ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲುಷಿತ ನೀರು ಕುಡಿದು 12 ಮಕ್ಕಳು ಅಸ್ವಸ್ಥ?: ತಾಂಡಾಕ್ಕೆ ಅಧಿಕಾರಿಗಳ ಭೇಟಿ

Published 12 ಜೂನ್ 2024, 15:38 IST
Last Updated 12 ಜೂನ್ 2024, 15:38 IST
ಅಕ್ಷರ ಗಾತ್ರ

ಯಡ್ರಾಮಿ: ಕಲುಷಿತ ನೀರು ಮತ್ತು ಕಳಪೆ ಆಹಾರ ಸೇವಿಸಿದ ಕಾರಣ ಮಂಗಳವಾರ ಆರು ಜನ ಮಕ್ಕಳು ಅಸ್ವಸ್ಥಗೊಂಡರೆ, ಬುಧವಾರ ಮತ್ತೆ ಆರು ಜನ ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿದ ಘಟನೆ ತಾಲ್ಲೂಕಿನ ನಾಗರಹಳ್ಳಿ ತಾಂಡಾದಲ್ಲಿ ಸಂಜೆ ನಡೆದಿದೆ.

ಸತತ ಸುರಿಯುತ್ತಿರುವ ಮಳೆಗೆ ಕೊಳಚೆ ನೀರು ಕೊಳವೆ ಬಾವಿಗೆ ಸೇರಿ ಅದೇ ನೀರನ್ನು ತಾಂಡದ ಜನರು ಕುಡಿಯುತ್ತಿರುವುದರಿಂದ ವಾಂತಿ–ಬೇಧಿ ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಸಿಂದಗಿ ಮತ್ತು ಕೆಂಭಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದರು.

ಕೊಳವೆ ಬಾವಿ ನೀರನ್ನು ಇಡೀ ತಾಂಡಾ ಜನರು ಕುಡಿಯುತ್ತಾರೆ. ಆದರೆ 12 ಜನರಿಗೆ ಮಾತ್ರ ವಾಂತಿ–ಬೇಧಿ ಕಾಣಿಸಿಕೊಂಡಿದ್ದಕ್ಕೆ ಆಹಾರ ಸಮಸ್ಯೆಯಿಂದ ಅನಾರೋಗ್ಯ ಕಾಣಿಸಿಕೊಂಡಿದೆ ಎಂಬುವುದು ತಾಂಡಾಕ್ಕೆ ಭೇಟಿ ನೀಡಿದ ಆರೋಗ್ಯ ಅಧಿಕಾರಿಗಳ ಸಮಜಾಯಿಷಿ.

‘ನೀರು ಮತ್ತು ಶಾಲೆಯಲ್ಲಿನ ಆಹಾರ ಸಹ ಪರೀಕ್ಷೆಗೆ ಕಳಿಸಲಾಗಿದೆ. ಶಾಲೆಯಲ್ಲಿ ಮೊದಲ ಬಾರಿ ರಾಗಿ ಮಾಲ್ಟ್‌ ಮಾಡಲಾಗಿದೆ, ಇದರಲ್ಲಿ ವ್ಯತ್ಯಾಸ ಕಂಡು ಬಂದಿರಬೇಕು ಅಥವಾ ಆಹಾರ ವಿಷಪೂರಿತವಾಗಿರಬೇಕು. ವಯಸ್ಕರಿಗೆ ಹಾಗೂ ಗ್ರಾಮಸ್ಥರಲ್ಲಿ ಈ ಸಮಸ್ಯೆ ಕಂಡು ಬಂದಿಲ್ಲ. 10 ವರ್ಷದಿಂದ 15 ವರ್ಷದ ಮಕ್ಕಳಲ್ಲಿ ಈ ಸಮಸ್ಯೆ ಕಂಡು ಬಂದಿದೆ’ ಎಂದು ಹೇಳಲಾಗಿದೆ.

ಇಲ್ಲಿನ ಜನರು ಎರಡು ಕೊಳವೆ ಬಾವಿಯ ನೀರು ಕುಡಿಯುತ್ತಾರೆ. 15 ದಿನಗಳ ಹಿಂದೆ ಈ ನೀರು ಪರೀಕ್ಷೆ ಮಾಡಿಸಿದಾಗ ಇಲ್ಲಿನ ನೀರು ಕುಡಿಯಲು ಯೋಗ್ಯ ಎಂದೇ ವರದಿ ಬಂದಿದೆ. ಆದರೂ ಅಧಿಕಾರಿಗಳು ಮತ್ತೊಮ್ಮೆ ನೀರು ಪರೀಕ್ಷೆ ತೆಗೆದುಕೊಂಡಿದ್ದಾರೆ.

‘ಮಕ್ಕಳು ಹೇಳುವಂತೆ ಆಹಾರ ವಾಸನೆ ಬರುತ್ತಿತ್ತು, ಅದು ಊಟ ಮಾಡುವಂತೆ ಇರಲಿಲ್ಲ. ಆದರೂ ನಾವು ಊಟ ಮಾಡಿದ್ದರಿಂದ ಈ ಸಮಸ್ಯೆ ಕಂಡು ಬಂದಿರಬೇಕು’ ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

ಆಹಾರ ಮಾದರಿ ತೆಗೆದುಕೊಂಡು ಬಿಸಿ ಊಟ ಬಂದ್ ಮಾಡಲಾಗಿದೆ. ಆಹಾರ ಪದಾರ್ಥಗಳನ್ನು ಆರೋಗ್ಯ ಇಲಾಖೆ ಜಪ್ತಿ ಮಾಡಿದೆ.

ಗ್ರಾಮದಲ್ಲಿ ಸದ್ಯ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಡಾ. ಸಂದೀಪಸಿಂಗ್ ಎಂಬ ವೈದ್ಯರನ್ನು ನೇಮಿಸಲಾಗಿದೆ. ಮುಂಜಾಗ್ರತ ಕ್ರಮವಾಗಿ ಆಶಾ ಕಾರ್ಯಕರ್ತರು ಸೇರಿ ಎಲ್ಲ ವ್ಯವಸ್ಥೆ ಮಾಡಿ ಮಕ್ಕಳ ಮೇಲೆ ನಿಗಾ ಇಡಲಾಗಿದೆ.

ತಾಲ್ಲೂಕು ವೈದ್ಯಾಧಿಕಾರಿ ಡಾ. ಸಿದ್ದು ಪಾಟೀಲ, ಆಹಾರ ಸುರಕ್ಷತಾ ಅಧಿಕಾರಿ ಕಿರಣ, ಕಾಲರಾ ನಿಯಂತ್ರಣ ತಂಡದ ವಿವೇಕಾನಂದರೆಡ್ಡಿ, ಡಿಎಚ್‍ಒ ಡಾ. ಸುರೇಶ, ಚಂದ್ರಮುರುಳಿ, ಸಂತೋಷ, ಡಾ. ಸಂದೀಪಸಿಂಗ್, ಆಹಾರ ನಿಯಂತ್ರಣ ಅಧಿಕಾರಿ ಡಾ. ರತ್ನಾಕರ ತೋರಣ, ಪಿಡಿಒ, ಅಧ್ಯಕ್ಷ, ಗ್ರಾಪಂ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು.

ಶಾಲಾ ಮಕ್ಕಳಲ್ಲಿ ವಾಂತಿ– ಬೇಧಿ ಕಂಡು ಬಂದಿದ್ದರಿಂದ ನೀರು ಮತ್ತು ಆಹಾರವನ್ನು ಪರೀಕ್ಷೆಗೆ ಕಳಿಸಲಾಗಿದೆ. ಗ್ರಾಮದಲ್ಲಿ ಕುಡಿಯುವ ನೀರು ವೈದ್ಯರು ಆಂಬುಲೆನ್ಸ್ ಸೇರಿ ಎಲ್ಲ ವ್ಯವಸ್ಥೆ ಮಾಡಲಾಗಿದೆ
ಡಾ. ಸಿದ್ದು ಪಾಟೀಲ ತಾಲ್ಲೂಕು ವೈದ್ಯಾಧಿಕಾರಿ ಜೇವರ್ಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT