ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾನು ಹಾಕಿಸಿದ್ದ ಬ್ಯಾನರ್ ಹರಿದು ಹಾಕಿದ ಮತ್ತಿಮಡು ಬೆಂಬಲಿಗರು: ಕಮಲಾಕರ ರಾಠೋಡ

Last Updated 9 ಮಾರ್ಚ್ 2023, 14:31 IST
ಅಕ್ಷರ ಗಾತ್ರ

ಕಲಬುರಗಿ: ‘ಇತ್ತೀಚೆಗೆ ಶಹಾಬಾದ್‌ನಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಭಾಗವಹಿಸಿದ್ದ ವಿಜಯ ಸಂಕಲ್ಪ ಯಾತ್ರೆಗೆ ನಾನು ಹಾಕಿಸಿದ್ದ 200 ಬ್ಯಾನರ್‌ಗಳನ್ನು ಶಾಸಕ ಬಸವರಾಜ ಮತ್ತಿಮಡು ಅವರ ಕುಮ್ಮಕ್ಕಿನಿಂದ ಅವರ ಬೆಂಬಲಿಗರು ಹರಿದು ಹಾಕಿದ್ದಾರೆ’ ಎಂದು ಬಿಜೆಪಿ ಮುಖಂಡ ಕಮಲಾಕರ ರಾಠೋಡ ಆರೋಪಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ ಮುಖಂಡರು ಕ್ಷೇತ್ರಕ್ಕೆ ಭೇಟಿ ನೀಡಿದಾಗ ಬ್ಯಾನರ್ ಹಾಕಲು ಎಲ್ಲರಿಗೂ ಅವಕಾಶವಿದೆ. ಆದರೆ, ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಶಾಸಕರು ಉದ್ದೇಶಪೂರ್ವಕವಾಗಿ ನನ್ನ ಬ್ಯಾನರ್‌ಗಳನ್ನು ಹರಿದು ಹಾಕಿಸಿದ್ದಾರೆ. ನನ್ನ ಫೋಟೊ ತೆಗೆದರೂ ನನಗೆ ಚಿಂತೆ ಇರಲಿಲ್ಲ. ಅದರಲ್ಲಿದ್ದ ಪಕ್ಷದ ವರಿಷ್ಠರ ಚಿತ್ರಗಳನ್ನೂ ತೆಗೆಸಿದ್ದಾರೆ. ಇದು ಅವರು ಪಕ್ಷದ ಮುಖಂಡರಿಗೆ ಮಾಡಿದ ಅವಮಾನ’ ಎಂದರು.

‘ಶಾಸಕರು ಹೇಳಿದಂತೆ ಕೇಳುತ್ತಿರುವ ಬಿಜೆಪಿ ಶಹಾಬಾದ್ ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಅವರು ನನಗೆ ಕರೆ ಮಾಡಿ ಯಾರ ಅನುಮತಿ ತೆಗೆದುಕೊಂಡು ಬ್ಯಾನರ್ ಹಾಕುತ್ತಿದ್ದೀಯಾ’ ಎಂದು ಪ್ರಶ್ನಿಸಿದರು.

‘ಪಕ್ಷದಲ್ಲಿ 25 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ನನಗೂ ಬ್ಯಾನರ್ ಅಳವಡಿಸುವ ಅರ್ಹತೆ ಇದೆ ಎಂದೆ. ನಂತರ ಬೇರೆ ಇಬ್ಬರು ಕರೆ ಮಾಡಿ ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ಬ್ಯಾನರ್ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರು ಹಾಗೂ ಅವರ ಬೆಂಬಲ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಹಾಬಾದ್ ಪೊಲೀಸರಿಗೆ ದೂರು ನೀಡಿದ್ದೇನೆ’ ಎಂದರು.

‘ಯಡಿಯೂರಪ್ಪ ಅವರು ಭಾಗವಹಿಸಿದ್ದ ವಿಜಯ ಸಂಕಲ್ಪ ಯಾತ್ರೆಯ ವಾಹನ ಏರಲೂ ನನಗೆ ಅವಕಾಶ ನಿರಾಕರಿಸಿದ್ದರು. ಸಂಸದ ಡಾ. ಉಮೇಶ ಜಾಧವ್ ಅವರು ಹೇಳಿದ ಬಳಿಕ ಮೇಲೆ ಹತ್ತಲು ಬಿಟ್ಟರು’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುಶಾಂತಪ್ಬ ಹೊಡಲ, ಲಕ್ಷ್ಮಣ ರಾಠೋಡ್, ದಿಲೀಪ ಜಾಧವ್, ರಾಜು ಪವಾರ, ಚಂದ್ರಶೇಖರ ರಾಠೋಡ ಹಾಗೂ ಕಾಶೀನಾಥ ಚವ್ಹಾಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT