ಭಾನುವಾರ, ಫೆಬ್ರವರಿ 28, 2021
31 °C
ಒಕ್ಕೂಟದ ವ್ಯಾಪ್ತಿಯಲ್ಲಿ 60 ಹೊಸ ಮಳಿಗೆಗಳಿಗೆ ಅನುಮತಿ: ಆರ್‌.ಕೆ. ಪಾಟೀಲ ಹೇಳಿಕೆ

ರೈತರಿಗೆ ಹಸುವಿನ ಹಾಲಿಗೆ ₹ 2, ಎಮ್ಮೆಯ ಹಾಲಿಗೆ ₹ 3 ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕಲಬುರ್ಗಿ, ಬೀದರ್‌, ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಹಾಲು ಉತ್ಪಾದಕರಿಗೆ (ರೈತರು) ಪ್ರತಿ ಲೀಟರ್‌ಗೆ ಹಸುವಿನ ಹಾಲಿಗೆ ₹2 ಹಾಗೂ ಎಮ್ಮೆ ಹಾಲಿಗೆ ₹3 ಹೆಚ್ಚುವರಿಯಾಗಿ ನೀಡಲಿದೆ. 

‘ಒಕ್ಕೂಟವು ಪ್ರಸಕ್ತ ಸಾಲಿನಲ್ಲಿ ₹ 2 ಕೋಟಿ ಲಾಭ ಗಳಿಸಿದ್ದು, ಅದನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸಲು ತೀರ್ಮಾನಿಸಿದೆ. ಜನವರಿ 26ರಿಂದ ಮೇ 31ರ ವರೆಗೆ ಈ ಹೆಚ್ಚುವರಿ ದರ ಪಾವತಿಸಲಾಗುವುದು’ ಎಂದು  ಒಕ್ಕೂಟದ ಅಧ್ಯಕ್ಷ ಆರ್‌.ಕೆ. ಪಾಟೀಲ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ದರ ಹೆಚ್ಚಳದಿಂದಾಗಿ ಪ್ರತಿ ಲೀಟರ್‌ ಹಸುವಿನ ಹಾಲಿಗೆ ₹ 27.60, ಎಮ್ಮೆಯ ಹಾಲಿಗೆ ₹ 34.80 ಹಾಲು ಉತ್ಪಾದಕರಿಗೆ ಲಭಿಸಲಿದೆ. ಒಕ್ಕೂಟ ಆರಂಭವಾದ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಮೊತ್ತದ ಲಾಭ  ಬಂದಿದೆ’ ಎಂದರು.

ನಂದಿನಿ ಉತ್ಪನ್ನಗಳ ಮಳಿಗೆ ಹಾಕುವವರಿಗೆ ಕಲಬುರ್ಗಿ–ಬೀದರ್ ಹಾಗೂ ಯಾದಗಿರಿ ಜಿಲ್ಲಾ ಹಾಲು ಒಕ್ಕೂಟವು ₹ 5 ಲಕ್ಷದ ಮಳಿಗೆಯನ್ನು ಉಚಿತವಾಗಿ ನಿರ್ಮಿಸಿಕೊಡಲಿದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆಯಿಂದ ಮಳಿಗೆ ಹಾಕಲು ಜಾಗ ಮಂಜೂರು ಮಾಡಿಸಿಕೊಂಡು ಬಂದರೆ ಅವರಿಗೆ ₹ 5 ಲಕ್ಷ ಮಳಿಗೆ ವೆಚ್ಚವನ್ನು ಒಕ್ಕೂಟ ಭರಿಸಲಿದೆ. ಇದರ ಪ್ರಯೋಜನವನ್ನು ಆಸಕ್ತರು ಪಡೆಯಬಹುದು. ಖಾಸಗಿ ಜಾಗದಲ್ಲಿ ಮಳಿಗೆ ಸ್ಥಾಪಿಸಲು ಅನುಮತಿ ಕೊಡಲಾಗುತ್ತದೆ. ಆದರೆ, ₹ 5 ಲಕ್ಷ ಹಣ ಕೊಡುವುದಿಲ್ಲ. ಈ ಯೋಜನೆಯ ಪ್ರಯೋಜನ ಪಡೆಯ ಬೇಕೆಂದರೆ ಸರ್ಕಾರಿ ಜಾಗದಲ್ಲಿ ಮಳಿಗೆ ಆರಂಭಿಸಬೇಕು ಎಂದರು.

‘ಒಕ್ಕೂಟದ ವ್ಯಾಪ್ತಿಯ 3 ಜಿಲ್ಲೆಗಳಲ್ಲಿ ಹೊಸದಾಗಿ 60 ಮಳಿಗೆಗಳನ್ನು ಮಂಜೂರು ಮಾಡಲಾಗಿದೆ. ಮಳಿಗೆಗಳ ಮಂಜೂರಾತಿ ಸಂದರ್ಭದಲ್ಲಿ ಒಕ್ಕೂಟದ ಅಧಿಕಾರಿಗಳು ಹಣದ ಬೇಡಿಕೆ ಇಟ್ಟರೆ ಅಂಥವರ ಬಗ್ಗೆ ದೂರು ನೀಡಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಅಂತಹ ದೂರು ಬಂದ ಪ್ರಯುಕ್ತ ಇಬ್ಬರನ್ನು ಅಮಾನತು ಮಾಡಲಾಗಿದೆ’ ಎಂದು ಹೇಳಿದರು.

‘ಲಾಕ್‌ಡೌನ್‌ ಸಂದರ್ಭದಲ್ಲಿ ಮಹಾರಾಷ್ಟ್ರದ ಖಾಸಗಿ ಹಾಲು ಉತ್ಪಾದಕ ಸಂಸ್ಥೆಗಳಿಂದ ಬರುತ್ತಿದ್ದ ಹಾಲಿಗೆ ತಡೆ ಒಡ್ಡಿದ್ದರಿಂದ ನಂದಿನಿ ಹಾಲಿಗೆ ಹೆಚ್ಚು ಬೇಡಿಕೆ ಬಂದಿದೆ. ಪ್ರಸ್ತುತ ನಿತ್ಯ 51 ಸಾವಿರ ಲೀಟರ್ ಹಾಲು ಶೇಖರವಾಗುತ್ತಿದೆ. ಮುಂದಿನ ಐದು ತಿಂಗಳು ಬೇಸಿಗೆ ಇರುವುದರಿಂದ ಮೇವಿನ ಕೊರತೆ ನೀಗಿಸಿಕೊಂಡು ಹಾಲು ಉತ್ಪಾದನೆ ವೆಚ್ಚ ಕಡಿಮೆ ಮಾಡುವ ದೃಷ್ಟಿಯಿಂದ ಪ್ರತಿ ಟನ್‌ಗೆ ನಂದಿನಿ ಗೋಲ್ಡ್ ಪಶು ಆಹಾರ ದರದಲ್ಲಿ ₹ 1 ಸಾವಿರ ಕಡಿಮೆ ಮಾಡಲಾಗಿದೆ. ಹೀಗಾಗಿ ಪ್ರತಿ ಟನ್‌ಗೆ ₹ 18,900 ಇದ್ದ ಬೆಲೆ ₹ 17,900 ಸಾವಿರಕ್ಕೆ ಇಳಿದಿದೆ. ಇದರಿಂದ ಹಾಲು ಉತ್ಪಾದಕರಿಗೆ ನಿರಾಳವಾದಂತಾಗಿದೆ. ಅಲ್ಲದೇ, ಪ್ರತಿ ಕೆ.ಜಿ.ಗೆ ₹ 15 ಇದ್ದ ಖನಿಜ ಮಿಶ್ರಣದ ದರವನ್ನು ₹ 10ಕ್ಕೆ ಇಳಿಕೆ ಮಾಡಲಾಗಿದೆ’ ಎಂದರು.

‘28 ಹಾಲು ಉತ್ಪಾದಕರ ಸಂಘಗಳು ರಚನೆಯಾಗಿದ್ದು, ಲಾಕ್‌ಡೌನ್‌ ಸಂದರ್ಭದಲ್ಲಿ ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದವರು ವಾಪಸ್ ಬಂದು ಹೈನುಗಾರಿಕೆಯಲ್ಲಿ ತೊಡಗಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಆಳಂದ ತಾಲ್ಲೂಕಿನ ಜಿಡಗಾದಲ್ಲಿ 100 ಲೀಟರ್ ಹಾಗೂ ಜಂಬಗಾದಲ್ಲಿ 300 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ವಾರಕ್ಕೊಮ್ಮೆ ಹಣ ಪಾವತಿ, ತರಬೇತಿಯನ್ನೂ ಒಕ್ಕೂಟದಿಂದ ನೀಡುತ್ತಿದ್ದೇವೆ’ ಎಂದರು.

ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ ಕುಮಾರ್ ಮಾತನಾಡಿ, ‘ನಂದಿನಿ ಉತ್ಸವದ ಸಂದರ್ಭದಲ್ಲಿ ರಿಯಾಯಿತಿ ಯನ್ನು ಮಳಿಗೆಯವರು ಗ್ರಾಹಕರಿಗೆ ತಲುಪಿಸದಿದ್ದಲ್ಲಿ ಕೆಎಂಎಫ್‌ನ ಟೋಲ್ ಫ್ರೀಂ ಸಂಖ್ಯೆ 080 6666 0000ಗೆ ದೂರು ನೀಡಬಹುದು’ ಎಂದರು.

ಒಕ್ಕೂಟದ ನಿರ್ದೇಶಕರಾದ ಮಲ್ಲಿಕಾರ್ಜುನ ಬಿರಾದಾರ, ಶ್ರೀಕಾಂತ ದಾನಿ, ಈರಣ್ಣ ಝಳಕಿ, ದಿವಾಕರ ಜಹಗೀರದಾರ್, ಭೀಮರಾವ್ ಭರತೆ, ವಿಠ್ಠಲ ರೆಡ್ಡಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು