ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಾತಂತ್ರ್ಯೋತ್ಸವ ಶತಮಾನಕ್ಕೆ ಸಮಾನತೆಯೇ ಗುರಿ’

ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಕರೆ
Last Updated 7 ನವೆಂಬರ್ 2021, 5:12 IST
ಅಕ್ಷರ ಗಾತ್ರ

ಕಲಬುರಗಿ: ‘ಭಾರತವು ಸ್ವಾತಂತ್ರ್ಯೋತ್ಸವ ಶತಮಾನೋತ್ಸವ ಆಚರಣೆ ಮಾಡುವ ಹೊತ್ತಿಗೆ ಸಂಪೂರ್ಣ ಸಮಾನತೆ ಸಾಧಿಸಿದ ದೇಶವಾಗಿ ಹೊರಹೊಮ್ಮಬೇಕು. ಇದಕ್ಕಾಗಿ ಯುವಪೀಳಿಗೆ ಈಗಿನಿಂದಲೇ ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು’ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಕರೆ ನೀಡಿದರು.

ಕಲಬುರಗಿ ಆಕಾಶವಾಣಿ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಮಾರಂಭದಲ್ಲಿ ‘ಸ್ವಾತಂತ್ರ್ಯದ ಅಮೃತ ಹೆಜ್ಜೆಗಳು’ ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸ್ವಾತಂತ್ರ್ಯೋತ್ಸವಕ್ಕೆ 100 ವರ್ಷ ತುಂಬುವಷ್ಟರಲ್ಲಿ ಎಲ್ಲರೂ ಸೇವಾ ಮನೋಭಾವದಿಂದ ರಾಷ್ಟ್ರಕಟ್ಟುವ ಕಾರ್ಯದಲ್ಲಿ ತೊಡಗಬೇಕು. ಶ್ರೇಷ್ಠ ಭಾರತ ನಿರ್ಮಾಣ ಮಾಡುವ ಪ್ರತಿಜ್ಞೆ ಕೈಗೊಳ್ಳಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯನ್ನು ಯುವಜನರು ಅರಿತುಕೊಳ್ಳಬೇಕು. ಮುಂದೊಂದು ದಿನ ಭಾರತವೇ ವಿಶ್ವಕ್ಕೆ ಹೊಸ ಮನ್ವಂತರ ತೋರಲಿದೆ ಎಂಬುದನ್ನು ಮನಗಾಣಬೇಕು’ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಭೀಮಾಶಂಕರ ತೆಗ್ಗಳ್ಳಿ ಮಾತನಾಡಿ, ‘ಭಾರತೀಯರೆಲ್ಲರೂ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸಶಕ್ತರಾದಾಗ ಬಲಿಷ್ಠ ಭಾರತ ನಿರ್ಮಾಣವಾಗುತ್ತದೆ. ಕೃಷಿ, ವಾಣಿಜ್ಯ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಿದರೆ ಆರ್ಥಿಕವಾಗಿ ಮುಂಚೂಣಿಗೆ ಬರಲು ಸಾಧ್ಯ. ವಿಶ್ವದಲ್ಲಿ ‘ಕೊಡುವ’ ಭಾರತವಾಗಬೇಕೆ ಹೊರತು ‘ಬೇಡುವ’ ಭಾರತವಾಗಬಾರದು’ ಎಂದರು.‌‌

‌ಹೈದರಾಬಾದ್‌ ಕರ್ನಾಟಕ ವಿಮೋಚನಾ ಸಂಗ್ರಾಮದಲ್ಲಿನ ತಮ್ಮ ಅನುಭವ ಬಿಚ್ಚಿಟ್ಟ ಮಹಾದೇವಪ್ಪ ಕಡೇಚೂರ ಅವರು, ‘ಆ ಹೋರಾಟ ಮೈನವಿರೇಳಿಸುವಂಥದ್ದು. ಮತಾಂಧರ ಆಡಳಿತದಿಂದ ಈ ಭಾಗದಲ್ಲಿ ಮಹಿಳೆಯರು ಸೇರಿದಂತೆ ನಾಗರಿಕರು ತೀವ್ರ ಸಂಕಷ್ಟ ಅನುಭವಿಸಿದರು. ಗೋರ್ಟಾದಂಥ ಕರಾಳ ಘಟನೆ, ಸಗರ ಗ್ರಾಮದಲ್ಲಿ ಮಹಿಳಾ ದೌರ್ಜನ್ಯ, ರಂಗಂ ಪೇಟೆಯಲ್ಲಿ ಮನೆ ಲೂಟಿಯನ್ನು ಕಣ್ಣಾರೆ ಕಂಡು ನೋವುಂಡ ಘಟನೆಗಳು ಸ್ವಾತಂತ್ರ್ಯದ ಕಿಚ್ಚು ಹಚ್ಚಿ ಹೋರಾಟದಲ್ಲಿ ಭಾಗಿಯಾಗುವಂತೆ ಮಾಡಿದವು’ಎಂದು ಸ್ಮರಿಸಿದರು.

‘ಆಗಿನ ಹೋರಾಟಗಾರರಾದ ಅಚ್ಚಪ್ಪ ಗೌಡ, ಸರದಾರ ಶರಣಗೌಡ ಇನಾಂದಾರ್, ಬ್ಯಾರಿಸ್ಟರ್ ವೆಂಕಟಪ್ಪ ನಾಯಕ ಮುಂತಾದವರು ಹೋರಾಟಕ್ಕೆ ಮಾರ್ಗದರ್ಶನ ನೀಡಿದರು’ ಎಂಬುದನ್ನೂ ಅವರು ನೆನೆದರು.

ಕಲಬುರಗಿ ಆಕಾಶವಾಣಿ ನಿಲಯದ ಮುಖ್ಯಸ್ಥ ಜಿ. ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಚಿವ ಭಗವಂತ ಖೂಬಾ ಅವರು ಮಹಾದೇವಪ್ಪ ಕಡೇಚೂರ ಅವರನ್ನು ಸನ್ಮಾನಿಸಿದರು.ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಅಧಿಕಾರಿ ಸದಾನಂದ ಪೆರ್ಲ, ಹಿರಿಯ ಉದ್ಘೋಷಕಿ ಶಾರದಾ ಜಂಬಲದಿನ್ನಿ ನಿರೂಪಿಸಿದರು. ಉಪನ್ಯಾಸಕರಾದ ನಾಮದೇವ ಎಸ್. ಜಾಧವ, ಗಿರೀಶ ಗೌಡ ಇನಾಂದಾರ್, ವಿಜಯಲಕ್ಷ್ಮಿ ಖೇಣಿ, ಸಿದ್ದಾಜಿ ಪಾಟೀಲ ಇದ್ದರು.ಪ್ರಸಾರ ನಿರ್ವಾಹಕರಾದ ಸಂಗಮೇಶ ವಂದಿಸಿದರು.

‘ಸ್ವಾತಂತ್ರ್ಯದ ಅಮೃತ ಹೆಜ್ಜೆಗಳು’ ಸರಣಿಯಲ್ಲಿ ಪ್ರತಿ ತಿಂಗಳು ಎರಡು ಕಾರ್ಯಕ್ರಮಗಳು ನೇರಪ್ರಸಾರದಲ್ಲಿ ಬಿತ್ತರಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT