ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ಮೊದಲ ದಿನ ಮೂರು ನಾಮಪತ್ರ ಸಲ್ಲಿಕೆ

Published 13 ಏಪ್ರಿಲ್ 2024, 7:46 IST
Last Updated 13 ಏಪ್ರಿಲ್ 2024, 7:46 IST
ಅಕ್ಷರ ಗಾತ್ರ

ಕಲಬುರಗಿ: ಕಲಬುರಗಿ ಲೋಕಸಭಾ ಎಸ್‌ಸಿ ಮೀಸಲು ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಶುಕ್ರವಾರ ಆರಂಭವಾಗಿದ್ದು, ಮೊದಲ ದಿನ ಮೂರು ನಾಮಪತ್ರಗಳು ಸಲ್ಲಿಕೆಯಾಗಿವೆ.

ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ, ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಹಾಗೂ ಸ್ವತಂತ್ರ ಅಭ್ಯರ್ಥಿ ತಾರಾಬಾಯಿ ಭೋವಿ ಅವರು ಉಮೇದುವಾರಿಕೆಯನ್ನು ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರಿಗೆ ಸಲ್ಲಿಕೆ ಮಾಡಿದರು.

ರಾಧಾಕೃಷ್ಣ ಅವರು ಮೂರು ನಾಮಪತ್ರಗಳ ಪ್ರತಿಗಳನ್ನು ಸಲ್ಲಿಸಿದರು. ಮೊದಲ ಪ್ರತಿ ಸಲ್ಲಿಕೆಯ ವೇಳೆ ನಾಮಪತ್ರ ಪ್ರತಿ ಸಲ್ಲಿಕೆಯ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ರಾಜ್ಯ ರೇಷ್ಮೆ ಉದ್ಯಮಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕನೀಜ್ ಫಾತಿಮಾ, ಶಾಸಕ ಎಂ.ವೈ. ಪಾಟೀಲ ಹಾಗೂ ಮುಖಂಡ ಬಾಬುರಾವ ಚಿಂಚನಸೂರ ಉಪಸ್ಥಿತರಿದ್ದರು. 

ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಡಾ.ಬಿ.ಆರ್. ಅಂಬೇಡ್ಕರ್, ಬಸವೇಶ್ವರ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಶರಣಬಸವೇಶ್ವರರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದರು.

ಬಿಜೆಪಿ ಅಭ್ಯರ್ಥಿ, ಸಂಸದ ಜಾಧವ ಅವರು ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಮುಖಂಡರಾದ ಶೋಭಾ ಭಾಣಿ, ಗುರುನಾಥ್ ಜಾಂತಿಕರ ಹಾಗೂ ಲಿಂಗರಾಜ ಬಿರಾದಾರ ಅವರೊಂದಿಗೆ ತೆರಳಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ಏಪ್ರಿಲ್ 18ರಂದು ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಮತ್ತೊಮ್ಮೆ ನಾಮಪತ್ರ ಸಲ್ಲಿಸುವರು.

ಸ್ವತಂತ್ರ ಅಭ್ಯರ್ಥಿ ತಾರಾಬಾಯಿ ಭೋವಿ ಅವರು ತಮ್ಮ ಬೆಂಬಲಿಗರೊಂದಿಗೆ ಉಮೇದುವಾರಿಕೆ ಸಲ್ಲಿಸಿದರು.

ವಾಹನ ದಟ್ಟಣೆ, ಹಾರ್ನ್‌ ಮಾಡಿ ಆಕ್ರೋಶ: ರಾಧಾಕೃಷ್ಣ ದೊಡ್ಡಮನಿ ಅವರ ನಾಮಪತ್ರ ಸಲ್ಲಿಕೆ ವೇಳೆ ಸಚಿವರು, ಶಾಸಕರು, ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಎಸ್‌ವಿಪಿ ವೃತ್ತ– ಮಾರ್ಕೆಟ್ ರಸ್ತೆಯಲ್ಲಿ ನಿಂತಿದ್ದರಿಂದ ವಾಹನ ದಟ್ಟಣೆ ಕಂಡುಬಂತು. 

ಬಿಸಿಲಿನ ಝಳಕ್ಕೆ ಬೇಸತ ವಾಹನಗಳ ಚಾಲಕರು ನಿರಂತರವಾಗಿ ಹಾರ್ನ್‌ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಸಂಚಾರ ದಟ್ಟಣೆ ನಿಯಂತ್ರಿಸುವ ಬದಲು ಬಹುತೇಕ ಪೊಲೀಸರು ಜನಪ್ರತಿನಿಧಿಗಳ ಸುತ್ತ ಸುತ್ತುವರಿದಿದ್ದರು. ಹಾರ್ನ್ ಶಬ್ಧ ಜೋರಾಗುತ್ತಿದ್ದಂತೆ, ರಸ್ತೆಯಲ್ಲಿ ನಿಂತಿದ್ದ ಕೆಲವರನ್ನು ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ನಾಮಪತ್ರ ಸಲ್ಲಿಕೆ ಮಾಡಿ ಹೊರ ಬರುವವರೆಗೂ ಸುಮಾರು 40 ನಿಮಿಷಗಳ ಕಾಲ ರಸ್ತೆಯಲ್ಲಿ ಎಲ್ಲೆಂದರಲ್ಲಿ ನಿಂತಿದ್ದ ಕಾರುಗಳು, ಕಾರ್ಯಕರ್ತರ ನಡುವಿನಿಂದ ನುಸುಳಿಕೊಂಡು ವಾಹನ ಸವಾರರು ಸಂಚಾರಿಸಿದರು. ಲಾಹೋಟಿ ಪೆಟ್ರೋಲ್ ಬಂಕ್ ಸಮೀಪ ಬ್ಯಾರಿಕೇಡ್ ಹಾಕಿದ್ದ ಪೊಲೀಸರು, ವಾಹನಗಳ ಸಂಚಾರಕ್ಕೆ ತಡೆಯೊಡ್ಡಿ, ಬದಲಿ ರಸ್ತೆಯಲ್ಲಿ ಹೋಗುವಂತೆ ಸೂಚಿಸಿದ್ದರು.

‘ಎರಡು ರಸ್ತೆಗಳು ಬಂದ್ ಮಾಡುವ ಬದಲು ಒಂದು ರಸ್ತೆಯಲ್ಲಾದರು ಓಡಾಟಕ್ಕೆ ಅವಕಾಶ ಮಾಡಿಕೊಡಬೇಕಿತ್ತು’ ಎಂದು ಬೈಕ್, ಆಟೊ ಚಾಲಕರು ಆಕ್ರೋಶ ಹೊರಹಾಕಿದರು.

ಕಲಬುರಗಿಯಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ನಾಮಪತ್ರ ಸಲ್ಲಿಸಿದರು. ಮುಖಂಡರಾದ ದತ್ತಾತ್ರೇಯ ಪಾಟೀಲ ರೇವೂರ ಗುರುನಾಥ್ ಜಾಂತಿಕರ ಶೋಭಾ ಭಾಣಿ ಲಿಂಗರಾಜ ಬಿರಾದಾರ ಉಪಸ್ಥಿತರಿದ್ದರು
ಕಲಬುರಗಿಯಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ನಾಮಪತ್ರ ಸಲ್ಲಿಸಿದರು. ಮುಖಂಡರಾದ ದತ್ತಾತ್ರೇಯ ಪಾಟೀಲ ರೇವೂರ ಗುರುನಾಥ್ ಜಾಂತಿಕರ ಶೋಭಾ ಭಾಣಿ ಲಿಂಗರಾಜ ಬಿರಾದಾರ ಉಪಸ್ಥಿತರಿದ್ದರು
ಕಲಬುರಗಿಯಲ್ಲಿ ಗುರುವಾರ ಸ್ವತಂತ್ರ ಅಭ್ಯರ್ಥಿಯಾಗಿ ತಾರಾಬಾಯಿ ಭೋವಿ ಅವರು ನಾಮಪತ್ರ‌ ಸಲ್ಲಿಸಿದರು. ಬೆಂಬಲಿಗರು ಉಪಸ್ಥಿತರಿದ್ದರು
ಕಲಬುರಗಿಯಲ್ಲಿ ಗುರುವಾರ ಸ್ವತಂತ್ರ ಅಭ್ಯರ್ಥಿಯಾಗಿ ತಾರಾಬಾಯಿ ಭೋವಿ ಅವರು ನಾಮಪತ್ರ‌ ಸಲ್ಲಿಸಿದರು. ಬೆಂಬಲಿಗರು ಉಪಸ್ಥಿತರಿದ್ದರು
ಬಿಸಿಲಿನಲ್ಲಿ ಕಾದು ನಿಂತ ಮುಖಂಡರು
ರಾಧಾಕೃಷ್ಣ ದೊಡ್ಡಮನಿ ಅವರ ನಾಮಪತ್ರ ಸಲ್ಲಿಸಿ ಹೊರ ಬರುವರ ವರೆಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ಸಿಂಗ್ ಶಾಸಕರಾದ ಅಲ್ಲಮಪ್ರಭು ಪಾಟೀಲ ತಿಪ್ಪಣ್ಣಪ್ಪ ಕಮಕನೂರ ಸೇರಿದಂತೆ ಹಲವರು ಜಿಲ್ಲಾಧಿಕಾರಿ ಕಚೇರಿಯ ಪ್ರವೇಶ ದ್ವಾರದಲ್ಲೇ ಬಿಸಿಲಿನಲ್ಲಿ ಕಾದು ನಿಂತರು. ಪಕ್ಷದ ನೂರಾರು ಕಾರ್ಯಕರ್ತರು ಸಹ ಜಮಾಯಿಸಿದರು.
‘ಚುನಾವಣೆ ಬಳಿಕ ಬಿಜೆಪಿಯಲ್ಲಿ ಜೆಡಿಎಸ್ ವಿಲೀನ’
‘ಲೋಕಸಭಾ ಚುನಾವಣೆ ಮುಕ್ತಾಯ ಆಗುತ್ತಿದ್ದಂತೆ ಬಿಜೆಪಿಯಲ್ಲಿ ಜೆಡಿಎಸ್ ವಿಲೀನವಾಗಲಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಮುಂದಿನ ದಿನಗಳಲ್ಲಿ ಜೆಡಿಎಸ್ ಬಿಜೆಪಿಯಲ್ಲಿ ವಿಲೀನವಾಗದೆ ಇದ್ದರೇ ಬಿಜೆಪಿಯವರು ಜೆಡಿಎಸ್‌ ನಾಯಕರನ್ನು ಒಡಿಸುತ್ತಾರೆ. ಚುನಾವಣೆಬ ಬಳಿಕ ರಾಜ್ಯದಲ್ಲಿ ಯಾವುದೇ ರಾಜಕೀಯ ಕ್ಷಿಪ್ರ ಬೆಳವಣಿಗೆ ಆಗುವುದಿಲ್ಲ. ಆದರೆ ಜೆಡಿಎಸ್–ಬಿಜೆಪಿ ಮೈತ್ರಿ ಮುರಿದು ಬೀಳಲಿದೆ’ ಎಂದು ವ್ಯಂಗ್ಯವಾಡಿದರು. ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಅವರು ನಮ್ಮ ಆತ್ಮೀಯ ಸ್ನೇಹಿತ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಕಾಲದಿಂದಲೂ ಒಟ್ಟಿಗೆ ಶಾಸಕರಾಗಿ ಸಚಿವರಾಗಿ ಕೆಲಸ ಮಾಡಿದ್ದೇವೆ. ಬಿಜೆಪಿಯಲ್ಲಿ ಅವರಿಗೆ ಅನ್ಯಾಯವಾಗಿದ್ದು ಮನವರಿಕೆಯಾಗಿದೆ. ಕೆಲವು ಆಂತರಿಕ ವಿಚಾರಗಳು ಬಹಿರಂಗವಾಗಿ ಹೇಳಲು ಬರುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT