ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ | ಪ್ರೇಮವಿವಾಹ: ಯುವಕನ ತಂದೆ– ತಾಯಿಗೆ ಥಳಿತ

ಕಲಬುರ್ಗಿ ಯುವತಿ– ವಿಜಯಪುರದ ಯುವಕನ ಮಧ್ಯೆ ಬೆಳಗಾವಿಯಲ್ಲಿ ಪ್ರೇಮಾಂಕುರ, ಅಂತರ್ಜಾತಿ ಕಾರಣ ಪಾಲಕರ ವಿರೋಧ
Last Updated 23 ನವೆಂಬರ್ 2020, 17:13 IST
ಅಕ್ಷರ ಗಾತ್ರ

ಕಲಬುರ್ಗಿ: ’ಪ್ರೇಮಿಗಳಿಬ್ಬರು ಮನೆಯಿಂದ ಓಡಿಹೋಗಿ ಮದುವೆ ಮಾಡಿಕೊಂಡ ಕಾರಣಕ್ಕೆ, ಯುವಕನ ತಂದೆ– ತಾಯಿಯನ್ನು ನಗರದ ಪೊಲೀಸರೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತಂದೆ– ತಾಯಿ ಇಬ್ಬರೂ ತೀವ್ರ ಗಾಯಗೊಂಡಿದ್ದು, ಇಲ್ಲಿನ ಜಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ‘ ಎಂದು ಅವರ ಸಂಬಂಧಿಕರು ದೂರಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿಯ ಅಯ್ಯಪ್ಪಸ್ವಾಮಿ ಹಾಗೂ ಕಲಬುರ್ಗಿಯ ಆರ್‌.ಟಿ ನಗರದ ಕಸ್ತೂರಿ ಬೆಳಗಾವಿಯಲ್ಲಿ ಬಿಎಎಂಎಸ್‌ ಓದುತ್ತಿದ್ದರು. ಇಬ್ಬರೂ ಸಹಪಾಠಿಗಳಾದ್ದರಿಂದ ಅವರ ಮಧ್ಯೆ ಪ್ರೇಮಾಂಕುರವಾಗಿತ್ತು. ಆದರೆ, ಇಬ್ಬರ ಜಾತಿಯೂ ಬೇರೆಬೇರೆ ಆಗಿದ್ದರಿಂದ ಮನೆಯಲ್ಲಿ ಅವರ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಇದರಿಂದ ಪ್ರೇಮಿಗಳಿಬ್ಬರೂ ಮನೆ ಬಿಟ್ಟು ಹೋಗಿ ಕಳೆದ ಮಂಗಳವಾರ ದೇವಸ್ಥಾನವೊಂದರಲ್ಲಿ ಮದುವೆ ಮಾಡಿಕೊಂಡಿದ್ದಾರೆ.

’ವಿಷಯ ತಿಳಿದ ಮೇಲೆ ಯುವತಿಯ ಪಾಲಕರು ಮಗಳು ಕಾಣೆಯಾಗಿದ್ದಾಳೆ ಎಂದು ಕಲಬುರ್ಗಿ ಮಹಿಳಾ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದರು. ದೂರು ಪಡೆದ ಪೊಲೀಸರು ಯುವಕನ ತಂದೆ ತುಕಾರಾಮ ಹಾಗೂ ತಾಯಿ ಸುಜಾತಾ ಅವರನ್ನು ಇಂಡಿಯಿಂದ ಕರೆಸಿಕೊಂಡಿದ್ದರು. ಸೋಮವಾರ ಠಾಣೆಗೆ ಬಂದ ಇಬ್ಬರನ್ನೂ ವಿಚಾರಣೆ ಮಾಡುವ ವೇಳೆ ಪೊಲೀಸರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ’ಮಗ ಎಲ್ಲಿ ಓಡಿ ಹೋಗಿದ್ದಾನೆ ಹೇಳು...‘ ಎಂದು ಅವಾಚ್ಯ ‍ಪದಗಳಿಂದ ನಿಂದಿಸಿದ್ದಾರೆ. ಇದರಿಂದ ಇಳಿ ವಯಸ್ಸಿನ ತುಕಾರಾಮ ಹಾಗೂ ಸುಜಾತಾ ಅವರ ಮೈ ಮೇಲೆ ಬಾಸುಂಡೆ ಬಂದಿವೆ‘ ಎಂದೂ ಪೆಟ್ಟು ತಿಂದ ಸುಜಾತಾ ಅವರು ಮಾಧ್ಯಮಗಳ ಮುಂದೆ ದೂರಿದ್ದಾರೆ.

ಯುವತಿ ಪಾಲಕರ ಮಾತಿನ ಮೇಲೆ ಠಾಣೆಯ ಒಬ್ಬ ಇನ್‌ಸ್ಪೆಕ್ಟರ್‌ ಹಾಗೂ ಒಬ್ಬ ಕಾನ್‌ಸ್ಟೆಬಲ್‌ ಮನಸೋ ಇಚ್ಚೆ ಥಳಿಸಿದ್ದಾರೆ. ಕುಡಿಯಲು ನೀರು ಕೇಳಿದರೂ ಕಟ್ಟ ಪದ ಬಳಸಿ ನಿಂದಿಸಿದ್ದಾರೆ ಎಂದೂ ದೂರಿದ್ದಾರೆ.

’ಈ ಕುರಿತು ಮೇಲಧಿಕಾರಿಗಳಿಗೂ ದೂರು ನೀಡುತ್ತೇವೆ. ಮಕ್ಕಳಿಬ್ಬರೂ ಪ್ರೀತಿಸಿದ್ದಾರೆ, ಮದುವೆ ಆಗಿದ್ದಾರೆ ಎಂಬ ವಿಷಯ ನಮಗೆ ಇಲ್ಲಿ ಬಂದ ಮೇಲೆ ಗೊತ್ತಾಗಿದೆ. ನಿಜ ಹೇಳಿದರೂ ಪೊಲೀಸರು ಸಾಯುವಂತೆ ಬಡಿದರು. ನಮ್ಮದೇನು ತಪ್ಪಿದೆ?‘ ಎಂದೂ ಸುಜಾತಾ ಕಣ್ಣೀರು ಹಾಕಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮಹಿಳಾ ಪೊಲೀಸ್‌ ಠಾಣೆಯ ಹಿಡಿಯ ಅಧಿಕಾರಿ, ’ವಿಷಯ ನನ್ನ ಗಮನಕ್ಕೆ ಬಂದಿಲ್ಲ. ವಿಚಾರಿಸುತ್ತೇನೆ‘ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT