜಾತ ಕೃತಿಗಳು, ನಾಟಕಗಳು, ಸಂಶೋಧನಾ ಲೇಖನಗಳು ಸೇರಿದಂತೆ ಹಲವು ವಿಷಯಗಳನ್ನು ಹೊಂದಿರುತ್ತದೆ.

ಹೊರತರುವುದು ಹೇಗೆ? ಪತ್ರಿಕೆಯೊಂದನ್ನು ಹೊರಡಿಸುವುದು ಸುಲಭದ ಮಾತಲ್ಲ. ವಿದ್ಯಾರ್ಥಿಗಳಿಂದ ಲೇಖನಗಳನ್ನು ಸಂಗ್ರಹಿಸಿ, ಅವುಗಳನ್ನು ಪರಿಶೀಲಿಸಿ ನಂತರ ಪುಟವಿನ್ಯಾಸ ಮಾಡಿ ಅಚ್ಚಿಗೆ ಕಳುಹಿಸಬೇಕು. ಆದರೆ, ಪತ್ರಿಕೆ ಮುದ್ರಣದ ವೆಚ್ಚವನ್ನು ಭರಿಸುವ ಸವಾಲು ಎದುರಾಗುತ್ತದೆ. ಇದಕ್ಕಾಗಿ ವಿದ್ಯಾರ್ಥಿಗಳಿಂದಲೇ ಶೈಕ್ಷಣಿಕ ವರ್ಷದ ಆರಂಭದಲ್ಲಿ ಶುಲ್ಕದಲ್ಲೇ ಹೆಚ್ಚುವರಿ ಹಣವನ್ನು ಸಂಗ್ರಹಿಸಲಾಗಿರುತ್ತದೆ ಎನ್ನುತ್ತಾರೆ ಕನ್ನಡ ಸಂಘದ ಕಾರ್ಯಾಧ್ಯಕ್ಷರೂ ಆದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್‌.ಟಿ.ಪೋತೆ.

ಕನ್ನಡ ಸಂಘದ ಖಾತೆಯಲ್ಲಿರುವ ಹಣವನ್ನು ಬಳಸಿಕೊಂಡು ಪತ್ರಿಕೆ ಮುದ್ರಣ ಮಾಡಲಾಗುತ್ತದೆ. ಆ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಹಂಚಲಾಗುತ್ತದೆ. ಜೊತೆಗೆ, ಕನ್ನಡ ಅಧ್ಯಯನ ಸಂಸ್ಥೆಯ ಗ್ರಂಥಾಲಯದಲ್ಲಿ ಸಂಗ್ರಹಿಸಲಾಗುತ್ತದೆ. ಶೈಕ್ಷಣಿಕ ವರ್ಷದ ಆರಂಭದಲ್ಲಿ ನಾಲ್ಕು ಸೆಮಿಸ್ಟರ್‌ ವಿದ್ಯಾರ್ಥಿಗಳ ಪೈಕಿ ತಲಾ ಒಬ್ಬರಂತೆ ನಾಲ್ಕು ಜನರನ್ನು ಕನ್ನಡ ಸಂಘದ ಚಟುವಟಿಕೆಗಳಿಗಾಗಿ ನಿಯೋಜಿಸಲಾಗುತ್ತದೆ. ಸಂಘದ ಕಾರ್ಯಾಧ್ಯಕ್ಷರ ಮೇಲ್ವಿಚಾರಣೆಯಲ್ಲಿ ವಿದ್ಯಾರ್ಥಿಗಳಿಂದ ಲೇಖನಗಳನ್ನು ಬರೆಸಲಾಗುತ್ತದೆ.

ಈ ಕುರಿತು ವಿಭಾಗದಲ್ಲಿ ಒಂದು ಸುತ್ತೋಲೆಯನ್ನು ಹೊರಡಿಸಿ ಆಸಕ್ತ ವಿದ್ಯಾರ್ಥಿಗಳಿಗೆ ಲೇಖನ, ಕವನಗಳನ್ನು ಬರೆದುಕೊಡಲು ತಿಳಿಸಲಾಗುತ್ತದೆ. ಅವರಿಗೆ ನಿರ್ದಿಷ್ಟ ಸಮಯವನ್ನು ನೀಡಿದ ಬಳಿಕ ಲೇಖನಗಳನ್ನು ಸಂಗ್ರಹಿಸಿ ಅವುಗಳನ್ನು ಆಮೂಲಾಗ್ರವಾಗಿ ಪರಿಶೀಲಿಸಿ ಆಯ್ಕೆಯಾದ ಲೇಖನಗಳನ್ನು ಒಳಗೊಂಡ 100ರಿಂದ 150 ಪುಟಗಳ ಪತ್ರಿಕೆಯನ್ನು ಹೊರತರಲಾಗುತ್ತದೆ.

ಒಟ್ಟು ಒಂದು ಸಾವಿರ ಪ್ರತಿಗಳನ್ನು ಅಚ್ಚು ಹಾಕಿಸಲಾಗುತ್ತದೆ. ವಿಭಾಗದ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು ಹಾಗೂ ವಿವಿಧ ವಿಭಾಗಗಳ ಪ್ರಾಧ್ಯಾಪಕರಿಗೆ ಪತ್ರಿಕೆಯನ್ನು ವಿತರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT