ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಸಣ್ಣ ಉದ್ಯಮಗಳ ಸರಕುಗಳಿಗೆ ಶಾಶ್ವತ ಮಾರುಕಟ್ಟೆ’

ವಸ್ತು ಪ್ರದರ್ಶನ ಮತ್ತು ಮಾರಾಟದ ಸ್ವಾವಲಂಬನೆ ಮೇಳ: ಶಾಸಕ ಅಲ್ಲಮಪ್ರಭು ಪಾಟೀಲ
Published 16 ಜನವರಿ 2024, 15:30 IST
Last Updated 16 ಜನವರಿ 2024, 15:30 IST
ಅಕ್ಷರ ಗಾತ್ರ

ಕಲಬುರಗಿ: ‘ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ನಡೆಸುವವರ ಉತ್ಪನ್ನಗಳಿಗೆ ನಗರದಲ್ಲಿ ಶಾಶ್ವತ ಮಾರುಕಟ್ಟೆ ಒದಗಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ, ಅನುದಾನವೂ ನೀಡಲಾಗುವುದು’ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಭರವಸೆ ನೀಡಿದರು.

ಇಲ್ಲಿನ ಬಾಪುಗೌಡ ದರ್ಶನಾಪುರ ರಂಗಮಂದಿರದಲ್ಲಿ ಮಂಗಳವಾರ ಎಸ್‌ಐಡಿಬಿಐ, ಕರ್ನಾಟಕ ರಾಜ್ಯ ಮಹಿಳಾ ಉದ್ಯಮಿಗಳ ಸಂಸ್ಥೆ (ಅವೇಕ್) ಮತ್ತು ಜಿಲ್ಲಾ ಕೈಗಾರಿಕೆ ಕೇಂದ್ರದ ವತಿಯಿಂದ ಆಯೋಜಿಸಿದ್ದ ವಸ್ತು ಪ್ರದರ್ಶನ ಮತ್ತು ಮಾರಾಟದ ಸ್ವಾವಲಂಬನೆ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಿಳೆಯರು ಮನೆಯಲ್ಲಿ ಉತ್ಪನ್ನಗಳನ್ನು ಸಿದ್ಧಪಡಿಸಿ, ಮಾರಾಟ ಮಾಡುವ ಮೂಲಕ ಸ್ವಾವಲಂಬಿ ಜೀವನ ಸಾಗಿಸುತ್ತಾರೆ. ಉತ್ಪನ್ನಗಳ ತಯಾರಿಕೆಯಲ್ಲಿ ಗುಣಮಟ್ಟವನ್ನೂ ಕಾಪಾಡಿಕೊಳ್ಳುತ್ತಾರೆ. ಅವರಿಗೆ ಪ್ರೋತ್ಸಾಹದ ಅವಶ್ಯವಿದೆ’ ಎಂದರು.

‘ಸ್ವದೇಶಿ ಚಿಂತನೆಯು ಮಹಿಳೆಯರು ಮನೆಯಲ್ಲಿ ಕುಳಿತು ತಯಾರಿಸುವ ಉತ್ಪನ್ನಗಳಿಂದ ಪ್ರಾರಂಭವಾಗುತ್ತದೆ. ಸಾರ್ವಜನಿಕರು ಸಹ ಅಂತಹ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿ, ಪ್ರೋತ್ಸಾಹಿಸಿದರೆ ಸ್ವದೇಶಿ ಅಭಿಯಾನ ಉಳಿಯುತ್ತದೆ. ಮಹಿಳೆಯರ ಸಣ್ಣ ಉದ್ಯಮವೂ ಬೆಳೆಯುತ್ತದೆ’ ಎಂದು ಸಲಹೆ ನೀಡಿದರು.

ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಅಧ್ಯಕ್ಷ ಶಶಿಕಾಂತ ಪಾಟೀಲ ಮಾತನಾಡಿ, ‘ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತಮ ಅವಕಾಶಗಳಿವೆ. ಮಹಿಳೆಯರು ಸಿದ್ಧಪಡಿಸುವ ಉತ್ಪನ್ನಗಳಿಗೆ ಮಾರುಕಟ್ಟೆ, ಹಣಕಾಸಿನ ನೆರವು ಸಿಗಬೇಕು. ಮುಂದಿನ ದಿನಗಳಲ್ಲಿ ಕೆಕೆಸಿಸಿಐನಿಂದ ಮೇಳ ಆಯೋಜಿಸಲು ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.

40 ಮಳಿಗೆಗಗಳು: ಮೂರು ದಿನಗಳ ಕಾಲ ನಡೆಯುವ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ 40 ಮಳಿಗೆಗಳನ್ನು ತೆರೆಯಲಾಗಿದೆ. ಮಹಿಳೆಯರು ತಮ್ಮ ಮನೆಯಲ್ಲಿ ಸಿದ್ಧಪಡಿಸಿದ ಸಾಮಗ್ರಿ, ಉತ್ಪನ್ನಗಳನ್ನು ಮಾರಾಟಕ್ಕೆ ಇರಿಸಲಾಗಿದೆ.

ಗೃಹಪಯೋಗಿ ಸಾಮಗ್ರಿಗಳು, ಆಹಾರ ಉತ್ಪನ್ನಗಳು, ಕುಸುರಿ ಧಿರಿಸು, ಹಸು ಹಾಲಿನ ಉತ್ಪನ್ನಗಳು, ಕೈಮಗ್ಗ ಬಟ್ಟೆ, ಪ್ಲೇಟ್ ಸಿದ್ಧಪಡಿಸುವಿಕೆ, ಬಂಜಾರ ಸಮುದಾಯದ ಧಿರಿಸು, ಸ್ವದೇಶಿ ಬಟ್ಟೆಗಳು, ತಿಂಡಿ ತಿನಿಸುಗಳು, ಮನೆ ಅಲಂಕಾರಿಕ ವಸ್ತುಗಳು, ಮೂರ್ತಿಗಳು ಸೇರಿದಂತೆ ಸಾವಿರಕ್ಕಿಂತ ಉತ್ಪನ್ನಗಳು ಮಾರಾಟಕ್ಕೆ ಇರಿಸಲಾಗಿದೆ.

ಅವೇಕ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ರೇಣುಕಾ ಮನೋಜ ಅಧ್ಯಕ್ಷತೆ ವಹಿಸಿದ್ದರು. ಸಿಡ್ಬಿ ಡಿಜಿಎಂ ಬಿ.ಉಳಗಿಯನ್, ಪ್ರಾದೇಶಿಕ ಅಧಿಕಾರಿ ಸಿ.ಮಹೇಶ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಸತೀಶಕುಮಾರ, ನಮೃತಾ ಪಟಾಟೆ ಉಪಸ್ಥಿತರಿದ್ದರು.

ಪ್ರಚಾರದ ಕೊರತೆ: ಬಣಗುಟ್ಟಿದ ಮೇಳ ಆದ್ಯತೆಯ ಮೇಲೆ ಮಹಿಳಾ ಸ್ವಾವಲಂಬನೆಗೆ ಮಾರುಕಟ್ಟೆ ಒದಗಿಸಲು ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಿದ್ದರೂ ಸಮರ್ಪಕ ಪ್ರಚಾರ ಹಾಗೂ ಮಾಹಿತಿಯ ಕೊರತೆಯಿಂದ ಸಾರ್ವಜನಿಕರು ಇಲ್ಲದೆ 40 ಮಳಿಗೆಗಳು ಬಣಗುಟ್ಟಿದವು. ಉದ್ಘಾಟನೆ ಕಾರ್ಯಕ್ರಮದಲ್ಲಿ ಜನರು ಇರಲಿಲ್ಲ. ಮಳಿಗೆಗಳತ್ತ ಸುಳಿಯಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕವಾಗಿ ಪ್ರಚಾರ ಮಾಡಿಲಿಲ್ಲ ಎಂದು ಮಳಿಗೆಯ ವರ್ತಕರೊಬ್ಬರು ಬೇಸರ ವ್ಯಕ್ತಪಡಿಸಿದರು. ಬೆಳಿಗ್ಗೆ 10ಕ್ಕೆ ಉದ್ಘಾಟನೆ ಆಗಬೇಕಿದ್ದ ಕಾರ್ಯಕ್ರಮ ಮಧ್ಯಾಹ್ನ 1.30ಕ್ಕೆ ಉದ್ಘಾಟನೆಯಾಯಿತು. ಶಾಸಕ ಅಲ್ಲಮಪ್ರಭು ಪಾಟೀಲ ಉದ್ಘಾಟಿಸಿ ಭಾಷಣ ಮಾಡಿದ ಅರ್ಧ ಗಂಟೆಯ ಬಳಿಕ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಬಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT