ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಪಿಡಿ ಸೇವೆ ಸ್ಥಗಿತ; ರೋಗಿಗಳ ಪರದಾಟ

ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಮುಷ್ಕರ
Published 18 ಆಗಸ್ಟ್ 2024, 6:17 IST
Last Updated 18 ಆಗಸ್ಟ್ 2024, 6:17 IST
ಅಕ್ಷರ ಗಾತ್ರ

ಕಲಬುರಗಿ: ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಕರೆ ನೀಡಿದ್ದ 24 ಗಂಟೆಗಳ ಮುಷ್ಕರಕ್ಕೆ ಕಲಬುರಗಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ವಿವಿಧ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಜಿಮ್ಸ್‌ ಆಸ್ಪತ್ರೆಯ ಆವರಣದಲ್ಲಿ ನೂರಾರು ವೈದ್ಯ ವಿದ್ಯಾರ್ಥಿಗಳು ದಿನವಿಡೀ ಪ್ರತಿಭಟನೆ ನಡೆಸಿದರು. ಕೊಲೆಗಾರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಜಿಮ್ಸ್‌ ಸಿಬ್ಬಂದಿಯೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ನಗರದ ಎಚ್‌ಕೆಇ ಸಂಸ್ಥೆಯ ಡಾ.ಮಾಲಕರೆಡ್ಡಿ ಹೋಮಿಯೊಪಥಿಕ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಾಲೇಜು ಹಾಗೂ ಇನಾಮದಾರ್‌ ಯುನಾನಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿದ್ಯಾರ್ಥಿಗಳು ಕ್ರಮವಾಗಿ ತಮ್ಮ ಕಾಲೇಜಿನಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಜಾಥಾ ನಡೆಸಿದರು. 

ಸಂಜೆಯೂ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಮೊಂಬತ್ತಿ ಹಿಡಿದು ಮೆರವಣಿಗೆ ನಡೆಸಿ, ವೈದ್ಯ ವಿದ್ಯಾರ್ಥಿನಿ ಕೊಲೆ ಪ್ರಕರಣ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

‘ಆಸ್ಪತ್ರೆಯಲ್ಲೇ ಸುರಕ್ಷಿತವಿಲ್ಲ ಎಂದಾರೆ ಮತ್ತೆಲ್ಲಿ ಸುರಕ್ಷೆ?’, ‘ನಾಗರಿಕನಿಗೆ ಇರುವ ಸ್ವಾತಂತ್ರ್ಯ ನಾರಿಗೆ ಏಕಿಲ್ಲ?’, ‘ನಾರಿ ಸುರಕ್ಷೆ, ರಾಷ್ಟ್ರ ಸುರಕ್ಷೆ’ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ವೈದ್ಯಕೀಯ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಕ್ಲಿನಿಕ್‌ ಬಂದ್, ಸಿಗದ ಒಪಿಡಿ ಸೇವೆ:

ನಗರದಲ್ಲಿ ಆಸ್ಪತ್ರೆಗಳು, ಕ್ಲಿನಿಕ್‌ಗಳ ಜೊತೆಗೆ ಸರ್ಕಾರಿ ಆಸ್ಪತ್ರೆಗಳ ವೈದ್ಯರೂ ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ತುರ್ತುಸೇವೆಗಳನ್ನು ಹೊರತು ಪಡಿಸಿ ಒಪಿಡಿ ಸೇವೆ ಸಿಗದೇ ರೋಗಿಗಳು ಪರದಾಡಿದರು.

ನಗರದಲ್ಲಿರುವ ಕ್ಲಿನಿಕ್‌ಗಳೆಲ್ಲ ಬಾಗಿಲು ಮುಚ್ಚಿದ್ದರೆ, ಸೂಪರ್‌ ಸ್ಪೆಷಾಲಿಟಿ ಸೌಲಭ್ಯವುಳ್ಳ ಆಸ್ಪತ್ರೆಗಳು, ಮೆಟರ್ನಿಟಿ ಆಸ್ಪತ್ರೆಗಳು ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಸ್ಥಗಿತಗೊಳಿಸಿ, ಕೇವಲ ತುರ್ತು ಚಿಕಿತ್ಸೆ ಮಾತ್ರ ನೀಡಲಾಯಿತು.

ಜಿಮ್ಸ್‌ ಆಸ್ಪತ್ರೆಯ ಪ್ರವೇಶ ದ್ವಾರ ಬಂದ್‌ ಮಾಡಿ, ವೈದ್ಯಕೀಯ ವಿದ್ಯಾರ್ಥಿಗಳು ಮುಷ್ಕರದಲ್ಲಿ ನಿರತವಾಗಿದ್ದರೆ, ಅತ್ತ ಒಳಗೆ ರೋಗಿಗಳು ಆಸ್ಪತ್ರೆಯಲ್ಲಿ ಒಪಿಡಿ ಚೀಟಿ ಹಿಡಿದು ಅಲೆದಾಡುವಂತಾಯಿತು. ‘ಪ್ರತಿಭಟನೆ ನಡೆಯುತ್ತಿದೆ ನಾಳೆ ಬನ್ನಿ’ ಎಂದು ನರ್ಸ್, ವೈದ್ಯರು ರೋಗಿಗಳನ್ನು ವಾಪಸ್ ಕಳುಹಿಸಿದರು.

ಮುಷ್ಕರದ ಬಗ್ಗೆ ತಿಳಿಯದೆ ಗ್ರಾಮೀಣ ಭಾಗದಿಂದ ಬಂದಿದ್ದ ನೂರಾರು ರೋಗಿಗಳು, ಚಿಕಿತ್ಸೆಗಾಗಿ ಪರಿತಪಿಸಿದರು.

‘ಜಿಮ್ಸ್‌ನಲ್ಲಿರುವ ನರ್ಸಿಂಗ್, ಪ್ಯಾರಾ ಮೆಡಿಕಲ್‌, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ 700ರಷ್ಟು ಮಂದಿ ಮುಷ್ಕರದಲ್ಲಿ ಪಾಲ್ಗೊಂಡು ಪ್ರತಿಭಟನೆ ನಡೆಸಿದರು. ರೋಗಿಗಳ ಜೀವ ಉಳಿಸುವ ವೈದ್ಯಕೀಯ ಸಿಬ್ಬಂದಿಯ ಜೀವಕ್ಕೆ ಸುರಕ್ಷತೆ ಇಲ್ಲವೆಂದಾದರೆ ಹೇಗೆ’ ಎಂದು ಪ್ರತಿಭಟನಾ ನಿರತ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ಕಲಬುರಗಿಯ ಇನಾಮದಾರ ಯುನಾನಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಕಲಬುರಗಿಯ ಇನಾಮದಾರ ಯುನಾನಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಕಲಬುರಗಿ ನಗರದ ಜಿಮ್ಸ್ ಆವರಣದಲ್ಲಿ ಶನಿವಾರ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು   -ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌
ಕಲಬುರಗಿ ನಗರದ ಜಿಮ್ಸ್ ಆವರಣದಲ್ಲಿ ಶನಿವಾರ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು   -ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT