ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕ್‌ ಹಾಕದಿದ್ದರೆ ₹1000 ದಂಡ; ಪ್ರಯೋಗಕ್ಕೆ ಸಿದ್ಧತೆ

ಪೊಲೀಸ್‌ ಆಯುಕ್ತಾಲಯ, ಪಾಲಿಕೆ ಅಧಿಕಾರಿಗಳಿಂದ ಕಠಿಣ ಕ್ರಮ
Last Updated 4 ಅಕ್ಟೋಬರ್ 2020, 3:09 IST
ಅಕ್ಷರ ಗಾತ್ರ

ಕಲಬುರ್ಗಿ: ಮಾಸ್ಕ್‌ ಧರಿಸದೇ ಬೇಕಾಬಿಟ್ಟಿ ಓಡಾಡುವವರು ಹಾಗೂ ಕನಿಷ್ಠ ಅಂತರ ಕಾಯ್ದುಕೊಳ್ಳದವರು ಇನ್ನು ಮುಂದೆ ಭಾರಿ ದಂಡ ತೆರಬೇಕಾಗುತ್ತದೆ. ಈ ಕುರಿತು ಮಹಾನಗರ ಪಾಲಿಕೆ ಹಾಗೂ ನಗರ ಪೊಲೀಸ್‌ ಆಯುಕ್ತಾಲಯದ ಸಿಬ್ಬಂದಿ ಜಂಟಿ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ್ದಾರೆ.

ಸಾಕಷ್ಟು ಬಾರಿ ಜಾಗೃತಿ ಮೂಡಿಸಿ, ಎಚ್ಚರಿಕೆ ಕೊಟ್ಟ ಮೇಲೂ ಜನರು ಜವಾಬ್ದಾರಿ ತೋರುತ್ತಿಲ್ಲ. ನಗರದ ಮಾರುಕಟ್ಟೆ, ಬಸ್‌ ನಿಲ್ದಾಣ, ಹೋಟೆಲ್‌, ವಾಣಿಜ್ಯ ಮಳಿಗೆ, ಆಸ್ಪತ್ರೆ, ಎಟಿಎಂ, ಬ್ಯಾಂಕ್‌, ಸರ್ಕಾರಿ ಕಚೇರಿ, ಸಭೆ– ಸಮಾರಂಭ ಸೇರಿದಂತೆ ಎಲ್ಲೆಂದರಲ್ಲಿ ಮಾಸ್ಕ್‌ ಹಾಕಿಕೊಳ್ಳದೇ
ಓಡಾಡುವುದು ಕಂಡುಬರುತ್ತಿದೆ. ಇದಕ್ಕಾಗಿ ಈ ಹಿಂದೆ ₹ 200 ದಂಡ ಹಾಕುವ ನಿಯಮವಿತ್ತು. ಆದರೂ ಜನ ಇದಕ್ಕೆ ‘ಕ್ಯಾರೆ’ ಎನ್ನದ ಕಾರಣ, ರಾಜ್ಯ ಸರ್ಕಾರ ದಂಡದ ಮೊತ್ತವನ್ನು ತಲಾ ₹ 1000 ಸಾವಿರಕ್ಕೆ
ಏರಿಸಲಾಗಿದೆ.

‘ಮಾರುಕಟ್ಟೆಯೂ ಸೇರಿದಂತೆ ಯಾವುದೇ ಮಳಿಗೆ ಮುಂದೆ ಈಗ ಕಟ್ಟಿಗೆ ಬ್ಯಾರಿಕೇಡ್‌ಗಳು ಕಾಣಿಸುತ್ತಿಲ್ಲ. ಇದರಿಂದ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಕೊರೊನಾ ವೈರಾಣು ವ್ಯಾಪಕವಾಗಲು ಇದೂ ಕಾರಣ. ಹಾಗಾಗಿ, ಈ ಬಗ್ಗೆ ಎಲ್ಲ ವ್ಯಾಪಾರಿಗಳಿಗೂ ಅರಿವು ಮೂಡಿಸುತ್ತೇವೆ. ಜನರಿಗೂ ತಿಳಿವಳಿಕೆ ನೀಡುತ್ತೇವೆ. ಕೆಲವೇ ದಿನಗಳಲ್ಲಿ ಪರಿಷ್ಕೃತ ದಂಡ ಜಾರಿ ಮಾಡುತ್ತೇವೆ. ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ಮಾಸ್ಕ್‌ ಇಲ್ಲದೇ ಹೊರಗೆ ಬರುತ್ತಾನೋ ಅಷ್ಟೂ ಬಾರಿ ದಂಡ ತೆರಬೇಕಾಗುತ್ತದೆ. ದಂಡ ನೀಡಲು ಆಗದವರ ಮೇಲೆ ಪ್ರಕರಣ ದಾಖಲಿಸುವುದು ಅನಿವಾರ್ಯ’ ಎಂದು ಪಾಲಿಕೆ ಆಯುಕ್ತ ಸ್ನೇಹಲ್‌ ಲೋಖಂಡೆ ತಿಳಿಸಿದರು.

ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಮಾರ್ಕಿಂಗ್‌:‘ಸದ್ಯ ನಗರದ ಎಲ್ಲ ಪ್ರಮುಖ ವೃತ್ತ, ಚೌಕಗಳಲ್ಲಿ ಟ್ರಾಫಿಕ್‌ ಸಿಗ್ನಲ್‌ಗಳು ಕ್ರಿಯಾಶೀಲವಾಗಿವೆ. ಪ್ರತಿ ನಿಮಿಷಕ್ಕೂ ಹಲವು ಬೈಕ್‌, ಕಾರ್‌, ಆಟೊ ಚಾಲಕರು ಸಿಗ್ನಲ್‌ಗಳಲ್ಲಿ ಮುತ್ತಿಕೊಂಡು ನಿಲ್ಲುವುದು ಸಾಮಾನ್ಯವಾಗಿದೆ. ಇದರಿಂದ ಕೂಡ ಅಂತರ ಕಡಿಮೆಯಾಗಿ ವೈರಾಣು ವ್ಯಾಪಿಸಬಹುದು. ಹಾಗಾಗಿ, ಶೀಘ್ರದಲ್ಲೇ ಎಲ್ಲ ಸಿಗ್ನಲ್‌ಗಳಲ್ಲಿ ಮಾರ್ಕಿಂಗ್‌ ಮಾಡಲಾಗುವುದು. ಅದನ್ನು ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ನಗರ ಪೊಲೀಸ್‌ ಕಮಿಷನರ್‌ ಎನ್‌.ಸತೀಶಕುಮಾರ ಪ್ರತಿಕ್ರಿಯಿಸಿದ್ದಾರೆ.

ಸದ್ಯಕ್ಕೆ ಲಭ್ಯ ಇರುವ ಸಿಬ್ಬಂದಿಯನ್ನು ಬಳಸಿಕೊಂಡು ಎಲ್ಲವನ್ನೂ ನಿಯಂತ್ರಣ ಮಾಡಲು ಯತ್ನಿಸುತ್ತಿದ್ದೇವೆ. ಕೋವಿಡ್‌ ಬಗ್ಗೆ ಆರಂಭದಲ್ಲಿ ಇದ್ದಷ್ಟು ಎಚ್ಚರಿಕೆ ಈಗ ಜನರಿಗೆ ಇಲ್ಲ. ಹೀಗಾಗಿ, ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಜನರಲ್ಲಿ ಅರಿವು ಮೂಡದ ಹೊರತು ಯಾವ ಪ್ರಯತ್ನವೂ ಸಫಲವಾಗುವುದಿಲ್ಲ. ನಗರದ ಜನ ಅಂತರ ಕಾಪಾಡಿಕೊಂಡು, ಮಾಸ್ಕ್‌ ಧರಿಸಿ ಪೊಲೀಸರಿಗೆ ಸಹಕರಿಸಬೇಕು. ಇಲ್ಲದಿದ್ದರೆ ಭಾರಿ ದಂಡ ತೆತ್ತುವುದು ಅನಿವಾರ್ಯ ಎಂಬುದು ಅವರು ಹೇಳಿಕೆ.

box-1

ಆಟೊಗಳಿಗೆ ಕ್ಯು.ಆರ್‌. ಕೋಡ್‌

ನಗರದಲ್ಲಿ ಓಡಾಡುವ ಆಟೊಗಳಿಗೆ ಕ್ಯು.ಆರ್. ಕೋಡ್‌ ನೀಡಲು ಪೊಲೀಸ್‌ ಕಮಿಷನರ್‌ ಉಪಾಯ ಮಾಡಿದ್ದಾರೆ. ಪ್ರತಿಯೊಂದು ಆಟೊದ ಹೊರಗೆ ಮತ್ತು ಒಳಗೆ ಕ್ಯು.ಆರ್. ಕೋಡ್‌ ಅಂಟಿಸಲಾಗುವುದು. ಇದನ್ನು ಮೊಬೈಲ್‌ನಲ್ಲಿ ಸ್ಕ್ಯಾನ್‌ ಮಾಡಿದ ತಕ್ಷಣ ಚಾಲಕನ ಹೆಸರು, ಆಟೊ ಲೈಸನ್ಸ್‌ ಸೇರಿದಂತೆ ಎಲ್ಲ ನಿಖರ ಮಾಹಿತಿ ಎಲ್ಲರಿಗೂ ಸಿಗುತ್ತದೆ. ಇದರಿಂದ ನಕಲಿ ಲೈಸನ್ಸ್‌ ನಿಯಂತ್ರಣ, ಪರವಾನಗಿ ಇಲ್ಲದೇ ಓಡಾಡುತ್ತಿರುವ ಆಟೊಗಳ ವಶ ಹಾಗೂ ಹೆಚ್ಚುವರಿ ಮಂದಿಯನ್ನು ಸಾಗಿಸುವುದಕ್ಕೂ ತಡೆ ಹಾಕಬಹುದು ಎಂಬುದು ಅವರ ಲೆಕ್ಕಾಚಾರ.

ನಗರದಲ್ಲಿ ಆಟೊಗಳ ಸಂಚಾರವೇ ಹೆಚ್ಚು. ಅದರಲ್ಲೂ ಅನುಮತಿ ಇಲ್ಲದ ಆಟೊಗಳ ಓಡಾಟವೂ ಹೆಚ್ಚಾಗಿದೆ. ಮಿತಿಗಿಂತ ಹೆಚ್ಚು ಜನರನ್ನು ಹತ್ತಿಸಿಕೊಂಡು ವೈರಾಣು ಹರಡಲು ಆಟೊದವರೂ ಕಾರಣವಾಗುತ್ತಿದ್ದಾರೆ. ಹಾಗಾಗಿ, ವಾರದಲ್ಲಿ ಒಂದು ದಿನ ಆಟೊಗಳನ್ನು ‘ರ್‍ಯಾಂಡಮ್‌’ ಆಗಿ ತಪಾಸಣೆ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT