ಭಾನುವಾರ, ಜುಲೈ 25, 2021
22 °C
ಹೈ–ಕ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಮಾರುತಿ ಮಾನಪಡೆ ಟೀಕೆ

‘ಇಎಸ್‌ಐಸಿಗೆ ಹಣ ತರಲು ಸಂಸದ ಜಾಧವ ವಿಫಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘₹1300 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಇಎಸ್‌ಐಸಿ ಆಸ್ಪತ್ರೆಯು ಕೋವಿಡ್‌–19 ರೋಗಿಗಳಿಗೆ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಇನ್ನೂ ಕೊರೊನಾ ತಪಾಸಣೆ ಲ್ಯಾಬ್‌ ಆರಂಭಗೊಂಡಿಲ್ಲ. ಜನರನ್ನು ನಂಬಿಸಲಷ್ಟೇ ಸಂಸದ ಡಾ.ಉಮೇಶ ಜಾಧವ ಅವರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ’ ಎಂದು ‘371 (ಜೆ) ಜಾರಿ ಮತ್ತು ಹೈ–ಕ ಅಭಿವೃದ್ಧಿ ಹೋರಾಟ ಸಮಿತಿ’ ಅಧ್ಯಕ್ಷ ಮಾರುತಿ ಮಾನಪಡೆ ಟೀಕಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಸದರ ಬಗ್ಗೆ ನನಗೆ ಯಾವ ವೈಯಕ್ತಿಕ ದ್ವೇಷವೂ ಇಲ್ಲ. ಆದರೆ, ಅವರು ಕೆಲಸ ಮಾಡುತ್ತಿಲ್ಲ. ಇಲ್ಲಿಯವರೆಗೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಎಸ್‌ಐಸಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿಗೆ ಒಂದು ಕೋಟಿ ಅನುದಾನವನ್ನೂ ತಂದಿಲ್ಲ. ಬರೀ ಮಾಸ್ಕ್‌ ಹಂಚಿ ಪ್ರಚಾರ ಪಡೆಯುವುದಕ್ಕಷ್ಟೇ ಸೀಮಿತರಾಗಿದ್ದಾರೆ. ಪಿಎಂ ಕೇರ್‌ ಫಂಡ್‌ನಿಂದ ಜಿಲ್ಲೆಗೆ ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ’ ಎಂದು ಸವಾಲು ಹಾಕಿದರು.

‘ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿಗಳಿಗೆ ಹಣಕಾಸು ಇಲಾಖೆ ಒಪ್ಪಿಗೆ ಬೇಕಿಲ್ಲ. ಆದರೂ, ಕೊರೊನಾ ಪ್ರಯುಕ್ತ ಆರ್ಥಿಕ ಮಿತವ್ಯಯದ ನೆಪವೊಡ್ಡಿ ಕಲ್ಯಾಣ ಕರ್ನಾಟಕ ವೃಂದ, ನೇರ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ಐದು ವರ್ಷಗಳಿಂದ ನಡೆಯುತ್ತಿದ್ದ ಪಿ.ಯು. ಉಪನ್ಯಾಸಕರ ನೇಮಕ ಪ್ರಕ್ರಿಯೆಯನ್ನೂ ಸ್ಥಗಿತಗೊಳಿಸಲಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕೊನೆಯ ಎರಡು ವರ್ಷವೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ತಲಾ ₹ 1500 ಕೋಟಿ ಕೊಟ್ಟಿದ್ದರು. ಯಡಿಯೂರಪ್ಪ ಸರ್ಕಾರ ಮಂಡಳಿಗೆ ಒಬ್ಬ ಅಧ್ಯಕ್ಷರನ್ನು ನೇಮಕ ಮಾಡಲು ಮುಂದಾಗಿಲ್ಲ. ಇದರಿಂದಾಗಿ ಆರು ಜಿಲ್ಲೆಗಳ ಅಭಿವೃದ್ಧಿ ಕುಂಠಿತವಾಗಿದೆ. ಒಂದು ವರ್ಷವೂ ಮಂಡಳಿಯ ಪೂರ್ಣ ಹಣ ಖರ್ಚಾಗಿಲ್ಲ’ ಎಂದು ಟೀಕಿಸಿದರು.

ಹೋರಾಟ ಸಮಿತಿ ಉಪಾಧ್ಯಕ್ಷ ಪಾಂಡುರಂಗ ಮಾವಿನ, ಕಾರ್ಯದರ್ಶಿ ಶರಣಬಸಪ್ಪ ಗೋಷ್ಠಿಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.