ಗುರುವಾರ , ಆಗಸ್ಟ್ 11, 2022
23 °C
ಮೆಗಾ ಲೋಕ ಅದಾಲತ್: ಹೈಕೋರ್ಟ್‌, ಜಿಲ್ಲಾ ನ್ಯಾಯಾಲಯಗಳು ಸೇರಿ 21976 ಪ್ರಕರಣ ಇತ್ಯರ್ಥ

ಒಂದೇ ದಿನ ₹ 20.88 ‍ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲೆಯ ಎಲ್ಲ 30 ನ್ಯಾಯಾಲಯಗಳಲ್ಲಿಯೂ ಶನಿವಾರ ನಡೆದ ಮೆಗಾ ಲೋಕ ಅದಾಲತ್‌ನಲ್ಲಿ ಒಟ್ಟು 21,756 ಪ್ರಕರಣಗಳನ್ನು ಇತ್ಯರ್ಥಪಡಿಸಿ, ಒಂದೇ ದಿನ ₹ 15.11 ಕೋಟಿ ಪರಿಹಾರ ಕೊಡಿಸಲಾಯಿತು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಆರ್‌.ಜೆ. ಸತೀಶಸಿಂಗ್ ಅವರ ಮಾರ್ಗದರ್ಶನದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್‌ ನ್ಯಾಯಾಧೀಶ ಜಿ.ಆರ್‌. ಶೆಟ್ಟರ ಅವರ ನೇತೃತ್ವದಲ್ಲಿ ಎಲ್ಲ ಜಿಲ್ಲಾ ನ್ಯಾಯಾಧೀಶರು, ಕಿರಿಯ ಶ್ರೇಣಿ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶರು ಸಹ ಈ ಅದಾಲತ್‌ ಯಶಸ್ವಿಗೊಳಿಸಿದರು.

ಸಿವಿಲ್‌ ವ್ಯಾಜ್ಯಗಳು, ಅಪರಾಧ ಪ್ರಕರಣಗಳು, ಚೆಕ್‌ಬೌನ್ಸ್‌, ಭೂಸ್ವಾಧೀನ ವಸೂಲಿ, ವ್ಯಾಜ್ಯಪೂರ್ವ ಪ್ರಕರಣ, ಮೋಟಾರು ವಾಹನ ಪ್ರಕರಣಗಳನ್ನೂ ಈ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಯಿತು.

ಹೈಕೋರ್ಟ್‌ನಿಂದ 220 ಪ್ರಕರಣ: ಇನ್ನೊಂದೆಡೆ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಶನಿವಾರ ನಡೆದ ಮೆಗಾ ಲೋಕ ಆದಾಲತ್‍ನಲ್ಲಿ ‌ಒಟ್ಟು 220 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ₹ 5.77 ಕೋಟಿ ಪರಿಹಾರ ಮೊತ್ತವನ್ನು ಮಂಜೂರು ಮಾಡಲಾಗಿದೆ ಎಂದು ಕಲಬುರ್ಗಿ ಹೈಕೋರ್ಟ್‌ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಸುವರ್ಣ ತಿಳಿಸಿದ್ದಾರೆ.

‌ಮೋಟಾರು ವಾಹನ ವಿಮೆ ಪ್ರಕರಣ ಹಾಗೂ ಇತರೆ ಸಿವಿಲ್ ವ್ಯಾಜ್ಯಗಳ ಪ್ರಕರಣಗಳನ್ನು ಪೀಠದ ಮುಂದೆ ಬಂದವು. ಕಲಬುರ್ಗಿ ಹೈಕೋರ್ಟ್‌ ಕಾನೂನು ಸೇವಾ ಸಮಿತಿಯಿಂದ ಐದು ಪೀಠಗಳನ್ನು ರಚಿಸಿದ್ದು, ಈ ಪೀಠಗಳಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು. ನ್ಯಾಯಮೂರ್ತಿಗಳಾದ ಎಸ್.ಸುನೀಲದತ್ತ ಯಾದವ್, ಇ.ಎಸ್. ಇಂದಿರೇಶ್, ಎಂ.ಜಿ. ಉಮಾ, ಹಂಚಾಟೆ ಸಂಜೀವಕುಮಾರ ಹಾಗೂ ಪಿ.ಎನ್.ದೇಸಾಯಿ ಅವರ ನೇತೃತ್ವದ ಐದು ಜನರ ಪೀಠವು ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿದೆ ಎಂದು ತಿಳಿಸಲಾಗಿದೆ.

ಒಂದೇ ದಿನ ₹ 4.5 ಕೋಟಿ ಪರಿಹಾರ!
ಕಲಬುರ್ಗಿ:
ಜಿಲ್ಲಾ ನ್ಯಾಯಾಲಯಗಳಿಂದ ಶನಿವಾರ ಆಯೋಜಿಸಿದ್ದ ಬೃಹತ್‌ ಲೋಕ ಅದಾಲತ್‌ನಲ್ಲಿ ಭೂ ಸ್ವಾಧೀನ ವಸೂಲಾತಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಒಂದೇ ದಿನದಲ್ಲಿ ಒಟ್ಟು ₹ 4.5 ಕೋಟಿ ಪರಿಹಾರವನ್ನು ಫಲಾನುಭವಿಗಳಿಗೆ ಕೊಡಿಸಲಾಯಿತು!

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಆರ್‌.ಜೆ. ಸತೀಶಸಿಂಗ್ ಅವರ ಮಾರ್ಗದರ್ಶನದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್‌ ನ್ಯಾಯಾಧೀಶ ಜಿ.ಆರ್‌. ಶೆಟ್ಟರ ಅವರ ನೇತೃತ್ವದಲ್ಲಿ ನಡೆದ ಈ ಲೋಕ ಅದಾಲತ್‌ನಲ್ಲಿ, 1993ರಿಂದಲೂ ಬಾಕಿ ಇದ್ದ ಈ ಪ್ರಕರಣವನ್ನು ಒಂದೇ ದಿನದಲ್ಲಿ ಇತ್ಯರ್ಥ ಮಾಡಿ, ಭೂ ಸ್ವಾಧೀನ ಅಧಿಕಾರಿಗಳಿಂದ ವಸೂಲಿ ಮಾಡಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು