ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಪಕಾರ ಸ್ಮರಣೆ ಜನಪದರ ಮೂಲಗುಣ: ಸಿದ್ದತೋಟೇಂದ್ರ ಶಿವಾಚಾರ್ಯ

ಮಣ್ಣೆತ್ತಿನ ಅಮಾವಾಸ್ಯೆಯ ತನಾರತಿ ಉತ್ಸವ, ಶಿವಾನುಭವ ಚಿಂತನ
Published 7 ಜುಲೈ 2024, 6:42 IST
Last Updated 7 ಜುಲೈ 2024, 6:42 IST
ಅಕ್ಷರ ಗಾತ್ರ

ಕಲಬುರಗಿ: ‘ನಿತ್ಯ ಬದುಕಿನಲ್ಲಿ ತನಗೆ ಸಹಾಯ ಮಾಡಿದವರನ್ನು ಕೃತಜ್ಞತೆಯಿಂದ ನೆನೆಯುವ, ಅವರನ್ನು ದೇವರಂತೆ ಆರಾಧಿಸುವ ಉಪಕಾರ ಸ್ಮರಣೆಯ ಮನೋಭಾವ ಜನಪದರ ಜೀವನದ ಮೂಲಗುಣವಾಗಿದೆ’ ಎಂದು ನಾಲವಾರದ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಸಿದ್ದತೋಟೇಂದ್ರ ಶಿವಾಚಾರ್ಯರು ಹೇಳಿದರು. 

ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಚಿತ್ತಾಪುರ ತಾಲ್ಲೂಕಿನ ನಾಲವಾರ ಮಠದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಚಿಂತನ, ಪರಿಸರ ಜಾಗೃತಿ ಮತ್ತು ಸಸಿ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ರಟ್ಟೆ ಮುರಿದು ದುಡಿಯುವ ರೈತರು ಮಣ್ಣೆತ್ತಿನ ಅಮಾವಾಸ್ಯೆಯ ಸಂದರ್ಭದಲ್ಲಿ ಅನ್ನ ಬೆಳೆಯುವ ಮಣ್ಣನ್ನು ಹಾಗೂ ಎತ್ತುಗಳನ್ನು ದೈವತ್ವದ ಸ್ಥಾನದಲ್ಲಿಟ್ಟು ಗೌರವಿಸುತ್ತಾರೆ. ರೈತರು ಎಂತಹ ಜೀವನ ಮೌಲ್ಯಗಳನ್ನು ಬೆಳೆಸಿಕೊಂಡಿದ್ದಾರೆ ಎಂಬುದನ್ನು ಕಾಣಬಹುದು’ ಎಂದರು.

‘ಜಗತ್ತು ತಾಂತ್ರಿಕ ಪ್ರಗತಿಯ ಬೆನ್ನು ಹತ್ತಿ ಸುತ್ತಲಿನ ಪರಿಸರವನ್ನು ನಿರ್ಲಕ್ಷ್ಯ ಮಾಡುತ್ತಿದೆ. ಶುದ್ಧ ಗಾಳಿ, ನೀರು ಸಿಗುವುದು ದುರ್ಲಭ ಎನ್ನುವ ಪರಿಸ್ಥಿತಿ ಇದೆ. ಇಂತಹ ಸಂದಿಗ್ಧ ಸಮಯದಲ್ಲಿ ಮನುಷ್ಯ ಮತ್ತೆ ಪ್ರಕೃತಿಯ ಕಡೆಗೆ ವಾಲಿದಾಗ ಮಾತ್ರ ಮುಂದೆ ಬರಬಹುದಾದ ಭಯಾನಕ ದಿನಗಳನ್ನು ಮುಂದೂಡಬಹುದಾಗಿದೆ’ ಎಂದು ಹೇಳಿದರು.

‘ಮನೆಯ ಮುಂಭಾಗ, ಹೊಲದ ಸುತ್ತಲೂ, ರಸ್ತೆಗಳ ಎರಡೂ ಬದಿಗಳಲ್ಲಿ ಸಸಿಗಳನ್ನು ನೆಟ್ಟು, ಅವುಗಳನ್ನು ಮಕ್ಕಳಂತೆ ಆರೈಕೆ ಮಾಡುವ ಸಂಕಲ್ಪ ಮಾಡಬೇಕು. ಮುಂಬರುವ ಪೀಳಿಗೆಗೆ ಶುದ್ಧ ಪರಿಸರ ನೀಡುವುದೇ ಅತ್ಯತ್ತಮ ಉಡುಗೊರೆ’ ಎಂದರು.

ಬೀದರ್ ಜಿಲ್ಲೆಯ ಪರಿಸರ ವಾಹಿನಿ ಅಧ್ಯಕ್ಷ ಶೈಲೇಂದ್ರ ಕವಡಿಮಠ ಅವರು ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು. ಭಕ್ತರಿಗೆ ಮಾವು, ಬೇವು, ತೆಂಗು, ಬಿಲ್ವಪತ್ರೆ ಸೇರಿದಂತೆ ವಿವಿಧ ತಳಿಯ ಸಸಿಗಳ ವಿತರಣೆ ಮಾಡಲಾಯಿತು.

ತಾಂಡೂರಿನ ರಾಕೇಶ ಸ್ವಾಮೀಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತನಾರತಿ ಉತ್ಸವದಲ್ಲಿ ಹರಕೆ ಸಲ್ಲಿಸಿದ ಭಕ್ತರು:

ಮಣ್ಣೆತ್ತಿನ ಅಮಾವಾಸ್ಯೆಯ ಅಂಗವಾಗಿ ಮಧ್ಯರಾತ್ರಿ ತನಾರತಿ ಉತ್ಸವವು ಸಹಸ್ರಾರು ಭಕ್ತರ ಮಧ್ಯೆ ಭಕ್ತಿ ಭಾವದಿಂದ ನೆರವೇರಿತು.

ಸಿದ್ದತೋಟೇಂದ್ರ ಶಿವಾಚಾರ್ಯರು ಪಾರಂಪರಿಕ ಉಡುಪು ಧರಿಸಿ ತನಾರತಿ ಉತ್ಸವದ ನೇತೃತ್ವ ವಹಿಸಿದ್ದರು. ಪುರವಂತಿಕೆ, ಪೂರ್ಣಕುಂಭ, ಬಾಜಾ-ಭಜಂತ್ರಿ, ವೈದಿಕರ ವೇದಘೋಷಗಳೊಂದಿಗೆ ಮಧ್ಯರಾತ್ರಿ ಪ್ರಾರಂಭವಾಗಿ ಬೆಳಗಿನ ಜಾವದವರೆಗೂ ನಡೆಯಿತು.

ಮಧ್ಯರಾತ್ರಿ ಸ್ನಾನಾದಿಗಳನ್ನು ಪೂರೈಸಿಕೊಂಡು, ಗದ್ದುಗೆಗೆ ನಮಿಸಿದ ಭಕ್ತರು, ಗೋಧಿ ಹಿಟ್ಟಿನಿಂದ ಸಿದ್ಧಪಡಿಸಿದ ದೀಪಗಳನ್ನು ತಲೆಯ ಮೇಲೆ ಹೊತ್ತು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ ಹರಕೆ ಸಲ್ಲಿಸಿ ಪುನೀತರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT