ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಾಯುಕ್ತ ದಾಳಿ: ತಲೆ ಮರೆಸಿಕೊಂಡ ಬಿಇಒ

Published 18 ಮೇ 2024, 14:04 IST
Last Updated 18 ಮೇ 2024, 14:04 IST
ಅಕ್ಷರ ಗಾತ್ರ

ಕಲಬುರಗಿ: ನಿವೃತ್ತ ಶಿಕ್ಷಕರೊಬ್ಬರ ಪಿಂಚಣಿ ಹಣವನ್ನು ಮಂಜೂರು ಮಾಡಲು ₹ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆಳಂದ ಬಿಇಒ ಹಣಮಂತ ರಾಠೋಡ ಪರವಾಗಿ ಹಣ ಪಡೆಯುತ್ತಿದ್ದ ಮಧ್ಯವರ್ತಿ ರಾಧಾಕಷ್ಣ ಎಂಬಾತನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ದಾಳಿಯ ಮಾಹಿತಿ ಸಿಗುತ್ತಿದ್ದಂತೆಯೇ ಬಿಇಒ ಹಣಮಂತ ಪರಾರಿಯಾಗಿದ್ದಾರೆ.

ಬಿಇಒ ಪರವಾಗಿ ಲಂಚದ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಮಧ್ಯವರ್ತಿ, ಕಾಳಗಿ ತಾಲ್ಲೂಕಿನ ಕೋಡ್ಲಿ ತಾಂಡಾದ ಶಿಕ್ಷಕ ರಾಧಾಕೃಷ್ಣನನ್ನು ಲೋಕಾಯುಕ್ತ ‍ಪೊಲೀಸರು ಬಂಧಿಸಿದರು.

ಶಿಕ್ಷಕಿಯೊಬ್ಬರ ಪಿಂಚಣಿಗೆ ಸಂಬಂಧಿಸಿದ ಕಡತಗಳಿಗೆ ಸಹಿ ಮಾಡಲು ಲಂಚ ನೀಡುವಂತೆ ಬಿಇಒ ಹಣಮಂತ ರಾಠೋಡ ಬೇಡಿಕೆ ಇಟ್ಟಿದ್ದರು. ಶಿಕ್ಷಕಿಯ ಪತಿ ಯಶವಂತ ಜಮಾದಾರ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಲೋಕಾಯುಕ್ತ ಡಿವೈಎಸ್ಪಿ ಗೀತಾ ಬೇನಹಾಳ ಹಾಗೂ ಪಿಐ ರಾಜಶೇಖರ ಹಳಿಗೋದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಅಂಕಪಟ್ಟಿ ನಕಲು ನೀಡಲು ಲಂಚ; ಇಬ್ಬರು ಎಫ್‌ಡಿಎಗಳ ಬಂಧನ 

ಕಲಬುರಗಿ: ವ್ಯಕ್ತಿಯೊಬ್ಬರ ಎಸ್‌ಎಸ್‌ಎಲ್‌ಸಿ ನಕಲು ಅಂಕಪಟ್ಟಿ ಪ್ರತಿಯನ್ನು ನೀಡಲು ಫೋನ್ ಪೇ ಮೂಲಕ ಲಂಚ ಪಡೆದಿದ್ದ ಪ್ರೌಢಶಿಕ್ಷಣ ಮಂಡಳಿಯ ಇಬ್ಬರು ಪ್ರಥಮದರ್ಜೆ ಸಹಾಯಕರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಪರೀಕ್ಷಾ ಮಂಡಳಿಯ ಎಫ್‌ಡಿಎ ಶಿವಶಂಕರಯ್ಯ ನೇಪಾರಿ, ಜಟಿಂಗರಾಯ ಬಲೆಗೆ ಬಿದ್ದವರು.

2019ರಲ್ಲಿ ತೇರ್ಗಡೆ ಹೊಂದಿದ್ದ ಕಲಬುರಗಿ ನಿವಾಸಿ ಅಬ್ದುಲ್ ಖದೀರ್ ಎಂಬುವವರು ಕಳೆದು ಹೋಗಿರುವ ತಮ್ಮ ಮೂಲ ಅಂಕಪಟ್ಟಿ ಬದಲಿಗೆ, ನಕಲು ಪ್ರತಿಗಾಗಿ ಎರಡು ದಿನದ ಹಿಂದೆ ಅರ್ಜಿ ಸಲ್ಲಿಸಿದ್ದರು. ಎರಡು ದಿನಗಳಲ್ಲಿ ಅಂಕಪಟ್ಟಿ ನೀಡುವುದಾಗಿ ದೂರುದಾರರಿಗೆ ತಿಳಿಸಿದ್ದ ಶಿವಶಂಕರಯ್ಯ ನೇಪಾರಿ ಹಾಗೂ ಜಟಿಂಗರಾಯ ₹ 5 ಸಾವಿರ ಲಂಚ ಕೇಳಿದ್ದರು. ಅಲ್ಲದೆ ಶುಕ್ರವಾರ ಸಂಜೆ ಕರೆ ಮಾಡಿ ಫೋನ್ ಪೇ ಮುಖಾಂತರ ₹ 3 ಸಾವಿರ ಮುಂಗಡ ಪಡೆದಿದ್ದರು. ಆನಲೈನ್‌ನಲ್ಲಿ ಹಣ ಕಟ್ಟಬೇಕು ಎಂದು ಹೇಳಿ ಹಣ ಪಡೆದಿದ್ದಾರೆ. 

ಅಬ್ದುಲ್ ಖದೀರ್ ಲೋಕಾಯುಕ್ತಕ್ಕೆ ಶುಕ್ರವಾರ ದೂರು ಸಲ್ಲಿಸಿದ್ದರು. ಸಾಕ್ಷ್ಯವಾಗಿ ಆಡಿಯೊ ನೀಡಿದ್ದರು. ಲೋಕಾಯುಕ್ತ ಎಸ್‌ಪಿ ಜಾನ್ ಆಂಟನಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮಂಜುನಾಥ ಗಂಗಲ್, ಇನ್‌ಸ್ಪೆಕ್ಟರ್ ಅಕ್ಕಮಹಾದೇವಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT