ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ ಮಹಾಭಾದಿಂದ ಉಚಿತ ವೈದ್ಯಕೀಯ ನೆರವು

ತಂಡದಲ್ಲಿ 30 ಖ್ಯಾತ ವೈದ್ಯರು; ಎಲ್ಲ ಸಮುದಾಯದವರಿಗೆ ಸಹಾಯ ಮಾಡಲು ಖಂಡ್ರೆ ಮನವಿ
Last Updated 21 ಮೇ 2021, 4:24 IST
ಅಕ್ಷರ ಗಾತ್ರ

ಕಲಬುರ್ಗಿ: ಕೋವಿಡ್‌ನಿಂದ ಬಳಲುತ್ತಿರುವ ರೋಗಿಗಳು ಹಾಗೂ ಇತರೆ ರೋಗಿಗಳಿಗೆ ಅಗತ್ಯ ವೈದ್ಯಕೀಯ ನೆರವು ನೀಡಲು ಅಖಿಲ ಭಾರತ ವೀರಶೈವ ಮಹಾಸಭಾದ ಯುವ ಘಟಕ 30 ತಜ್ಞ ವೈದ್ಯರ ತಂಡವೊಂದನ್ನು ರಚಿಸಿದ್ದು, ಸೇವೆಗೆ ಸಿದ್ಧವಾಗಿದೆ.

ಈ ಕಾರ್ಯಕ್ಕೆ ಗುರುವಾರ ವರ್ಚುವಲ್ ಮಾಧ್ಯಮದ ಮೂಲಕ ಚಾಲನೆ ನೀಡಿದ ಮಹಾಸಭಾ ರಾಷ್ಟ್ರೀಯ ‍ಮಹಾಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ, ‘ಗ್ರಾಮೀಣ ಪ್ರದೇಶದ ಜನರಿಗೂ ವೈದ್ಯಕೀಯ ನೆರವು ನೀಡುವ ನಿಟ್ಟಿನಲ್ಲಿ ಯೋಚಿಸಬೇಕು’ ಎಂದರು.

‘ರಾಜ್ಯ ಸರ್ಕಾರ ಕೋವಿಡ್ ನಿರ್ವಹಣೆ ವಿಷಯದಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ. ಕೊರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆಯನ್ನು ನಿಖರವಾಗಿ ಹೇಳುತ್ತಿಲ್ಲ. ಸುಳ್ಳು ಹೇಳಿ ಕಾಣದ ವೈರಿಯನ್ನು ಗೆಲ್ಲಲು ಸಾಧ್ಯವಿಲ್ಲ. ಇದನ್ನು ತಡೆಯಲು ಸೂಕ್ತ ತಯಾರಿ ಮಾಡಿಕೊಳ್ಳಬೇಕಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಇಲ್ಲಿಯವರೆಗೆ 22 ಸಾವಿರ ಜನ ಮೃತಪಟ್ಟಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಕೊರೊನಾ ಪ್ರಕರಣಗಳು ನಿತ್ಯ 30 ಸಾವಿರ ಬರುತ್ತಿವೆ. ಆದರೆ, ನಿತ್ಯವೂ 1.5 ಲಕ್ಷ ತಪಾಸಣೆ ಮಾಡಿದರೆ ಕನಿಷ್ಠ 50ರಿಂದ 60 ಸಾವಿರ ಜನರಿಗೆ ಸೋಂಕು ಇರುವುದು ಖಚಿತವಾಗುತ್ತದೆ. ಎರಡನೇ ಅಲೆ ಬರುತ್ತದೆ ಎಂಬ ಮಾಹಿತಿ ಇದ್ದರೂ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿರಲೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ವೀರಶೈವ ಮಹಾಸಭಾ ಯುವ ಘಟಕದ ಅಧ್ಯಕ್ಷ ಮಹಾಂತೇಶ ಪಾಟೀಲ ಮಾತನಾಡಿ, ‘ಕೊರೊನಾದಂತಹ ಸಂದರ್ಭದಲ್ಲಿ ದೊಡ್ಡ ಸಂಘಟನೆಯಾಗಿರುವ ಮಹಾಸಭಾ ಏನಾದರೂ ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆಸಿದಾಗ ಉಚಿತ ವೈದ್ಯಕೀಯ ನೆರವು ನೀಡುವ ಯೋಚನೆ ಹೊಳೆಯಿತು. ತಕ್ಷಣ ಮಹಾಸಭಾದೊಂದಿಗೆ ಸಂಪರ್ಕ ಹೊಂದಿರುವ ವೈದ್ಯರೊಂದಿಗೆ ಚರ್ಚೆ ನಡೆಸಿದಾಗ ಪೂರಕವಾಗಿ ಸ್ಪಂದಿಸಿದರು. ವೈದ್ಯಕೀಯ ನೆರವು ಗ್ರಾಮೀಣ ‍ಪ್ರದೇಶದ ಜನರನ್ನೂ ತಲುಪಲು ಒಂದು ಅತ್ಯಾಧುನಿಕ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸುತ್ತಿದ್ದೇವೆ’ ಎಂದರು.

ಬೆಂಗಳೂರಿನ ನಾರಾಯಣ ಹೃದಯಾಲಯದ ಹಿರಿಯ ವೈದ್ಯ, ಬೀದರ್‌ನ ಡಾ.ರಾಹುಲ್ ಪಾಟೀಲ ಮಾತನಾಡಿ, ‘45ಕ್ಕಿಂತ ಕಡಿಮೆ ವಯೋಮಾನದ 30 ವೈದ್ಯರ ತಂಡ ಈ ಕಾರ್ಯಕ್ಕೆ ಸಜ್ಜಾಗಿದ್ದು, ನನ್ನ ಒಂದೇ ಮನವಿಗೆ ಸ್ಪಂದಿಸಿ ಅವರೆಲ್ಲ ಕೈಜೋಡಿಸುತ್ತಿದ್ದಾರೆ. ಕಲಬುರ್ಗಿ, ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ, ತುಮಕೂರು, ಬೆಳಗಾವಿಯ ವಿವಿಧ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ವಿಶೇಷ ಪರಿಣತಿ ಪಡೆದಿರುವ ವೈದ್ಯರಿದ್ದಾರೆ. ವೀರಶೈವ ಮಹಾಸಭಾದಿಂದ ಈ ಕಾರ್ಯ ನಡೆಯುತ್ತಿದ್ದರೂ ಸಮಾಜದ ಎಲ್ಲ ಜಾತಿ, ಧರ್ಮಗಳ ಜನರಿಗೂ ಸ್ಪಂದಿಸುತ್ತೇವೆ. ಅದೇ ನಿಜವಾದ ಮಾನವೀಯ ಧರ್ಮ’ ಎಂದು ಹೇಳಿದರು.

ಡಾ. ರಾಜಶೇಖರ ಜಾಕಾ, ಕೇಶವಕುಮಾರ್, ಡಾ. ಸಂಗಪ್ಪ, ವಿಜಯಕುಮಾರ್, ಮಂಜುನಾಥ ಸಾಣೆಹಳ್ಳಿ, ಸಿದ್ದೇಶ್ ಜಿ, ಡಾ. ವಿಶ್ವನಾಥ ಪಾಟೀಲ, ಡಾ.ರವಿ, ಡಾ. ಶಿವಲಿಂಗಸ್ವಾಮಿ, ಡಾ. ದರ್ಶನ ಪಾಟೀಲ, ಡಾ.ಯದು ಲೋಕನಾಥ, ಡಾ.ಕಿರಣ ಚೌಕಾ, ಡಾ.ನಟರಾಜ, ಡಾ.ವಿಕ್ರಾಂತ, ಡಾ. ಪ್ರೇರಣಾ ನೇಸರ್ಗಿ, ಡಾ. ಮಲ್ಲಿಕಾರ್ಜುನ, ಡಾ. ಶಿವಕುಮಾರ, ಡಾ. ಶೈಲೇಶ್, ಡಾ. ಅರ್ಚನಾ ಖನಗಾಂವಿ, ಡಾ. ವಿಕ್ರಂ ಪ್ರಭಾ, ಡಾ. ಸಚಿನ್ ಹೊಸಕಟ್ಟಿ, ಡಾ. ಪ್ರದೀಪ್, ಡಾ. ಸುಮನ್ ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT