ಮಂಗಳವಾರ, ಸೆಪ್ಟೆಂಬರ್ 21, 2021
27 °C
ಪಾಲಿಕೆಗೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಚಟುವಟಿಕೆ ಬಿರುಸು

ಕಲಬುರ್ಗಿ: ಅದೃಷ್ಟ ಪರೀಕ್ಷೆ: ಪ್ರಾದೇಶಿಕ ಪಕ್ಷಗಳು ಸಜ್ಜು

ಮನೋಜಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಸೆಪ್ಟೆಂಬರ್ 3ರಂದು ನಡೆಯಲಿರುವ ಕಲಬುರ್ಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿಯಲು ಸಣ್ಣ ಹಾಗೂ ಪ್ರಾದೇಶಿಕ ಪಕ್ಷಗಳು ಮುಂದಾಗಿವೆ. ಈ ನಿಟ್ಟಿನಲ್ಲಿ ಆ ಪಕ್ಷಗಳಲ್ಲಿ ಚಟುವಟಿಕೆಯೂ ಬಿರುಸುಗೊಂಡಿದೆ.

ಪಾಲಿಕೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್‌ ಆದ್ಮಿ ಪಕ್ಷ (ಆಪ್‌), ಭ್ರಷ್ಟಾಚಾರ ವಿರೋಧಿ ಹೋರಾಟಗಾರ ರವಿಕೃಷ್ಣಾರೆಡ್ಡಿ ನೇತೃತ್ವದ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಹಾಗೂ ಹೈದರಾಬಾದ್‌ ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್‌ ಇಂಡಿಯಾ ಮಜ್ಲಿಸ್‌ ಇ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷಗಳು ಈ ಬಾರಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ.

ರಾಜ್ಯದ ಮೂರು ಪ್ರಮುಖ ಮಹಾನಗರ ಪಾಲಿಕೆಗಳಾದ ಕಲಬುರ್ಗಿ, ಹುಬ್ಬಳ್ಳಿ–ಧಾರವಾಡ ಹಾಗೂ ಬೆಳಗಾವಿ ಪಾಲಿಕೆಗಳ ವ್ಯಾಪ್ತಿಯಲ್ಲಿ ಕೆಲ ಕಾಲದಿಂದ ಚಟುವಟಿಕೆಯನ್ನು ಬಿರುಸುಗೊಳಿಸಿರುವ ಆಮ್ ಆದ್ಮಿ ಪಕ್ಷವು ಈಗಾಗಲೇ ಕಲಬುರ್ಗಿ ಪಾಲಿಕೆ ವ್ಯಾಪ್ತಿಯ 46 ವಾರ್ಡ್‌ಗಳಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದೆ. ಮೀಸಲಾತಿ ಪಟ್ಟಿ ಹೊರಬೀಳುತ್ತಿದ್ದಂತೆಯೇ ಮೀಸಲಾತಿವಾರು ಅಭ್ಯರ್ಥಿಗಳನ್ನು ಗುರುತಿಸಿದ್ದು,

ಅವರ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲು ಹಾಗೂ ಉಳಿದ ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ರಾಜ್ಯ ಸಮಿತಿಯಿಂದ ಒಂದು ತಂಡ ಇದೇ 13ರಂದು ಕಲಬುರ್ಗಿಗೆ ಬರಲಿದೆ. ‌

ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ದೆಹಲಿ ಆಮ್‌ ಆದ್ಮಿ ಪಕ್ಷದ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾಗಿರುವ ಇಮ್ರಾನ್ ಹುಸೇನ್ ಹಾಗೂ ಶಾಸಕಿ ಅತಿಶಿ ಅವರು ನಗರಕ್ಕೆ ಬರಲಿದ್ದಾರೆ.

ಆಗಸ್ಟ್ 20ರಂದು ಬರುವ ಮತ್ತೊಂದು ಮುಖಂಡರ ತಂಡ ಚುನಾವಣೆ ಮುಗಿಯುವವರೆಗೂ ಇಲ್ಲಿಯೇ ಮೊಕ್ಕಾಂ ಹೂಡಲಿದೆ ಎನ್ನುತ್ತಾರೆ ಪಕ್ಷದ ಮುಖಂಡರು.

ಆಪ್‌ನ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ ಅವರೂ ಕೆಲ ದಿನಗಳಲ್ಲಿ ನಗರಕ್ಕೆ ಬರಲಿದ್ದು, ಚುನಾವಣಾ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.

ಇತ್ತೀಚೆಗೆ ಮುಕ್ತಾಯವಾದ ಮಸ್ಕಿ ಉಪಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವೂ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಎಂಟು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ.

ಇದೇ 17ರಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಅವರು ನಗರಕ್ಕೆ ಬರಲಿದ್ದು, ಅಂದು ಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆ ಇದೆ.

ಇತ್ತೀಚೆಗೆ ಬಸವ ಕಲ್ಯಾಣ ಉಪಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಎಐಎಂಐಎಂ ಪಕ್ಷವು ಮುಸ್ಲಿಂ ಬಾಹುಳ್ಯದ ಕಲಬುರ್ಗಿ ಉತ್ತರ ಕ್ಷೇತ್ರದ ವ್ಯಾಪ್ತಿಯ ವಾರ್ಡುಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಹೀಂಖಾನ್ ಮಿರ್ಚಿ ಈಗಾಗಲೇ ಘೋಷಿಸಿದ್ದಾರೆ.

ಇದಕ್ಕೆ ಪೂರಕವಾಗಿ ಕಳೆದ ಫೆಬ್ರುವರಿಯಲ್ಲಿ ಪ್ರಭಾವಿ ಮುಸ್ಲಿಂ ಮುಖಂಡ ಇಲಿಯಾಸ್ ಬಾಗವಾನ್ ಕಾಂಗ್ರೆಸ್‌ ತೊರೆದು ಎಐಎಂಐಎಂ ಪಕ್ಷ ಸೇರಿದ್ದರು.

ಜೆಡಿಎಸ್‌ ಪೈಪೋಟಿ
ಜೆಡಿಎಸ್‌ನಲ್ಲಿ ಇಂದು ಹೇಳಿಕೊಳ್ಳುವಂಥ ಶಕ್ತಿ ಉಳಿದಿಲ್ಲ. ರಾಜ್ಯದ ವರಿಷ್ಠರೂ ಜಿಲ್ಲೆಯ ಸಂಘಟನೆಯತ್ತ ಗಮನ ಹರಿಸಿಲ್ಲ ಎಂಬ ಆರೋಪಗಳ ಮಧ್ಯೆಯೇ ಪಾಲಿಕೆ ಚುನಾವಣೆಯ ಮೂಲಕ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮುಂದಾಗಿದೆ. ತಮ್ಮ ಪಕ್ಷದ ಮುಖಂಡರನ್ನು ಕಣಕ್ಕಿಳಿಸುವುದರ ಜೊತೆಗೆ ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಇರುವವರನ್ನು ಕೊನೆ ಗಳಿಗೆಯಲ್ಲಿ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ನೀಡುವ ಚಿಂತನೆ ನಡೆದಿದೆ.

‘ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸಲಿದ್ದು, ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಈಗಾಗಲೇ ಟಿಕೆಟ್ ಆಕಾಂಕ್ಷಿಗಳು ಪಕ್ಷದ ವರಿಷ್ಠರನ್ನು ಭೇಟಿ ಮಾಡುತ್ತಿದ್ದಾರೆ’ ಎಂದು ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ್ ಸೂರನ್ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.