ಬುಧವಾರ, ನವೆಂಬರ್ 13, 2019
22 °C
ಕಾರಿಗೆ ಡಿಕ್ಕಿ ಹೊಡೆಸಿ ಮಾರಕಾಸ್ತ್ರಗಳಿಂದ ಕೊಲೆ; ಜಿ.ಪಂ. ಸದಸ್ಯ ಸೇರಿ ಹಲವರ ವಿರುದ್ಧ ಪ್ರಕರಣ

ಪಂಚಾಯಿತಿ ರಾಜಕೀಯ; ವ್ಯಕ್ತಿಯ ಭೀಕರ ಕೊಲೆ

Published:
Updated:
Prajavani

ಕಲಬುರ್ಗಿ: ಗ್ರಾಮ ಪಂಚಾಯಿತಿಯ ಸಿ.ಸಿ. ರಸ್ತೆ ಕಾಮಗಾರಿ ಹಾಗೂ ಮನೆಗಳ ಹಂಚಿಕೆಗೆ ಸಂಬಂಧಿಸಿದಂತೆ ಉಂಟಾದ ಜಗಳವು ವ್ಯಕ್ತಿಯೊಬ್ಬರನ್ನು ಬಲಿ ಪಡೆಯುವುದರೊಂದಿಗೆ ಅಂತ್ಯವಾಗಿದೆ. ದುಷ್ಕರ್ಮಿಗಳ ಗುಂಪೊಂದು ತಾಲ್ಲೂಕಿನ ಶರಣ ಸಿರಸಗಿ ಬಳಿ ಶಿವಲಿಂಗ ಗೊಲ್ಲಾಳಪ್ಪ ಭಾವಿಕಟ್ಟಿ (46) ಎಂಬುವವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಸೋಮವಾರ ರಾತ್ರಿ ಹತ್ಯೆ ಮಾಡಿದೆ.

ಶಿವಲಿಂಗ ಅವರು ಜೇವರ್ಗಿ ತಾಲ್ಲೂಕಿನ ಮಯೂರ ಗ್ರಾಮದವರು. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೇವರ್ಗಿ ನ್ಯಾಯಾಲಯಕ್ಕೆ ಹಾಜರಾಗಿ ಕಲಬುರ್ಗಿ ಮಾರ್ಗವಾಗಿ ಚೌಡಾಪುರಕ್ಕೆ ಹೊರಟಿದ್ದರು. ಜೇವರ್ಗಿಯಿಂದಲೇ ಹೊಂಚು ಹಾಕಿದ್ದ ದುಷ್ಕರ್ಮಿಗಳು ಕಾರಿನಲ್ಲಿ ಶಿವಲಿಂಗ ಅವರನ್ನು ಹಿಂಬಾಲಿಸಿದ್ದರು. ಶರಣ ಸಿರಸಗಿ ದಾಟಿ ಹಾರುತಿ ಹಡಗಿಲ್‌ ಗ್ರಾಮದತ್ತ ಬರುತ್ತಲೇ ಹಿಂದಿನಿಂದ ಸ್ಕಾರ್ಪಿಯೊ ವಾಹನದಿಂದ ಡಿಕ್ಕಿ ಹೊಡೆಸಿದ್ದಾರೆ. ಇದರಿಂದಾಗಿ ಶಿವಲಿಂಗ ಹಾಗೂ ಅವರ ಸಹೋದರ ಮಹಾಂತಪ್ಪ ಅವರು ಕುಳಿತಿದ್ದ ವಾಹನ ರಸ್ತೆ ಪಕ್ಕದಲ್ಲಿದ್ದ ಕಲ್ಲಿಗೆ ಡಿಕ್ಕಿ ಹೊಡೆದು ಕಲಬುರ್ಗಿಯತ್ತ ಮುಖಮಾಡಿ ನಿಂತಿದೆ. ಅಷ್ಟರಲ್ಲಿಯೇ ತಲ್ವಾರ್‌ನಿಂದ ಶಿವಲಿಂಗ ಅವರ ಬೆನ್ನು, ಕುತ್ತಿಗೆ ಹಾಗೂ ತಲೆಯ ಹಿಂಭಾಗಕ್ಕೆ ಇರಿದು ಕೊಂದು ಹಾಕಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಗಾಬರಿಯಾದ ಮಹಾಂತಪ್ಪ ಅಲ್ಲಿಯೇ ಅಡಗಿ ಕುಳಿತಿದ್ದಾರೆ. ದುಷ್ಕರ್ಮಿಗಳು ತೆರಳಿದ ಬಳಿಕ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ವಾಪಸ್‌ ಕಾರಿನಲ್ಲಿ ತೆರಳುವ ಸಂದರ್ಭದಲ್ಲಿ ಇವರ ಕಾರು ಸಹ ಪಲ್ಟಿಯಾಗಿದೆ. ಇದರಿಂದ ಮುಂಬಾಗಿಲಿನ ಬಾಗಿಲುಗಳು ಲಾಕ್‌ ಆದವು. ನಂತರ ಹಿಂಬಾಗಿಲಿನ ಮೂಲಕ ಹೊರಗೆ ಬಂದಿದ್ದಾರೆ. ಕೊಲೆ ಆರೋಪಿಗಳನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಶಾಂತಪ್ಪ ಕೂಡಲಗಿ ಅವರು ಮತ್ತೊಂದು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಹೀಗಾಗಿ, ಆರೋಪಿಗಳಿಗೆ ರಕ್ಷಣೆ ನೀಡಿದ್ದರಿಂದ ಶಾಂತಪ್ಪ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಫರಹತಾಬಾದ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಪ್ಪ, ಸಹೋದರ ಹಣಮಂತ ಕೂಡಲಗಿ, ರವಿ ಶಂಕ್ರಪ್ಪ, ರಾಜು ಶರಣಪ್ಪ, ಪ್ರಕಾಶ ಮರೆಪ್ಪ, ಸಂತೋಷ ಸುಭಾಷ್‌, ನಾಗರಾಜ ಗುರುನಾಥ, ರಾಜಪ್ಪ ಭೀಮಶ್ಯಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ. 

ನಿರ್ವಾಹಕರಾಗಿದ್ದ ಶಿವಲಿಂಗ: ಕೊಲೆಯಾದ ಶಿವಲಿಂಗ ಅವರು ಈ ಮುಂಚೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕರಾಗಿದ್ದರು. ನಂತರ ಆ ಹುದ್ದೆಗೆ ರಾಜೀನಾಮೆ ನೀಡಿ ಟಿಪ್ಪರ್‌ಗಳನ್ನು ಖರೀದಿಸಿ ಮರಳು ಸಾಗಾಣಿಕೆ ವ್ಯವಹಾರ ಮಾಡುತ್ತಿದ್ದರು. ಗ್ರಾಮದಲ್ಲಿ ಸಿ.ಸಿ. ರಸ್ತೆ ಮಾಡಿಸುವ ಹಾಗೂ ಆಶ್ರಯ ಮನೆಗಳ ಹಂಚಿಕೆಗೆ ಸಂಬಂಧಿಸಿದಂತೆ ಶಿವಲಿಂಗ ಭಾವಿಕಟ್ಟಿ ಹಾಗೂ ಕೂಡಲಗಿ ಮನೆತನಗಳ ಮಧ್ಯೆ ಜಗಳವಾಗಿತ್ತು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಈ ಕೊಲೆ ಮಾಡಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)