ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ ಅನಧಿಕೃತ ಬಡಾವಣೆಗಳ ತವರು

Published 19 ಜನವರಿ 2024, 7:37 IST
Last Updated 19 ಜನವರಿ 2024, 7:37 IST
ಅಕ್ಷರ ಗಾತ್ರ

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತ್ಯಧಿಕ ಅನಧಿಕೃತ ಬಡಾವಣೆಗಳಿವೆ. ರಾಜ್ಯದ ಮಹಾನಗಗರ ಪಾಲಿಕೆಗಳ ಪೈಕಿ ಕಲಬುರಗಿಯಲ್ಲೇ 173 ಅನಧಿಕೃತ ಬಡಾವಣೆಗಳು ತಲೆಯೆತ್ತಿವೆ.

ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ವಿಧಾನಸಭೆಗೆ ನೀಡಿದ ವರದಿ ಪ್ರಕಾರ, ವಿಜಯಪುರ, ಮೈಸೂರು, ಶಿವಮೊಗ್ಗ, ಬೆಳಗಾವಿ ಮಹಾನಗರ ಪಾಲಿಕೆಗಳಲ್ಲಿ ಕ್ರಮವಾಗಿ 134, 82, 32 ಮತ್ತು 31 ಅನಧಿಕೃತ ಬಡಾವಣೆಗಳಿವೆ.

ಕಲಬುರಗಿ ನಗರ ಹಾಗೂ ನಗರಕ್ಕೆ ಹೊಂದಿಕೊಂಡ ಗ್ರಾಮೀಣ ಭಾಗದ ನೂರಾರು ಎಕರೆ ಪ್ರದೇಶದಲ್ಲಿ ಅನಧಿಕೃತ ಬಡಾವಣೆಗಳು ವಿಪರೀತವಾಗಿ ನಿರ್ಮಾಣವಾಗಿವೆ. ಇದರಿಂದಾಗಿ ಸರ್ಕಾರಕ್ಕೆ ತೆರಿಗೆ, ಭೂ ಪರಿವರ್ತನೆಯ ಶುಲ್ಕ ಸೇರಿ ನೂರಾರು ಕೋಟಿ ತೆರಿಗೆ ವಂಚನೆಯಾಗುತ್ತಿದೆ. ಅಕ್ರಮ ಬಡಾವಣೆ ನಿರ್ಮಾಣ ಜಾಲ ನಗರ ಸ್ಥಳೀಯ ಸಂಸ್ಥೆಗಳಿಗೂ ವ್ಯಾಪಿಸಿದ್ದು, ಒಟ್ಟು 1,17,607 ಆಸ್ತಿಗಳ ಪೈಕಿ 29,908 ಅನಧಿಕೃತ ಆಸ್ತಿಗಳಿವೆ.

ಅನಧಿಕೃತ ಬಡಾವಣೆಗಳು, ಕಾಲೊನಿಗಳ ನಿರ್ಮಾಣಕ್ಕೆ ಒತ್ತುವರಿ ಮಾಡಿದ್ದರಿಂದಾಗಿ ನೈಸರ್ಗಿಕ ಚರಂಡಿಗಳು, ಕೆರೆಗಳು, ಜಲಾನಯನ ಪ್ರದೇಶಗಳು, ಉದ್ಯಾನಗಳು, ಬಯಲು ಪ್ರದೇಶಗಳಲ್ಲಿ ಕಟ್ಟಡಗಳು ತಲೆ ಎತ್ತಿವೆ. ಬಹುತೇಕ ಬಡಾವಣೆಗಳಿಗೆ ಮೂಲಸೌಲಭ್ಯಗಳು ಮರೀಚಿಕೆಯಾಗಿದ್ದು, ಕನಿಷ್ಠ ಸೌಕರ್ಯಗಳು ಇಲ್ಲದೆ ಅಲ್ಲಿನ ನಿವಾಸಿಗಳು ಪರದಾಡುತ್ತಿದ್ದಾರೆ.

ಮಹಾನಗರ ಪಾಲಿಕೆಯ ವಲಯ ಕಚೇರಿ 2ರಲ್ಲಿ 87, ವಲಯ ಕಚೇರಿ 3ರಲ್ಲಿ 49 ಹಾಗೂ ವಲಯ ಕಚೇರಿ 1ರಲ್ಲಿ 37 ಅನಧಿಕೃತ ಬಡಾವಣೆಗಳಿವೆ. ಕಪನೂರ, ಶೇಖ್ ರೋಜಾ, ನಿಜಾಮಪುರ, ಜಾಫರಾಬಾದ್, ಬಿದ್ದಾಪುರ, ಕೊಟನೂರ, ಸಿರಸಗಿ, ತಾಜಸುಲ್ತಾನಪುರ ಮತ್ತು ಕುವೆಂಪು ನಗರದಲ್ಲಿ ವ್ಯಾಪಕವಾಗಿವೆ.

ಅಕ್ರಮ ಬಡಾವಣೆಗಳು ನಿರ್ಮಾಣಗೊಂಡು ವರ್ಷಗಳೇ ಉರುಳಿದರೂ ರಸ್ತೆ, ಚರಂಡಿ ನಿರ್ಮಾಣವಾಗದೆ ಮಳೆ ನೀರು ಸೇರಿದಂತೆ ತ್ಯಾಜ್ಯ ನೀರು ಹೋಗಲು ಸಮಸ್ಯೆಯಾಗಿದೆ. ಮಳೆಗಾಲದಲ್ಲಿ ರಸ್ತೆಗಳು ಕೆಸರು ಗದ್ದೆಯಂತೆ ಆಗುತ್ತವೆ. ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆಗಳು ಹಾಗೂ ಖಾಸಗಿಯವರು ರೂಪಿಸಿದ ಲೇಔಟ್‌ಗಳಲ್ಲಿ ಸಮರ್ಪಕ ರಸ್ತೆ, ನೀರು, ಚರಂಡಿ, ತ್ಯಾಜ್ಯ ನಿರ್ವಹಣೆ, ಬೀದಿ ದೀಪ ವ್ಯವಸ್ಥೆಯೂ ಸರಿಯಾಗಿಲ್ಲ.

‘ನಗರವೂ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಯೋಜನಾ ಪ್ರಾಧಿಕಾರ, ನಗರಾಭಿವೃದ್ಧಿ ಪ್ರಾಧಿಕಾರ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯನ್ನು ಮೀರಿ ಅನಧಿಕೃತ ಬಡಾವಣೆಗಳು ಬೆಳೆಯುತ್ತಿವೆ. ಇವುಗಳಿಗೆ ಮೂಗುದಾರ ಹಾಕಬೇಕಾದ ಅಧಿಕಾರಿಗಳು ಕೈಕಟ್ಟಿ ಕುಳಿತ್ತಿದ್ದಾರೆ. ತ್ಯಾಜ್ಯ ವಿಲೇವಾರಿ, ರಸ್ತೆ ದುರಸ್ತಿ, ಚರಂಡಿ ನಿರ್ಮಾಣಕ್ಕೆ ಅನುದಾನ ಇಲ್ಲವೆಂದು ನೆಪ ಹೇಳುತ್ತಿದ್ದಾರೆ. ಅಕ್ರಮಗಳಿಗೆ ಕಡಿವಾಣ ಹಾಕಿ ದಂಡ ವಸೂಲಿ ಮಾಡಿದರೆ ಪಾಲಿಕೆಗೆ ಅನುದಾನ ಹರಿದುಬರುತ್ತದೆ’ ಎಂದು ನಗರದ ನಿವಾಸಿ ಕೆ. ಗುರುದತ್ತ ಅಭಿಪ್ರಾಯಪಡುತ್ತಾರೆ.

ಮಹಾನಗರ ಪಾಲಿಕೆಯ ಕಚೇರಿ
ಮಹಾನಗರ ಪಾಲಿಕೆಯ ಕಚೇರಿ
ಅನಧಿಕೃತ ಬಡಾವಣೆಗಳಲ್ಲಿ ಮನೆ ಕಟ್ಟಿಸಿಕೊಂಡವರಿಗೆ ನೋಟಿಸ್‌ ಕೊಟ್ಟಿದ್ದೇವೆ. ಕೆಲವರ ಮೇಲೆ ಪ್ರಕರಣ ದಾಖಲಿಸಲಾಗಿದೆ. 16 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿವೆ
ದಯಾನಂದ ಪಾಟೀಲ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕಲಬುರಗಿ
‘ಅಕ್ರಮ ಆಸ್ತಿಗೆ ಎರಡು ಪಟ್ಟು ತೆರಿಗೆ’
‘ಅನಧಿಕೃತ ಬಡಾವಣೆಗಳಲ್ಲಿ ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡವರಿಗೆ ಎರಡು ಪಟ್ಟು ತೆರಿಗೆ ವಿಧಿಸಿ ಮೂಲಸೌಕರ್ಯ ಒದಗಿಸಲಾಗುತ್ತಿದೆ. ಈಗಾಗಲೇ ಸುಮಾರು 4 ಸಾವಿರ ಆಸ್ತಿಗಳನ್ನು ಗುರುತಿಸಿ ಸುಮಾರು 500 ಮನೆಗಳ ಮಾಲೀಕರಿಂದ ಡಬಲ್ ತೆರಿಗೆ ಸಂಗ್ರಹಿಸಲಾಗಿದೆ’ ಎಂದು ಪಾಲಿಕೆಯ ಆಯುಕ್ತ ಭುವನೇಶ್ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು. ‘ಹಲವು ವರ್ಷಗಳಿಂದ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಕ್ರಮ ತಡೆಗಟ್ಟಲು ಸಾಮೂಹಿಕವಾಗಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಸದ್ಯ ನೋಟಿಸ್ ನೀಡುತ್ತಿದ್ದೇವೆ. ಸರ್ಕಾರದಿಂದ ಯಾವುದೇ ಸಮಯದಲ್ಲಿ ಅಕ್ರಮ–ಸಕ್ರಮ ಬರಬಹುದು. ಹೀಗಾಗಿ ಒತ್ತುವರಿ ತೆರವು ಕಾರ್ಯಾಚರಣೆಯ ಯೋಜನೆ ಸದ್ಯಕ್ಕೆ ಪಾಲಿಕೆಯ ಮುಂದೆ ಇಲ್ಲ’ ಎಂದರು.
ಸ್ಥಳೀಯ ಸಂಸ್ಥೆಗಳವಾರು ಅಕ್ರಮ ಆಸ್ತಿಗಳು
ಸಂಸ್ಥೆ;ಅಕ್ರಮ ಆಸ್ತಿ ಆಳಂದ ಪುರಸಭೆ;5854 ಚಿತ್ತಾಪುರ ಪುರಸಭೆ;5106 ಸೇಡಂ ಪುರಸಭೆ;4760 ಯಡ್ರಾಮಿ ಪ.ಪಂ;4584 ಅಫಜಲಪುರ ಪುರಸಭೆ;3433 ಜೇವರ್ಗಿ ಪುರಸಭೆ;2188 ಕಮಲಾಪುರ ಪ.ಪಂ;1576 ಕಾಳಗಿ ಪ.ಪಂ.;1060 ಶಹಾಬಾದ್ ನಗರ ಸಭೆ;834 ಚಿಂಚೋಳಿ ಪುರಸಭೆ;424 ವಾಡಿ ಪುರಸಭೆ;95 *ಮಾಹಿತಿ: ಜಿಲ್ಲಾ ನಗರಾಭಿವೃದ್ಧಿ ಕೋಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT