ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ| ಸಣ್ಣ ಕೈಗಾರಿಕೆ ಸ್ಥಾಪನೆಗೆ ಹೆಚ್ಚಿನ ಒತ್ತು: ಶರಣಬಸಪ್ಪ ದರ್ಶನಾಪೂರ

ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿಕೆ
Published 4 ಜೂನ್ 2023, 16:14 IST
Last Updated 4 ಜೂನ್ 2023, 16:14 IST
ಅಕ್ಷರ ಗಾತ್ರ

ಕಲಬುರಗಿ: ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಇದಕ್ಕೆ ಎಲ್ಲೆಲ್ಲಿ ನಿವೇಶನದ ಅವಶ್ಯಕತೆ ಇದೆಯೊ ಅಲ್ಲಿ ಆದ್ಯತೆ ಮೇಲೆ ಸರ್ವೆ ಮಾಡಲಾಗುವುದು’ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ನೀರಿನ ಲಭ್ಯತೆ ಇದೆ. ಇಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಕೂಡ ಇದೆ. ಆದರೆ, ಸೂಕ್ತ ಭದ್ರತೆ ಇಲ್ಲವಾದರೆ ಯಾರೂ ಮುಂದೆ ಬರುವುದಿಲ್ಲ. ಹಾಗಾಗಿ, ಬ್ಯಾಂಕ್‌ ಮತ್ತು ಸರ್ಕಾರದಿಂದ ನೆರವು ಬೇಕಾಗುತ್ತದೆ. ಇಲಾಖೆಯಲ್ಲಿ ಅನುದಾನ ಕೂಡ ಲಭ್ಯ ಇದೆ. ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಯಾವ ಖಾತೆಯೂ ಸಣ್ಣದಲ್ಲ: ‘ಸರ್ಕಾರದಲ್ಲಿ ಯಾವ ಖಾತೆಯೂ ಸಣ್ಣದಲ್ಲ. ಎಲ್ಲವೂ ಪ್ರಮುಖ. ಇನ್ನು ಯಾದಗಿರಿಗೆ ಮಂತ್ರಿ ಸ್ಥಾನವೇ ಇರಲಿಲ್ಲ. ಕಾಂಗ್ರೆಸ್‌ ಸರ್ಕಾರ ಯಾದಗಿರಿ ಸೇರಿ ಕಲ್ಯಾಣ ಕರ್ನಾಟಕ ಭಾಗಕ್ಕೆ 8 ಸಚಿವ ಸ್ಥಾನಗಳನ್ನು ನೀಡುವ ಮೂಲಕ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಿದೆ. ಕೊಟ್ಟಂತಹ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇವೆ’ ಎಂದು ದರ್ಶನಾಪೂರ ಪ್ರತಿಕ್ರಿಯಿಸಿದರು.

‘ಯಾದಗಿರಿ ಜಿಲ್ಲೆ ಒಳಗೊಂಡಂತೆ ಈ ಭಾಗದ ಜನ ಗುಳೆ ಹೋಗುವುದನ್ನು ತಡೆಯಲು ಕೃಷಿ ಮತ್ತು ಕೈಗಾರಿಕೆ ಕ್ಷೇತ್ರಗಳಿಗೆ ಒತ್ತು ನೀಡಲಾಗುವುದು. ಸಂವಿಧಾನದ 371 (ಜೆ) ಕಲಂ ತಿದ್ದುಪಡಿ ಸಮರ್ಪಕ ಅನುಷ್ಠಾನಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಭಿವೃದ್ಧಿ ಕೆಲಸಗಳಿಗೆ ಸಮಯ ನಿಗದಿಪಡಿಸಿಕೊಂಡು ಪ್ರಗತಿ ಸಾಧಿಸಲಾಗುವುದು’ ಎಂದು ತಿಳಿಸಿದರು.

‘ಸಿದ್ದರಾಮಯ್ಯ ನೇತೃತ್ವದಲ್ಲಿ ಪರಿಪೂರ್ಣ ಸಚಿವ ಸಂಪುಟ ರಚನೆಯಾಗಿದೆ. ಚುನಾವಣಾ ಪೂರ್ವದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ 5 ಗ್ಯಾರಂಟಿಗಳ ಜೊತೆಗೆ 10 ಭರವಸೆಗಳನ್ನು ಕೊಟ್ಟಿದ್ದೇವೆ. ಅವೆಲ್ಲವನ್ನು ಈಡೇರಿಸುವ ಕೆಲಸ ಮಾಡುತ್ತೇವೆ. ಜನರ ಆಶಯ, ನಿರೀಕ್ಷೆಗಳನ್ನು ಹುಸಿಗೊಳಿಸುವುದಿಲ್ಲ. ಜನಪರ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ’ ಎಂದು ಆಶ್ವಾಸನೆ ನೀಡಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ಸುಭಾಷ ರಾಠೋಡ, ಕಿರಣ್‌ ದೇಶಮುಖ, ರಾಜಗೋಪಾಲರೆಡ್ಡಿ, ಮಲ್ಲಿಕಾರ್ಜುನ ಪೂಜಾರಿ, ದೇವೀಂದ್ರಪ್ಪ ಮರತೂರ, ಲತಾ ರಾಠೋಡ, ವಾಣಿಶ್ರೀ ಸಗರಕರ್‌, ಮಹಾಂತೇಶ ಕೌಲಗಿ, ಪಿಡ್ಡಪ್ಪ ಜಾಲಗಾರ ಇದ್ದರು.

‘ಗುಜರಾತ್‌ ಅಲ್ಲ; ಈಗ ಕರ್ನಾಟಕ ಮಾದರಿ’ ‘ಚುನಾವಣೆ ಬಂದಾಗೊಮ್ಮೆ ಗುಜರಾತ್‌ ಮಾದರಿ ಎಂದು ಹಿಂದೆ ಹೇಳಲಾಗುತ್ತಿತ್ತು. ಆದರೆ ಈಗ ಕಾಂಗ್ರೆಸ್‌ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶದಲ್ಲಿ ಕರ್ನಾಟಕ ಮಾದರಿ ಎಂಬ ಮಾತು ಪ್ರಚಲಿತಕ್ಕೆ ಬಂದಿದೆ’ ಎಂದು ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದರು. ‘ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆಯುತ್ತಿದೆ. ಇದರಿಂದ ಜನರ ಮತ್ತು ವಿರೋಧ ಪಕ್ಷಗಳಲ್ಲಿದ್ದ ಆತಂಕ ದೂರ ಮಾಡಿದೆ’ ಎಂದರು. ‘ಚುನಾವಣೆ ಪೂರ್ವದಲ್ಲಿ ಬಿಜೆಪಿಯೂ ಹಲವು ಆಶ್ವಾಸನೆಗಳನ್ನು ಕೊಟ್ಟಿತ್ತು. ಆದರೆ ವಾಮಮಾರ್ಗದಿಂದ ಅಧಿಕಾರ ಕೋವಿಡ್‌ನಂಥ ತುರ್ತು ಪರಿಸ್ಥಿತಿಯಲ್ಲೂ ನಡೆಸಿದ ಭ್ರಷ್ಟಾಚಾರಕ್ಕೆ ಬೇಸತ್ತು ಜನರು ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT