ಶುಕ್ರವಾರ, ಅಕ್ಟೋಬರ್ 23, 2020
21 °C

ಮತದಾರರ ಪಟ್ಟಿ ದೋಷಪೂರಿತ: ಚುನಾವಣೆ ಮುಂದೂಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ–2019 ಹಾಗೂ ಹೆಚ್ಚುವರಿ ಪಟ್ಟಿಯಲ್ಲಿ ಬಹಳ ಕಡೆ ಅನರ್ಹರ ಹೆಸರು ಸೇರಿಸಲಾಗಿದೆ. ಮಾತ್ರವಲ್ಲ; ಒಬ್ಬರ ಹೆಸರೇ ಎರಡು– ಮೂರು ಬಾರಿ ಪುನರಾವರ್ತನೆ ಆಗಿದೆ. ಆದ್ದರಿಂದ ಇದನ್ನು ಸರಿ ಮಾಡುವವರೆಗೂ ಚುನವಾಣೆ ಮುಂದೂಡಬೇಕು’ ಎಂದು ಕಲ್ಯಾಣ ಕರ್ನಾಟಕ ಜನಪರ ಹೋರಾಟ ಸಮಿತಿ ಗೌರವಾಧ್ಯಕ್ಷ ಹಣಮಂತ ಬೋಧನಕರ ಆಗ್ರಹಿಸಿದರು.

‘ಈ ಮತದಾರರ ಪಟ್ಟಿ ಸಂಪೂರ್ಣ ದೋಷದಿಂದ ಕೂಡಿದೆ. ಶೇ 10ರಷ್ಟು ಅನರ್ಹರ ಹೆಸರು ಸೇರಿಕೊಂಡಿವೆ. ಇದರಿಂದ ಅಕ್ರಮ ನಡೆಸಲು ಅನುಕೂಲ ಮಾಡಿದಂತಾಗುತ್ತದೆ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಪಟ್ಟಿಯಲ್ಲಿ ಕೆಲವು ಕಡೆ ಹೆಸರಿಲ್ಲದೇ ಕ್ರಮಸಂಖ್ಯೆ ಮಾತ್ರ ಇದೆ. ಇನ್ನು ಕೆಲವು ಕಡೆ ಲಿಂಗ ಮಾತ್ರ ಬರೆಯಲಾಗಿದ್ದು, ಉಳಿದೆಲ್ಲ ಕಾಲಂಗಳೂ ಖಾಲಿ ಇವೆ. ಈ ಪಟ್ಟಿಯನ್ನು ನೋಡಿದರೆ ಕ್ಷೇತ್ರದಲ್ಲಿ ಸುಮಾರ ಒಂದು ಲಕ್ಷಕ್ಕಿಂತ ಹೆಚ್ಚು ಮತದಾರರು ತಮ್ಮ ಹೆಸರು ನೋಂದಾಯಿಸಬೇಕಾಗಿತ್ತು. ಚುನಾವಣಾಧಿಕಾರಿಗಳ ನಿರ್ಲಕ್ಷ್ಯ ಕಾರಣ ಕೇವಲ 35 ಸಾವಿರ ಮಂದಿ  ಮಾತ್ರ ನೋಂದಣಿ ಮಾಡಿದ್ದಾರೆ. ಇದೊಂದು ಕಾಟಾಚಾರದ ಚುನಾವಣೆ ರೀತಿ ಭಾಸವಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಲಬುರ್ಗಿ ವಿಭಾಗದ ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಚೇರಿ, ಮಹಾನಗರ ಪಾಲಿಕೆ ಕಚೇರಿಗಳಲ್ಲಿ ಎಲ್ಲ ಅರ್ಜಿಗಳನ್ನು ಸಂಖ್ಯಾವಾರು ವಿಂಗಡಣೆ ಮಾಡಿ, ಹೆಸರು ಸೇರ್ಪಡೆಗೆ ಅರ್ಹತೆ ಇದೆಯೇ– ಇಲ್ಲವೇ ಎಂಬುದನ್ನು ಖಚಿತ ಮಾಡಿಕೊಳ್ಳಬೇಕು. ಅರ್ಜಿ ನಮೂನೆ–19ರಲ್ಲಿ ಇರುವಂತೆ ಎಲ್ಲ ವಿವರಗಳನ್ನೂ ಪುನಃ ಪರಿಶೀಲಿಸಿ ಲೋಪ– ದೋಷ ಸರಿಪಡಿಸಬೇಕು’ ಎಂದೂ ಆಗ್ರಹಿಸಿದರು.

‘ಇದೆಲ್ಲ ಮುಗಿಯುವವರೆಗೂ ಚುನಾವಣೆ ನಡೆಸಬಾರದು. ಒಂದು ವೇಳೆ ನಡೆಸಿದರೂ ಅದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿರುತ್ತದೆ’ ಎಂದೂ ಆಕ್ರೋಶ ಹೊರಹಾಕಿದರು.

ಸಮಿತಿ ಅಧ್ಯಕ್ಷ ಮಹಾದೇವಗೌಡ ಪಾಟೀಲ, ಉಪಾಧ್ಯಕ್ಷ ಅಮರೇಶ್ವರ ಸೂಲದವರ, ಪ್ರಧಾನ ಕಾರ್ಯದರ್ಶಿ ಅಜಯ ಯಳಸಂಗಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.