‘ಕಲಬುರ್ಗಿ ಹೆಮ್ಮೆ; ಖರ್ಗೆ ಮತ್ತೊಮ್ಮೆ’, ‘ಕಲಬುರ್ಗಿಗಾಗಿ ಖರ್ಗೆ’ ಘೋಷಣೆ

ಮಂಗಳವಾರ, ಏಪ್ರಿಲ್ 23, 2019
29 °C
ಖರ್ಗೆ ಶಕ್ತಿ ಪ್ರದರ್ಶನ

‘ಕಲಬುರ್ಗಿ ಹೆಮ್ಮೆ; ಖರ್ಗೆ ಮತ್ತೊಮ್ಮೆ’, ‘ಕಲಬುರ್ಗಿಗಾಗಿ ಖರ್ಗೆ’ ಘೋಷಣೆ

Published:
Updated:
Prajavani

ಕಲಬುರ್ಗಿ: ‘ಖರ್ಗೆ ಸಾಹೇಬರಿಗೆ ಜಯವಾಗಲಿ..’, ‘ಕಲಬುರ್ಗಿ ಹೆಮ್ಮೆ; ಖರ್ಗೇಜಿ ಮತ್ತೊಮ್ಮೆ’, ಎಂಬ ಘೋಷಣೆಗಳೊಂದಿಗೆ ಅಪಾರ ಸಂಖ್ಯೆಯ ಕಾರ್ಯಕರ್ತರು ಮತ್ತು ಬೆಂಬಲಿಗರ ಮಧ್ಯೆ ‘ಗುಲಬರ್ಗಾ’ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ನಾಮಪತ್ರ ಸಲ್ಲಿಸಿದರು.

ಬೆಳಿಗ್ಗೆ ಶರಣಬಸವೇಶ್ವರ ದೇವಸ್ಥಾನ, ಖಾಜಾ ಬಂದಾ ನವಾಜ್ ದರ್ಗಾ ಹಾಗೂ ಬುದ್ಧವಿಹಾರಗಳಿಗೆ ಭೇಟಿ ನೀಡಿದರು. ಇದಾದ ಬಳಿಕ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಡಾ.ಬಾಬು ಜಗಜೀವರಾಮ್, ಮಹಾತ್ಮ ಗಾಂಧೀಜಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾ ಚುನಾವಣಾ ಅಧಿಕಾರಿ ಆರ್.ವೆಂಕಟೇಶಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಇದಾದ ಬಳಿಕ ಗಂಜ್‌ನ ನಗರೇಶ್ವರ ಶಾಲೆಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ಹೊರಟು ಜಗತ್ ವೃತ್ತ ತಲುಪಿದರು. ದಾರಿಯುದ್ಧಕ್ಕೂ ನೆರೆದ ಕಾರ್ಯಕರ್ತರು ಹಾಗೂ ಬೆಂಬಲಿಗರು ಹೂಮಳೆಗರೆದು ಜಯಕಾರ ಹಾಕಿದರು. ‘ಖರ್ಗೆ ಅವರಿಗೆ ಜಯವಾಗಲಿ’ ಎಂದು ಘೋಷಣೆ ಕೂಗಿದರು.

ಖರ್ಗೆ ಅವರ ವಾಹನದ ಮುಂಭಾಗ ದಲ್ಲಿ ತೆರೆದ ಜೀಪ್‌ನಲ್ಲಿ ಸಾಗಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಡಾ.ಅಜಯಸಿಂಗ್, ಮುಖಂಡರಾದ ಅರುಣಕುಮಾರ ಪಾಟೀಲ, ಮಜರ್ ಆಲಂಖಾನ್, ವಿಜಯಕುಮಾರ ಜಿ.ರಾಮಕೃಷ್ಣ ಅವರು ಜನರತ್ತ ಕೈಬೀಸಿದರು.

ರಾರಾಜಿಸಿದ ಬಾವುಟಗಳು: ಕಾಂಗ್ರೆಸ್, ಯುವ ಕಾಂಗ್ರೆಸ್, ದಲಿತ ಸಂಘರ್ಷ ಸಮಿತಿ, ಜೆಡಿಎಸ್ ಹಾಗೂ ‘ಕಲಬುರ್ಗಿ ಹೆಮ್ಮೆ ಖರ್ಗೆ ಮತ್ತೊಮ್ಮೆ’ ಎಂಬ ಬಾವುಟಗಳು ಮೆರವಣಿಗೆಯುದ್ದಕ್ಕೂ ರಾರಾಜಿಸಿದವು. ಕೊರಳಲ್ಲಿ ಕಾಂಗ್ರೆಸ್ ಪಕ್ಷದ ಶಲ್ಯೆ, ತಲೆಗೆ ಟೋಪಿ ಹಾಕಿಕೊಂಡಿದ್ದ ಕಾರ್ಯಕರ್ತರು ಜೈಕಾರ ಹಾಕಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ, ಶಾಸಕ ವಿಜಯಸಿಂಗ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ಲಮಪ್ರಭು ಪಾಟೀಲ, ಮೇಯರ್ ಮಲ್ಲಮ್ಮ ವಳಕೇರಿ, ಉಪ ಮೇಯರ್ ಅಲಿಯಾ ಶಿರಿನ್ ಬಡೇಖಾನ್, ಮಾಜಿ ಶಾಸಕ ಬಿ.ಆರ್.ಪಾಟೀಲ, ಸವಿತಾ ಸಜ್ಜನ, ಲಿಂಗರಾಜ, ಬಾಬು ಒಂಟಿ, ನಾಸಿರ್ ಹುಸೇನ್, ರಾಜು ಕಪನೂರ, ಚಂದ್ರಿಕಾ ಪರಮೇಶ್ವರ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ತಡಕಲ್ ಇದ್ದರು.

‘ಚೌಕೀದಾರ ಚೋರ್ ಹೈ’
ದೇಶದ ರಕ್ಷಕ ಎಂದು ಹೇಳಿ ಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಸುಳ್ಳುಗಾರ. ಚೌಕೀದಾರ ಚೋರ್ ಹೈ. ಕೋಮುವಾದಿ ಬಿಜೆಪಿಗೆ ಯಾವ ಕಾರಣಕ್ಕೂ ಮತ ಹಾಕಬೇಡಿ. ಬಿಜೆಪಿ ಸೇಡು, ದ್ವೇಷದ ರಾಜಕಾರಣ ಮಾಡುತ್ತಿದೆ. ಜಾತಿ–ಜಾತಿಗಳ ಮಧ್ಯೆ ಜಗಳ ಹಚ್ಚುತ್ತಿದೆ. ಆದ್ದರಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗೆಲ್ಲಿಸಬೇಕು. ರಾಹುಲ್ ಗಾಂಧಿ ಕೈ ಬಲಪಡಿಸಬೇಕು. ಬಿಜೆಪಿ ಅಭ್ಯರ್ಥಿ ಠೇವಣಿ ಕಳೆಯಬೇಕು.

‘ಬಿಜೆಪಿ ಅಭ್ಯರ್ಥಿ ಹುಟ್ಟಿಸಿದ್ದು ಕಾಂಗ್ರೆಸ್’
‘ಗುಲಬರ್ಗಾ’ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಹುಟ್ಟಿಸಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷ. ಅವರನ್ನು ನೀವು (ಬಿಜೆಪಿಯವರು) ತೊಡೆ ಮೇಲೆ ಕೂರಿಸಿಕೊಂಡು ನನ್ನ ಕೂಸು, ನನ್ನ ಕೂಸು ಎಂದು ಹೇಳುತ್ತಿದ್ದೀರಿ. ನರೇಂದ್ರ ಮೋದಿಗೆ ಸ್ವಾಭಿಮಾನವಿದ್ದರೆ ಈ ಕೆಲಸ ಮಾಡುತ್ತಿರಲಿಲ್ಲ. ಸಂವಿಧಾನದಿಂದಲೇ ಮೋದಿ ಪ್ರಧಾನಿ ಆದರು, ಐದು ವರ್ಷ ಮೆರೆದರು. ಇನ್ನು ಮುಂದೆ ಅವರಿಗೆ ಅವಕಾಶ ಕೊಡಬೇಡಿ.

ನಾನು ಕೆಲಸ ಮಾಡಿದ್ದೇನೆ, ಮತ ಕೇಳುತ್ತಿದ್ದೇನೆ. ಹೀಗಾಗಿ ಈ ಬಾರಿ ನನ್ನ ಗೆಲುವು ಖಚಿತ. 371 (ಜೆ) ಲಾಭ ಪಡೆದ ನಾಯಕರೇ ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಬಿಜೆಪಿಯವರು ಐದು ವರ್ಷದಲ್ಲಿ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಹೇಳಲಿ.

350 ಕೆ.ಜಿ. ಸೇಬಿನ ಹಾರ!
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮೂರು ಕ್ರೇನ್‌ಗಳ ಮೂಲಕ ಪುಷ್ಪವೃಷ್ಟಿ ಮಾಡಿದ ಕಾರ್ಯಕರ್ತರು, 350 ಕೆ.ಜಿ ತೂಕದ ಸೇಬಿನ ಹಾರವನ್ನು ಹಾಕಿ ಗಮನ ಸೆಳೆದರು. ಯುವಕರು ಸೇಬಿನ ಹಾರದ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಸಚಿವ ಡಿ.ಕೆ.ಶಿವಕುಮಾರ್ ಹಾಗೂ ನಟ ದರ್ಶನ್ ಅವರಿಗೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸೇಬಿನ ಹಾರ ಹಾಕಿದ್ದರು. ಆ ಟ್ರೆಂಡ್ ಕಲಬುರ್ಗಿಯಲ್ಲೂ ಕಂಡು ಬಂತು.

ವಾಹನ ಏರಿ ಹಾರ ಹಾಕಿದರು
ಮಲ್ಲಿಕಾರ್ಜುನ ಖರ್ಗೆ ಅವರು ಗಂಜ್‌ ಪ್ರದೇಶದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಹೊರಟ ಸಂದರ್ಭದಲ್ಲಿ ವಾಹನವನ್ನು ತಡೆದ ಅಭಿಮಾನಿಗಳು ಖರ್ಗೆ ಅವರಿಗೆ ಹಾರ ಹಾಕಿದರು.

ಪೊಲೀಸರು ತಡೆಯಲು ಪ್ರಯತ್ನಿಸಿದರೂ ಅವರಿಂದ ತಪ್ಪಿಸಿಕೊಂಡು ವಾಹನದ ಮೇಲೆ ಹತ್ತಿದ ಇಬ್ಬರು ಅಭಿಮಾನಿಗಳು ಹಾರ ಹಾಕಿದರು. ‘ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೈ’ ಎಂದು ಜೋರಾಗಿ ಘೋಷಣೆ ಕೂಗಿದರು.

ಕುಡಿಯಲು ತಂಪು ನೀರು: ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರಿಗೆ ಕುಡಿಯಲು ತಂಪು ನೀರಿನ ವ್ಯವಸ್ಥೆ ಮಾಡಲಾಗಿತ್ತು. ಮಾರ್ಗ ಮಧ್ಯದಲ್ಲಿ ನೀರಿನ ಬಾಟಲ್‌, ಪ್ಯಾಕೆಟ್‌ಗಳನ್ನು ವಿತರಿಸಲಾಯಿತು. ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಕಾರ್ಯಕರ್ತರು ಮುಗಿಬಿದ್ದು ನೀರಿನ ಬಾಟಲ್, ಪ್ಯಾಕೆಟ್‌ಗಳನ್ನು ತೆಗೆದುಕೊಂಡರು.

‘ಎಲ್‌ಸಿಡಿ ಪರದೆ’ಯಲ್ಲಿ ಖರ್ಗೆ ಸಾಧನೆ
ಮೂರು ವಾಹನಗಳಲ್ಲಿ ಎಲ್‌ಸಿಡಿ ಪರದೆಗಳನ್ನು ಇಟ್ಟು, ಅದರಲ್ಲಿ ಖರ್ಗೆ ಅವರ ಅಭಿವೃದ್ಧಿ ಕಾರ್ಯಗಳು ಹಾಗೂ ಸಾಧನೆಗಳ ಬಗ್ಗೆ ಪ್ರಸಾರ ಮಾಡಲಾಯಿತು.

ರಾಷ್ಟ್ರೀಯ ಹೆದ್ದಾರಿ, ಇಎಸ್‌ಐ ಆಸ್ಪತ್ರೆ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ), 371 (ಜೆ), ರೈಲ್ವೆ ಕೋಚ್ ಕಾರ್ಖಾನೆ, ವಿಮಾ ನಿಲ್ದಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು.

ಖರ್ಗೆ ಆಸ್ತಿ ₹4.91ಕೋಟಿ ವೃದ್ಧಿ

 ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಆಸ್ತಿ ಐದು ವರ್ಷಗಳಲ್ಲಿ ₹4.91 ಕೋಟಿ ಹೆಚ್ಚಳವಾಗಿದೆ.

2014ರ ಚುನಾವಣೆ ವೇಳೆ ಅವರು ಸಲ್ಲಿಸಿದ್ದ ನಾಮಪತ್ರದಲ್ಲಿ ತಮ್ಮ ಹಾಗೂ ಪತ್ನಿ ರಾಧಾಬಾಯಿ, ಅವಿಭಜಿತ ಕುಟುಂಬದ ಒಟ್ಟಾರೆ ಆಸ್ತಿ ₹10.85 ಕೋಟಿ ಎಂದು ತಿಳಿಸಿದ್ದರು. ಈಗ ₹15.77 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಪ್ರಮಾಣ ಪತ್ರ ನೀಡಿದ್ದಾರೆ. ಖರ್ಗೆ ಹಾಗೂ ಅವರ ಪತ್ನಿ ವಾಹನ ಹೊಂದಿಲ್ಲ. 2014ರಲ್ಲಿ ಖರ್ಗೆ ಅವರಿಗೆ ₹10 ಲಕ್ಷ ಹಾಗೂ ರಾಧಾಬಾಯಿ ಅವರಿಗೆ ₹64.10 ಲಕ್ಷ ಸಾಲ ಇತ್ತು. ಈಗ ಖರ್ಗೆ ಅವರಿಗೆ ₹10 ಲಕ್ಷ ಹಾಗೂ ರಾಧಾಬಾಯಿ ಅವರಿಗೆ ₹21.22 ಲಕ್ಷ ಸಾಲ ಇದೆ. ಖರ್ಗೆ ಗುರುವಾರ ನಾಮಪತ್ರ ಸಲ್ಲಿಸಿದರು.

***

ಇಷ್ಟೊಂದು ಜನರನ್ನು ನಾನು ಎಂದೂ ನೋಡಿರಲಿಲ್ಲ. ಎಲ್ಲಾ ಜಾತಿ–ಜನಾಂಗದ ಜನರು ಸೇರಿದ್ದಾರೆ. ಇದರಿಂದಾಗಿ ವಿರೋಧಿಗಳಿಗೆ ಈಗಲೇ ಭಯ ಶುರುವಾಗಿದೆ.
-ಕೆ.ಬಿ.ಶಾಣಪ್ಪ, ರಾಜ್ಯಸಭಾ ಮಾಜಿ ಸದಸ್ಯ

*
ಮಲ್ಲಿಕಾರ್ಜುನ ಖರ್ಗೆ ಗೆಲುವು ಖಚಿತ. ಆದರೆ, ಗೆಲುವಿನ ಅಂತರವನ್ನು ಕನಿಷ್ಠ 2 ಲಕ್ಷಕ್ಕೆ ಏರಿಸಬೇಕು. ಐತಿಹಾಸಿಕ ವಿಜಯಕ್ಕೆ ನೀವೆಲ್ಲ ಸಾಕ್ಷಿಯಾಗಬೇಕು.
-ಕನ್ನೀಜ್ ಫಾತಿಮಾ, ಶಾಸಕಿ

*
ಬಿಜೆಪಿಗೆ ಅಭ್ಯರ್ಥಿ ಸಿಗದ ಕಾರಣ ನಮ್ಮಲ್ಲಿದ್ದ ‘ಲಂಗಡಾ’ ಮನುಷ್ಯನನ್ನು ಎತ್ತಿಕೊಂಡು ಹೋಗಿದ್ದಾರೆ. ಖರ್ಗೆ ಅವರ ಅಭಿವೃದ್ಧಿಪರ ಕೆಲಸಗಳಿಗೆ ಮತ ಹಾಬೇಕು.
-ರಹೀಂಖಾನ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ

*
ಖರ್ಗೆ ಈ ನಾಡಿನ ಹೆಮ್ಮೆಯ ಪುತ್ರ, ಸೋಲಿಲ್ಲದ ಸರದಾರ. ಅವರ ಅಭಿವೃದ್ಧಿ ಕಾರ್ಯಗಳನ್ನು ದೇಶವೇ ನೋಡುತ್ತಿದೆ. ಭಾರಿ ಮತಗಳ ಅಂತರದಿಂದ ಗೆಲ್ಲಿಸಬೇಕು.
-ರಾಜಶೇಖರ ಪಾಟೀಲ, ಗಣಿ ಮತ್ತು ಭೂವಿಜ್ಞಾನ ಸಚಿವ

*
ಬಿಜೆಪಿಯವರು ಹಣದ ಆಮಿಷವೊಡ್ಡಿ ನಮ್ಮ ಪಕ್ಷದ ವ್ಯಕ್ತಿಯನ್ನು ಕರೆದುಕೊಂಡು ಹೋಗಿದ್ದಾರೆ. ಅವರನ್ನು ಸೋಲಿಸುವ ಮೂಲಕ ಅವರಿಗೆ ಶಿಕ್ಷೆ ವಿಧಿಸಬೇಕು.
-ಡಾ.ಶರಣಪ್ರಕಾಶ ಪಾಟೀಲ, ಮಾಜಿ ಸಚಿವ

*
ಲಂಬಾಣಿ ಸಮುದಾಯದ ಮತಗಳನ್ನು ಕಾಂಗ್ರೆಸ್‌ಗೆ ಹಾಕಿಸುವುದು ನನ್ನ ಜವಾಬ್ದಾರಿ. ಹಣಕ್ಕಾಗಿ ಮಾರಾಟ ವಾಗಿರುವ ವ್ಯಕ್ತಿಗೆ ಯಾರೂ ಮತ ಹಾಕುವುದಿಲ್ಲ.
-ಬಾಬುರಾವ್ ಚವಾಣ್, ಮಾಜಿ ಸಚಿವ

*
ಸಂವಿಧಾನದ ಪ್ರತಿಯನ್ನು ಸುಟ್ಟಿರುವ ಕೋಮುವಾದಿ ಗಳಿಗೆ ತಕ್ಕ ಪಾಠ ಕಲಿಸಲಾಗುವುದು. ಏ.23ರಂದು ಮಹಾಯುದ್ಧ ನಡೆಯುತ್ತಿದ್ದು, ಖರ್ಗೆ ಗೆಲುವು ಸಾಧಿಸುವುದು ಖಚಿತ.
-ತಿಪ್ಪಣ್ಣಪ್ಪ ಕಮಕನೂರ, ಕೋಲಿ ಸಮಾಜದ ಮುಖಂಡ

*
ದೇಶದ ದಲಿತರಿಗೆ ಇಂದಿರಾಗಾಂಧಿ ಸ್ವಾತಂತ್ರ್ಯ ಕೊಡಿಸಿದರೆ, ಹೈದರಾಬಾದ್ ಕರ್ನಾಟಕ ಭಾಗದ ದಲಿತರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಸ್ವಾತಂತ್ರ್ಯ ಕೊಡಿಸಿದ್ದಾರೆ.
-ಬಿ.ನಾರಾಯಣರಾವ, ಶಾಸಕ, ಬಸವಕಲ್ಯಾಣ

*
ಇದು ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಂತೆ ಕಾಣಿಸು ತ್ತಿಲ್ಲ. ಬದಲಿಗೆ ವಿಜಯೋತ್ಸವದಂತೆ ಕಾಣಿಸುತ್ತಿದೆ. ಮತದಾರರು ಮೋದಿಯ ಸುಳ್ಳಿನ ಬಲೆಗೆ ಬೀಳಬಾರದು.
-ಎಂ.ವೈ.ಪಾಟೀಲ, ಶಾಸಕ, ಅಫಜಲಪುರ

*
ಇಲ್ಲಿ 1.5 ಲಕ್ಷ ಜನರು ಸೇರಿದ್ದೀರಿ. ಪ್ರತಿಯೊಬ್ಬರು ಎರಡೆರಡು ಮತ ಹಾಕಿಸಿದರೆ 4.5 ಲಕ್ಷ ಮತಗಳು ಬರುತ್ತವೆ. ಏ.23ರ ವರೆಗೆ ಕಾರ್ಯಕರ್ತರು ವಿರಮಿಸಬಾರದು.
-ಡೇವಿಡ್ ಸಿಮಿಯಾನ್, ಮಾಜಿ ಸಭಾಪತಿ

*
ಮುಂಬಯಿನ ಪಂಚತಾರಾ ಹೋಟೆಲ್‌ನಲ್ಲಿ 22 ದಿನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ವ್ಯವಹಾರ ಮಾಡಿ ಕೊಂಡವರಿಗೆ ಮತ ಹಾಕಬೇಡಿ. ಖರ್ಗೆಗೆ ಮತ ಹಾಕಿ.
-ಸುಭಾಸ ರಾಠೋಡ, ಕಾಂಗ್ರೆಸ್ ಮುಖಂಡ

*
ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್‌ನ ಎರಡು ಲಕ್ಷ ಮತಗಳು ಇವೆ. ಎಲ್ಲ ಮತಗಳೂ ಖರ್ಗೆ ಪರ ಚಲಾವಣೆಯಾಗುತ್ತವೆ.
-ಕೇದಾರಲಿಂಗಯ್ಯ ಹಿರೇಮಠ, ಜೆಡಿಎಸ್ ಮುಖಂಡ

*
ಜನಸಾಗರ ನೋಡಿ ಖುಷಿಯಾಗಿದೆ. ಈ ಚುನಾವಣೆ ಸುಳ್ಳು–ಸತ್ಯದ ನಡುವಿನ ಚುನಾವಣೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು 2–3 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು.
ಡಾ.ಅಜಯಸಿಂಗ್, ಶಾಸಕ

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !