ಶನಿವಾರ, ಜನವರಿ 16, 2021
18 °C

ಚಿಂಚೋಳಿ: ತೊಗರಿ ರಾಶಿಗೂ ಬಂತು ಯಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತೊಗರಿ ರಾಶಿ ಮಾಡುವ ಕೌಶಲವುಳ್ಳ ಯಂತ್ರ ರೈತರ ಜಮೀನಿಗೆ ಕಾಲಿಟ್ಟಿದೆ. ತೊಗರಿ ಬೆಳೆ ಕೊಯ್ಲಿಗೆ ಬಂದ ಮೇಲೆ ಅದರ ರೆಂಬೆಕೊಂಬೆ ಕತ್ತರಿಸಿ ಒಂದೆರಡು ದಿನಗಳ ನಂತರ ಬಡಿದು ರಾಶಿ ಮಾಡುವುದು ಸಾಮಾನ್ಯ. ಆದರೆ, ಈಗ ರೈತರು ಇದರ ಗೋಜಿಗೆ ಹೋಗಬೇಕಿಲ್ಲ. ದೈತ್ಯ ವಾಹನವೊಂದೇ ಈ ರಾಶಿಗೆ ನೆರವಾಗಲಿದೆ.

ಉದ್ದು, ಹೆಸರು, ಭತ್ತ ಇನ್ನಿತರ ಬೆಳೆಗಳು ರಾಶಿ ನಡೆಸುವಂತೆಯೇ ತೊಗರಿಯ ರಾಶಿಗೂ ರೈತರು ಯಂತ್ರದ ಮೊರೆ ಹೋಗಿದ್ದಾರೆ. ಇದರಿಂದ ರೈತರಿಗೆ ರಾಶಿ ತ್ವರಿತವಾಗಿ ನಡೆಸಲು ಸಾಧ್ಯವಾಗಿದೆ ಎನ್ನುತ್ತಾರೆ ಚಿಂಚೋಳಿಯ ರೈತ ಗುರುರಾಜ ಪತ್ತಾರ.

ರಾಶಿಯಲ್ಲಿ ಶೇ 2/3 ಪ್ರಮಾಣ ವ್ಯರ್ಥವಾದರೆ, ಶೇ 8ರಷ್ಟು ಬೆಳೆ ನುಚ್ಚಾಗುತ್ತದೆ. ರಾಶಿಯ ನಂತರ ಇದರಲ್ಲಿ ಕಸ– ಕಡ್ಡಿ ನಿವಾರಣೆಗೆ ಚಿಕ್ಕ ರಾಶಿ ಯಂತ್ರದ ಮೂಲಕ ತೂರಬೇಕು. ಇಲ್ಲವೇ ಕೂಲಿ ಕಾರ್ಮಿಕರಿಂದ ಛನ್ನಿ (ಜಲಡಿ) ಹಿಡಿಸಬೇಕು. ಉಳಿದಂತೆ ವಾಹನ ಬಳಕೆ ಯೋಗ್ಯ ಎಂದರು.

ಸ್ವತಃ ಬೆಳೆಯನ್ನು ಕಟಾವು ಮಾಡಿಕೊಂಡು ರಾಶಿ ನಡೆಸುವ ಈ ಯಂತ್ರ; ಹೊಟ್ಟು ಮತ್ತು ತೊಗರಿಯ ಕಟ್ಟಿಗೆಯ ತುಕಡಿಗಳನ್ನು ಹೊಲದಲ್ಲಿ ಬಿಸಾಕುತ್ತ ಹೋಗುತ್ತದೆ. ತೊಗರಿ ಕಟ್ಟಿಗೆ, ಹೊಟ್ಟು ಎಲ್ಲವೂ ಹೊಲದಲ್ಲಿಯೇ ಬೀಳುವುದರಿಂದ ಜಮೀನಿಗೆ ನೈಸರ್ಗಿಕ ಗೊಬ್ಬರ ಲಭಿಸಿದಂತಾಗುತ್ತದೆ.

ಎಕರೆಗೆ ₹ 1,100 ದರದಲ್ಲಿ ತೊಗರಿ ರಾಶಿ ನಡೆಸಲಾಗುತ್ತಿದೆ. ಒಂದು ದಿನಕ್ಕೆ ಕನಿಷ್ಠ 45ರಿಂದ 50 ಎಕರೆ ಬೆಳೆ ರಾಶಿ ನಡೆಸಬಹುದಾಗಿದೆ. ಸ್ವರಾಜ್ 8100 ಇಎಕ್ಸ ವಾಹನ ತಾಲ್ಲೂಕಿನಲ್ಲಿ ಮೊದಲ ಬಾರಿಗೆ ತಂದು ಪ್ರಾಯೋಗಿಕವಾಗಿ ರಾಶಿ ನಡೆಸಲಾಗಿದೆ. ಇದು ರೈತರಿಗೆ ಬಹು ಉಪಯೋಗಿಯಾಗಿದೆ. ಕೂಲಿ ಕಾರ್ಮಿಕರ ಕೊರತೆ ಹಾಗೂ ದುಬಾರಿ ಖರ್ಚು ನೀಗಿಸಲು ಈ ವಾಹನ ಉಪಯುಕ್ತವಾಗಿದೆ ಎಂದು ಯಂತ್ರದ ಮಾಲೀಕ ಬಸವರಾಜ ಎಸ್.ಎಂ. ತಿಳಿಸಿದರು.

4 ಎಕರೆ ತೊಗರಿ ರಾಶಿಗೆ ₹ 4,500. ವಾಹನ ಬಾಡಿಗೆ ಹಾಗೂ ಕಾಳು ಸ್ವಚ್ಛತೆಗೆ ಇಬ್ಬರು ಕೂಲಿ ಕಾರ್ಮಿಕರಿಂದ ಛನ್ನಿ ಮಾಡಿಸಿದರೆ ₹ 1,000. ಒಟ್ಟು ₹ 5,500 ರಿಂದ ₹ 6,000 ಖರ್ಚಿನಲ್ಲಿ ರಾಶಿ ಪೂರ್ಣಗೊಳುತ್ತದೆ. ಆದರೆ, ಕೂಲಿ ಕಾರ್ಮಿಕರಿಂದ ರಾಶಿ ಮಾಡಿಸಬೇಕಾದರೆ ₹ 12 ಸಾವಿರ ಖರ್ಚು ತಗುಲುತ್ತದೆ ಎಂಬುದು ಅವರ ವಿವರಣೆ.

ರಾಶಿ ಮಾಡುವ ಯಂತ್ರವನ್ನು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ ರಾಠೋಡ, ಸಹಾಯಕ ಕೃಷಿ ಅಧಿಕಾರಿ ಡಾ.ರಘುವೀರ ವಿಶ್ವಕರ್ಮ, ಗಂಗಾಧರ ಬಿರಾದಾರ, ರೈತರಾದ ಯಾದಯ್ಯ ಕೋಸಗೆ ಶಿವಪುತ್ರ ತಾರಾಪುರ ವೀಕ್ಷಿಸಿದರು.

*
ತೊಗರಿ ರಾಶಿ ಕೂಲಿ ಕಾರ್ಮಿಕರಿಂದ ಮಾಡಿಸಲು ಹೆಚ್ಚು ಖರ್ಚು ಹಾಗೂ ಅಧಿಕ ಸಮಯ ಬೇಕು ಆದರೆ ಯಂತ್ರದ ಮೊರೆ ಹೋದರೆ ಖರ್ಚು ಕಡಿಮೆಯಾಗುತ್ತದೆ ಮತ್ತು ಸಮಯವೂ ಉಳಿಯುತ್ತದೆ
- ಪ್ರಕಾಶ ರಾಠೋಡ್, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಚಿಂಚೋಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು