ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: 800 ಕಾರ್ಮಿಕರು ಅರ್ಧ ದಿನ ಕೆಲಸ ಮಾಡಿ ಬರಿಗೈಯಲ್ಲಿ ವಾಪಸ್

Last Updated 22 ಜನವರಿ 2022, 16:56 IST
ಅಕ್ಷರ ಗಾತ್ರ

ಲಾಡ್ಲಾಪುರ (ವಾಡಿ): ಲಾಡ್ಲಾಪುರ ಗ್ರಾಮದಲ್ಲಿ ಕೈಗೆತ್ತಿಕೊಂಡ ಉದ್ಯೋಗ ಖಾತ್ರೆಯ ಕೆಲಸ ಕೊಡುವ ವಿಚಾರದಲ್ಲಿ ಶನಿವಾರ ಗೊಂದಲ ಉಂಟಾಗಿದ್ದು, 800 ಕಾರ್ಮಿಕರು ಅರ್ಧ ದಿನ ಕೆಲಸ ಮಾಡಿ ಬರಿಗೈಯಲ್ಲಿ ಮರಳುವಂತಾಗಿದೆ.

ಎನ್ಎಂಆರ್ ಪಟ್ಟಿಯಲ್ಲಿನ ಹೆಸರು ಖಾತ್ರಿಪಡಿಸಿಕೊಂಡು ಸುಮಾರು 800 ಕಾರ್ಮಿಕರು ಶನಿವಾರ ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದರು. ಆದರೆ, ಉಳಿದ 50 ಮಂದಿ ತಮೂ ಕೆಲಸ ಕೊಡಬೇಕು ಎಂದು ಪಟ್ಟುಹಿಡಿದರು. ತಮಗೆ ಕೆಲಸ ಸಿಗದಿದ್ದರೆ ಉಳಿದ ಎಲ್ಲರನ್ನೂ ಮರಳಿ ಕರೆಯಿಸಬೇಕು ಎಂದೂ ಅಧಿಕಾರಿಗಳ ಮೇಲೆ ಒತ್ತಡ ತಂದರು. ಇದರಿಂದ ಬೇಸತ್ತ ನರೇಗಾ ಸಿಬ್ಬಂದಿ ‘ಕಾರ್ಮಿಕರು ಯಾರೂ ಶನಿವಾರ ಕೆಲಸ ಮಾಡಬೇಡಿ. ಮಾಡಿದರೂ ಹಾಜರ ನೀಡುವುದಿಲ್ಲ’ ಎಂದು ಹೇಳಿ ಎಲ್ಲರನ್ನೂ ವಾಪಸ್‌ ಕರೆಸಿದರು.

ಅರ್ಧ ದಿನ ಕೆಲಸ ಮಾಡಿದ ಕಾರ್ಮಿಕರು ಸಿಬ್ಬಂದಿಯನ್ನು ಹರಿಹಾಯುತ್ತಲೇ ಮನೆಗೆ ಮರಳಬೇಕಾಯಿತು. ಇರಿಂದಾಗಿ ಗ್ರಾಮದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿದ್ದ ನರೇಗಾ ಕಾಮಗಾರಿಯನ್ನು ಪುನಃ ಆರಂಭಿಸಬೇಕು ಎಂದು ಆಗ್ರಹಿಸಿ, ಲಾಡ್ಲಾಪುರ ಗ್ರಾಮಸ್ಥರು ಈಚೆಗೆ ಆರ್‌ಕೆಎಸ್ ಸಂಘಟನೆ ನೇತೃತ್ವದಲ್ಲಿ ಪಂಚಾಯಿತಿ ಕಾರ್ಯಾಲಯದ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದರು. ವಾರದಲ್ಲಿ ಸಮಸ್ಯೆ ಪರಿಹರಿಸಿ ಉದ್ಯೋಗ ಖಾತ್ರಿ ಕಾಮಗಾರಿ ಆರಂಭಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಅದರಂತೆ ಶನಿವಾರದಿಂದ ನರೇಗಾ ಯೋಜನೆಗೆ ಚಾಲನೆ ನೀಡಲಾಗಿತ್ತು. 800 ಜನರ ಎನ್ಎಂಆರ್ ತಯಾರಿಸಿ ಕೆಲಸಕ್ಕೆ ಕಳುಹಿಸಿಕೊಡಲಾಗಿತ್ತು. ಈ ಸಮಯದಲ್ಲಿ ಗ್ರಾಮದ ಇನ್ನುಳಿದ ಕೆಲ ಕಾರ್ಮಿಕರು ತಮ್ಮನ್ನು ಕೆಲಸದಿಂದ ಕೈಬಿಡಲಾಗಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಸದ್ಯಕ್ಕೆ 800 ಜನರು ಕೆಲಸ ಮಾಡಲಿ. ಉಳಿದ ಕಾರ್ಮಿಕರನ್ನು ನಂತರದ ಯಾದಿಯಲ್ಲಿ ಸೇರಿಸಿ ಅವರಿಗೂ ಕೆಲಸ ಖಾತ್ರಿಪಡಿಸುವುದಾಗಿ’ ಪಿಡಿಒ ಕಲ್ಯಾಣಿ ಕೊಳ್ಳದ ಭರವಸೆ ನೀಡಿದ್ದರು. ಆದರೆ, ಗ್ರಾಮದ ಕೆಲ ಮುಖಂಡರು ಮಧ್ಯ ಪ್ರವೇಶ ಮಾಡಿ ಯಾರನ್ನೂ ಕೆಲಸ ಮಾಡದಂತೆ ಮಾಡಿದ್ದಾರೆ ಎಂದು ಕಾರ್ಮಿಕರು ದೂರಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಚಿತ್ತಾಪುರದ ನರೇಗಾ ಸಹಾಯಕ ನಿರ್ದೇಶಕಪಂಡಿತ ಶಿಂಧೆ, ‘ಎನ್‌ಎಂಆರ್ ಪ್ರಕಾರ ಕಾರ್ಮಿಕರು ಕೆಲಸಕ್ಕೆ ತೆರಳಬೇಕು. ಇನ್ನುಳಿದ ಕಾರ್ಮಿಕರಿಗೆ ನಂತರದ ಹಂತದಲ್ಲಿ ಕೆಲಸ ಖಾತ್ರಿಪಡಿಸಲಾಗುವುದು. ಜನವರಿ 25ರ ನಂತರ ಹೊಸ ಎನ್‌ಎಂಆರ್ ಯಾದಿ ತಯಾರಿಸಿ ಎಲ್ಲರಿಗೂ ಕೆಲಸ ನೀಡಲಾಗುವುದು. ಗ್ರಾಮಸ್ಥರು ಸಹಕರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT