ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ದಿನಗಳಲ್ಲಾದರೂ ಎಚ್ಚರಿಕೆಯ ಹೆಜ್ಜೆ ಇಡಿ:

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅದ್ಧೂರಿ ಸ್ವಾಗತ, ಅಭಿನಂದನೆಗಳ ಸುರಿಮಳೆ
Last Updated 3 ಅಕ್ಟೋಬರ್ 2021, 6:28 IST
ಅಕ್ಷರ ಗಾತ್ರ

ಕಲಬುರ್ಗಿ: ‘ದೇಶದಲ್ಲಿ ಎಲ್ಲಿಯವರೆಗೆ ಪ್ರಜಾಪ್ರಭುತ್ವ ಇರುತ್ತದೆಯೋ ಅಲ್ಲಿಯವರೆಗೆ ಮಾತ್ರ ನಿಮ್ಮ ಸ್ವಾತಂತ್ರ್ಯ ಹಾಗೂ ಸಂವಿಧಾನ ಉಳಿಯಲು ಸಾಧ್ಯ. ಈ ಎಚ್ಚರಿಕೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಯುವಪೀಳಿಗೆ ತಮ್ಮ ದಾರಿ ಆಯ್ಕೆ ಮಾಡಿಕೊಳ್ಳಬೇಕು’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿವಿಮಾತು ಹೇಳಿದರು.‌

ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಅವರಿಗೆ ಜಿಲ್ಲಾ ಕಾಂಗ್ರೆಸ್‌ನಿಂದ ಶನಿವಾರ ಆಯೋಜಿಸಿದ್ದ ಅದ್ಧೂರಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

‘ತೆಲಂಗಾಣದಲ್ಲಿ 371(ಡಿ) ಅನುಷ್ಠಾನಕ್ಕೆ ರಕ್ತದ ಕೋಡಿ ಹರಿದಿದೆ, ಜೀವಗಳು ಹೋಗಿವೆ. ಆದರೆ, ಕಲ್ಯಾಣ ಕರ್ನಾಟಕಕ್ಕೆ 371(ಜೆ) ಅನುಷ್ಠಾನವನ್ನು ಯಾರೊಬ್ಬರ ತಕರಾರೂ ಇಲ್ಲದಂತೆ ಸಂಸತ್‌ನಲ್ಲಿ ಒಪ್ಪಿಗೆ ಪಡೆದೆವು. ಇದನ್ನೇ ಅಭಿವೃದ್ಧಿ ಎನ್ನುತ್ತಾರೆ. ಇಂಥ ದೊಡ್ಡ ಕೆಲಸ ಮಾಡಿದ ಒಬ್ಬ ಸಂಸದನನ್ನು ಬಿಜೆಪಿಯಲ್ಲಿ ತೋರಿಸಿಕೊಡಿ’ ಎಂದು ಕೇಳಿದರು.

‘ದೇಶದ ಯುವಜನರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ಜವಾಹಲಾಲ್‌ ನೆಹರೂ ಅವರು ಸಾರ್ವಜನಿಕ ವಲಯ, ಸಹಕಾರ ವಲಯ, ಕೈಗಾರಿಕಾ ವಲಯಗಳಿಗೆ ಆದ್ಯತೆ ನೀಡಿದರು. ಇಂದಿರಾ ಗಾಂಧಿ ಅವರು ಉಳಿವವನೇ ಒಡೆಯ ಎಂದು ಕೂಲಿ ಮಾಡುವವರನ್ನೂ ಭೂ ಮಾಲೀಕ ಮಾಡಿದರು. ಆದರೆ, ಪ್ರಧಾನಿ ಮೋದಿ ಅವರು ಎಲ್ಲ ಸಾರ್ವಜನಿಕ ವಲಯಗಳನ್ನೂ ಖಾಸಗೀಕರಣ ಮಾಡುತ್ತಿದ್ದಾರೆ. ಅಂಬಾನಿ, ಅದಾನಿ, ಚೌರಾಸಿ, ತಪರಾಸಿ ಎಂಬುವವರ ಕೈಯಲ್ಲೇ ಇಡೀ ದೇಶ ಕೊಡುತ್ತಿದ್ದಾರೆ. ಕೃಷಿ ಕಾಯ್ದೆಗಳ ಮೂಲಕ ಬಡವರಿಗೆ ಆಹಾರ ಕೊರತೆ ಉಂಟು ಮಾಡುವ ಹುನ್ನಾರ ನಡೆಸಿದ್ದಾರೆ. ಇಷ್ಟೆಲ್ಲ ಗೊತ್ತಾದ ಮೇಲೂ ನಮ್ಮ ಜನ ಅವರಿಗೆ ಹೇಗೆ ಜೈ ಎನ್ನುತ್ತಾರೋ ಗೊತ್ತಿಲ್ಲ’ ಎಂದು ಅವರು ಹೇಳಿದರು.‌

‘ಕಾಂಗ್ರೆಸ್‌ ಸರ್ಕಾರದಲ್ಲಿ ಎಲ್ಲ ಸಮುದಾಯಗಳ ಮುಖಂಡರಿಗೂ ಸಚಿವ ಸ್ಥಾನ ನೀಡಿದ್ದೇವು. ಅದರೆ, ಮೋದಿ ಸರ್ಕಾರ ಒಡೆದಾಳುವ ನೀತಿ ಅನುಸರಿಸುತ್ತಿದೆ. ಮಂತ್ರಿಗಳು ಸರ್ಕಾರಿ ಕಾರಿನಲ್ಲಿ ಓಡಾಡುವುದಕ್ಕಷ್ಟೇ ಸೀಮಿತವಾಗಿದ್ದಾರೆ. ಅವರಿಗೇನೂ ಕೆಲಸವಿಲ್ಲ; ಎಲ್ಲವೂ ಮೋದಿ, ಯೋಗಿ’ ಎಂದು ಲೇವಡಿಮಾಡಿದರು.

‘ತೈಲೋತ್ಪನ್ನ, ಆಹಾರೋತ್ಪನ್ನಗಳ ಬೆಲೆ ದುಪ್ಪಟ್ಟು ಏರಿಸಿದ್ದಾರೆ. ಕಾರ್ಪೊರೇಟ್‌ ಕುಳಗಳು ಎಷ್ಟು ಬೇಕಾದರೂ ಭೂಮಿ ಖರೀದಿಸುವಂಥ, ಎಷ್ಟು ಬೇಕಾದರೂ ಧಾನ್ಯ ಸಂಗ್ರಹಿಸುವಂಥ ಕಾಯ್ದೆ ತಿದ್ದುಪಡಿ ಮಾಡಿದ್ದಾರೆ. ಮೋದಿ ಅವರ ಸುಳ್ಳುಗಳನ್ನೇ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಿ ‘ಸತ್ಯ’ ಎಂದು ನಂಬಿಸುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ದೀನ– ದಲಿತರು ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲ’ ಎಂದುಎಚ್ಚರಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ‌ಬಸವರಾಜ ಪಾಟೀಲ ಮುರುಮ್‌, ಶಾಸಕರಾದ ಶರಣಬಸಪ್ಪ ದರ್ಶನಾಪುರ, ರಹೀಂಖಾನ್, ರಾಜಶೇಖರ್ ಪಾಟೀಲ, ಎಂ.ವೈ. ಪಾಟೀಲ, ಮುಖಂಡರಾದ ಶರಣಪ್ಪ ಮಟ್ಟೂರ, ತಿಪ್ಪಣ್ಣಪ್ಪ ಕಮಕನೂರ, ರಾಜಾ ವೆಂಕಟಪ್ಪ ನಾಯಕ, ಡಾ.ಕಿರಣ ದೇಶಮುಖ ಸೇರಿದಂತೆ ಹಲವು ಮುಖಂಡರು, ಜನಪ್ರತಿನಿಧಿಗಳು ವೇದಿಕೆ ಮೇಲಿದ್ದರು.

‘ನನ್ನನ್ನು ಸೋಲಿಸಿದ್ದು ಕಲಬುರ್ಗಿ ಜನರಲ್ಲ’
‘ನನ್ನನ್ನು ಸೋಲಿಸಿದ್ದು ಮೋದಿ, ಅಮಿತ್‌ ಶಾ ಮತ್ತು ಆರ್‌ಎಸ್‌ಎಸ್‌ನ ಕುತಂತ್ರಿಗಳೇ ಹೊರತು; ಕಲಬುರ್ಗಿ ಜನರಲ್ಲ. 11 ಬಾರಿ ಆಯ್ಕೆ ಮಾಡಿ ಕಳಿಸಿದ್ದಾರೆ. ಆದರೆ, ಕುತಂತ್ರಿಗಳ ತಂತ್ರವನ್ನು ಅರ್ಥಮಾಡಿಕೊಳ್ಳುವಲ್ಲಿ ನಮ್ಮ ಜನ ತಡ ಮಾಡಿದರು‌’ ಎಂದು ಮಲ್ಲಿಕಾರ್ಜುನ ಖರ್ಗೆ ವಿಶ್ಲೇಷಿಸಿದರು.

‘ಸಂಸತ್‌ ಭವನದಲ್ಲಿಯೇ ಮೋದಿ ಅವರು ನನಗೆ ಸೋಲಿಸುತ್ತೇವೆ ಎಂದು ಓಪನ್‌ ಚಾಲೇಂಜ್‌ ಮಾಡಿದ್ದರು. ಆ ಮಾತಿನ ಮರ್ಮ ಅರ್ಥ ಮಾಡಿಕೊಳ್ಳುವಲ್ಲಿ ನಮ್ಮವರು ಎಡವಿದರು. ನಾನು ಮಹಾರಾಷ್ಟ್ರ ಮತ್ತಿತರ ಕಡೆ ಅಭ್ಯರ್ಥಿಗಳ ಪರ ಕೆಲಸ ಮಾಡಬೇಕಿತ್ತು. ಹಾಗಾಗಿ, ಇತ್ತ ಗಮನ ಹರಿಸಲು ಆಗಲಿಲ್ಲ. ಅಮಾಯಕರಾದ ನಮ್ಮ ಜನ ಸುಳ್ಳಿನ ಕಂತೆಗಳನ್ನು ನಂಬಿಬಿಟ್ಟರು’ ಎಂದರು.

‘ನಾನು ಜನಪ್ರತಿನಿಧಿಯಾಗಿ ಅರ್ಧ ಶತಕ ಬಾರಿಸುತ್ತಿದ್ದೆ. ಆದರೆ, ನಿಮ್ಮ ಕುತಂತ್ರದ ಕಾರಣ ಸೋಲಾಗಿದೆ ಎಂದು ಮೋದಿ, ಶಾ ಅವರಿಗೆ ಸಭೆಯೊಂದರಲ್ಲಿ ನಾನು ನೇರವಾಗೇ ಹೇಳಿದ್ದೇನೆ’ ಎಂದು ಸ್ಮರಿಸಿದರು.

‘ಕೇಂದ್ರಕ್ಕೆ ₹ 25 ಲಕ್ಷ ಕೋಟಿ ಲಾಭ’
‘ಜಿಎಸ್‌ಟಿ ಕಾರಣ ಮೋದಿ ಸರ್ಕಾರಕ್ಕೆ ಏಳು ವರ್ಷದಲ್ಲಿ ₹ 25 ಲಕ್ಷ ಕೋಟಿಯಷ್ಟು ಲಾಭವಾಗಿದೆ. ಆದರೂ ಅವರು ಜನರ ಕೆಲಸ ಮಾಡಲು ಸಿದ್ಧರಿಲ್ಲ. ವ್ಯತಿರಿಕ್ತವಾಗಿ 3 ಕೋಟಿ ಉದ್ಯೋಗಗಳನ್ನು ಕಳೆದಿದ್ದಾರೆ. ನಿಮ್ಮ ಅನ್ನ, ನೀರು ಕಿತ್ತುಕೊಂಡಿದ್ದಾರೆ. ಆದರೂ ಅವರನ್ನು ಹೇಗೆ ನಂಬುತ್ತಿದ್ದೀರಿ’ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.‌

‘ನಾನು ರೈಲ್ವೆ ಸಚಿವನಾಗಿದ್ದಾಗ 14.5 ಲಕ್ಷ ನೌಕರರು ಇದ್ದರು. ಈಗ 12.75 ಲಕ್ಷ ಇದ್ದಾರೆ. ವರ್ಷಕ್ಕೆ 1 ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದ ಪುಣ್ಯಾತ್ಮರು; ಇರುವ ನೌಕರಿಗಳನ್ನೂ ಕಿತ್ತುಕೊಂಡಿದ್ದಾರೆ. ಸಾರ್ವಜನಿಕ ಸೇವಾವಲಯ, ವಿಮೆ ಕಂಪನಿ, ಬ್ಯಾಂಕ್‌, ಬಿಇಎಲ್‌ ಸೇರಿದಂತೆ ಬೃಹತ್‌ ಸೇವಾ ವಲಯಗಳನ್ನೆಲ್ಲ ಹಾಳು ಮಾಡಿದರು’ ಎಂದೂ ಕಿಡಿ ಕಾರಿದರು.

‘ಇನ್ಮುಂದೆ ಮತ್ತೆ ಮತ್ತೆ ಬರುತ್ತೇನೆ’
‘ಕೋವಿಡ್‌ ಉಪಟಳದ ಕಾರಣ ಒಂದೂವರೆ ವರ್ಷವಾದರೂ ನನಗೆ ಈ ಪವಿತ್ರ ಸ್ಥಳಕ್ಕೆ ಬರಲು ಆಗಲಿಲ್ಲ. ಕಾರ್ಯಕರ್ತರನ್ನು ಹೆಚ್ಚು ಕಾಯಿಸುವುದು ಬೇಡವೆಂದು ಈಗ ಬಂದೆ’ ಎಂದು ಖರ್ಗೆ ಹೇಳಿದರು.

‘ಇನ್ನುಮುಂದೆ ಪದೇಪದೇ ಬರುತ್ತೇನೆ. ನಿಮ್ಮ ಕಷ್ಟ– ಸುಖ ಕೇಳುತ್ತೇನೆ. ಸಲಹೆ ಪಡೆಯುತ್ತೇನೆ. ಕಾರ್ಯಕರ್ತರು ಯಾವುದಕ್ಕೂ ಹೆದರಬೇಕಿಲ್ಲ’ ಎಂದೂ ಅವರು ಭರವಸೆ ನೀಡಿದರು.

ಕೋವಿಡ್ ಮಾರ್ಗಸೂಚಿ ಉಲ್ಲಂಘನೆ‌
ನಗರದಲ್ಲಿ ಶನಿವಾರ ನಡೆದ ಮೆರವಣಿಗೆ ಹಾಗೂ ಸನ್ಮಾನ ಸಮಾರಂಭಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮಾಸ್ಕ್‌ ಧರಿಸಿ ಪಾಲ್ಗೊಂಡರು. ಆದರೆ, ಬಹುಪಾಲು ಮುಖಂಡರು ಹಾಗೂ ಕಾರ್ಯಕರ್ತರು ಕೋವಿಡ್‌ ಮಾರ್ಗಸೂಚಿ ಪಾಲಿಸಲಿಲ್ಲ. ಮೆರವಣಿಗೆಯಲ್ಲಿ ಸೇರಿದ ಅಪಾರ ಕಾರ್ಯಕರ್ತರಲ್ಲಿ ಬಹುಪಾಲು ಮಂದಿ ಮಾಸ್ಕ್‌ ಧರಿಸಲಿಲ್ಲ. ವೇದಿಕೆ ಕಾರ್ಯಕ್ರಮದಲ್ಲೂ ಮುಖಂಡರು, ಕಾರ್ಯಕರ್ತರು ಕಿಕ್ಕಿರಿದು ಸೇರಿದರು. ಕನಿಷ್ಠ ಅಂತರ ಸಾಧ್ಯವಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT