ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಾಲ ಮನ್ನಾ ಸಮ್ಮಿಶ್ರ ಸರ್ಕಾರದ ಸಾಧನೆ

ಸೇಡಂ: ರೈತರಿಗೆ ‘ಋಣ ಮುಕ್ತ ಪ್ರಮಾಣ ಪತ್ರ’ ವಿತರಣೆ
Last Updated 8 ಡಿಸೆಂಬರ್ 2018, 16:42 IST
ಅಕ್ಷರ ಗಾತ್ರ

ಸೇಡಂ: ‘ರೈತರ ಸಹಕಾರ ಬ್ಯಾಂಕ್‌ಗಳ ಸುಮಾರು ₹9 ಸಾವಿರ ಕೋಟಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ಅಂದಾಜು ₹35 ಸಾವಿರ ಕೋಟಿ ಸೇರಿ ಸುಮಾರು ಸರಿಸುಮಾರು ₹45 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡುವ ಮೂಲಕ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ದೇಶದಲ್ಲಿ ಹಿಂದೆ ಯಾರೂ ಮಾಡದ ಸಾಧನೆ ಮಾಡಿದ್ದಾರೆ’ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.

ತಾಲ್ಲೂಕು ಕ್ರೀಡಾಂಗಣದಲ್ಲಿ ಶನಿವಾರ ‘ಋಣ ಮುಕ್ತ ಪ್ರಮಾಣ ಪತ್ರ ವಿತರಣೆ’ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಮ್ಮಿಶ್ರ ಸರ್ಕಾರ ರೈತರ ಸಂಕಷ್ಟ ಅರಿತು ಸಾಲ ಮನ್ನಾ ಯೋಜನೆಗೆ ಮುಂದಾಗಿದೆ. ರೈತರ ಸಾಲ ಮನ್ನಾ ಘೋಷಣೆಗೆ ಸಚಿವ ಪ್ರಿಯಾಂಕ್‌ ಖರ್ಗೆ, ಉಪ ಮುಖ್ಯಮಂತ್ರಿ ಪರಮೇಶ್ವರ ಅಥವಾ ಯಾರೂ ವಿರೋಧಿಸಿಲ್ಲ. ಎಲ್ಲರೂ ಸಹಕರಿಸಿರುವುದರಿಂದಲೇ ಪ್ರಾಯೋಗಿಕವಾಗಿ ಸೇಡಂ ಮತ್ತು ದೊಡ್ಡಬಳ್ಳಾಪುರದಲ್ಲಿ ‘ಋಣ ಮುಕ್ತ ಪ್ರಮಾಣ ಪತ್ರ ವಿತರಣೆ’ ಸಮಾರಂಭ ನಡೆದಿದೆ. ಮುಂದಿನ ದಿನಗಳಲ್ಲಿ ಇದನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುತ್ತದೆ’ ಎಂದು ಅವರು ಹೇಳಿದರು.

‘ಏನ್ರೀ ಕುಮಾರಸ್ವಾಮಿ ಸುಮ್ನೆ ಓಡಾಡಿಕೊಂಡು ತಿರುಗಾಡ್ತಾರೆ ಅಂತಾರೆ. ಆದರೆ ಕುಮಾರಸ್ವಾಮಿ ಉದ್ರಿಯಲ್ಲ! ಅವ್ರು ನಗದಿ ಇರೋದ್ರಿಂದ್ಲೆ ₹45 ಸಾವಿರ ಕೋಟಿ ಸಾಲ ಮನ್ನಾ ಮಾಡಿ, ರೈತರ ಖಾತೆಗೆ ನಗದು ಹಣ ಜಮಾ ಮಾಡ್ತಿದ್ದಾರೆ’ ಎಂದು ಹೆಮ್ಮೆಯಿಂದ ಹೇಳಿದರು.

ರೈತರಿಗೆ ಜಾತಿ-ಪಕ್ಷವಿಲ್ಲ: ರೈತರಿಗೋಸ್ಕರ ಎಲ್ಲ ರಾಜಕೀಯ ಮುಖಂಡರು ಜಾತಿ-ಪಕ್ಷ ಮರೆತು ಹಗಲಿರುಳು ಶ್ರಮಿಸುವ ಕೆಲಸ ಮಾಡಬೇಕಿದೆ. ಯಾಕೆಂದರೆ ರೈತನಿಗೆ ಜಾತಿ-ಪಕ್ಷ ಗೊತ್ತಿಲ್ಲ. ಹೊಲದಲ್ಲಿ ದುಡಿಯೋದು, ಅನ್ನ ಹಾಕೋದು ಮಾತ್ರ ಗೊತ್ತಿದೆ’ ಎಂದು ಕಾಶೆಂಪೂರ ಉಚ್ಚರಿಸಿದರು.

ತೊಗರಿ ಖರೀದಿ ಕೇಂದ್ರ:ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ‘ಜಿಲ್ಲೆಯ ವಿವಿಧೆಡೆ ಸುಮಾರು 136 ತೊಗರಿ ಖರೀದಿ ಕೇಂದ್ರ ತೆರೆಯಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಸರ್ಕಾರದಿಂದ ಆದೇಶ ಬಂದ ಕೂಡಲೇ ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತದೆ’ ಎಂದು ಭರವಸೆ ನೀಡಿದರು.

ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಮಾತನಾಡಿ, ‘ಸಹಕಾರ ಬ್ಯಾಂಕ್‌ಗಳಲ್ಲಿ ತಾಲ್ಲೂಕಿನ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಸಚಿವ ಬಂಡೆಪ್ಪ ಕಾಶೆಂಪೂರ ಸಹಕರಿಸಬೇಕು. ಕಾಗಿಣಾ ನದಿಗೆ ಕಟ್ಟಿರುವ ಬ್ರಿಡ್ಜ್ ಕಂ ಬ್ಯಾರೆಜ್‌ನಲ್ಲಿ ನೀರಿಲ್ಲ. ಕಾಗಿಣಾ ನದಿಗೆ ನೀರು ಹರಿಸುವ ನಿಟ್ಟಿನಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಯತ್ನಿಸಬೇಕು’ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸ್ವಾಗತವಾಗಿ ಮಾಲಾರ್ಪಣೆ ಮಾಡುವ ಬದಲು ಆ ಹಣವನ್ನು ರೆಡ್ ಕ್ರಾಸ್ ಸಂಸ್ಥೆಗೆ ಚೆಕ್ ಮೂಲಕ ನೀಡಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಸ್ವಾಗತಿಸಿದರು. ಜಿಲ್ಲಾಧಿಕಾರಿ ಆರ್. ವೆಂಟೇಶಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ರಾಜಾ ಪಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ, ಉಪ ವಿಭಾಗಾಧಿಕಾರಿ ಬಿ.ಸುಶೀಲಾ, ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಬಸವರಾಜ ಪಾಟೀಲ ಊಡಗಿ, ಜಗದೇವಯ್ಯ ಗುತ್ತೇದಾರ, ರಾಜೇಶ ಗುತ್ತೇದಾರ ಇದ್ದರು.

*
ಸಮ್ಮಿಶ್ರ ಸರ್ಕಾರ ಸಾಲಮನ್ನಾ ಪ್ರಕ್ರಿಯೆಯಲ್ಲಿ ಸೇಡಂ ತಾಲ್ಲೂಕಿಗೆ ಪ್ರಥಮ ಆದ್ಯತೆ ನೀಡಿರುವುದು ಅಭಿನಂದನೀಯ. ಇದಕ್ಕೆ ಸೇಡಂ ಜನತೆಯ ಪರವಾಗಿ ಕೃತಜ್ಞತೆಗಳು.
-ರಾಜಕುಮಾರ ಪಾಟೀಲ ತೆಲ್ಕೂರ, ಶಾಸಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT