ಸೋಮವಾರ, ಜನವರಿ 17, 2022
21 °C
ಶಾಸಕ ಪ್ರಿಯಾಂಕ್‌ ಖರ್ಗೆಗೆ ಪ್ರತಿಕ್ರಿಯೆ ನೀಡಿದ ಸಂಸದ ಡಾ.ಉಮೇಶ ಜಾಧವ

‘ನನಗೆ ಗಡುವು ನೀಡುವವರು 20 ವರ್ಷಗಳಿಂದ ಏನು ಮಾಡಿದಿರಿ?’: ಡಾ.ಉಮೇಶ ಜಾಧವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ‘ಶಾಸಕ ಪ್ರಿಯಾಂಕ್ ಖರ್ಗೆ ಅವರು ಸನ್ನತಿಯ ಅಭಿವೃದ್ಧಿಗೆ ನನಗೆ ಕಾಲಮಿತಿ ಕೊಡುವ ಬದಲು, ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. 20 ವರ್ಷದಿಂದ ಏಕೆ ಈ ಐತಿಹಾಸಿಕ ಸ್ಥಳವನ್ನು ಪ್ರಿಯಾಂಕ್‌ ಹಾಗೂ ಅವರ ತಂದೆಯವರು ನಿರ್ಲಕ್ಷ್ಯ ಮಾಡಿದರೆಂದು ಹೇಳಬೇಕು’ ಎಂದು ಸಂಸದ ಡಾ.ಉಮೇಶ ಜಾಧವ ಮರು ಪ್ರಶ್ನೆ ಮಾಡಿದ್ದಾರೆ.

‘ಸನ್ನತಿ– ಕನಗನಹಳ್ಳಿಯ ಐತಿಹಾಸಿಕ ಬೌದ್ಧ ಸ್ತೂಪವನ್ನು ಬೆಳಕಿಗೆ ತರದೆ ಮರೆಮಾಚುವ ಕೆಲಸ ಮಾಡಿದ್ದು ಏಕೆ? ಕಲಬುರಗಿಯಲ್ಲಿರುವ ಬುದ್ಧ ವಿಹಾರವನ್ನು ಬೆಳೆಸಿದ್ದು ಮತ್ತು ಪ್ರಸಿದ್ಧಗೊಳಿಸಿದ್ದು ತುಂಬ ಸಂತೋಷದ ವಿಷಯ. ಆದರೆ, ಇಂಥ ಆಸಕ್ತಿ ನಿಮಗೆ ಸನ್ನತಿ ಮೇಲೆ ಏಕೆ ಮೂಡಲಿಲ್ಲ’ ಎಂದು ಅವರು ಪ‍್ರಕಟಣೆ ಮೂಲಕ ಕೇಳಿದ್ದಾರೆ.

‘2021ರ ಡಿಸೆಂಬರ್‌ 5ರಂದು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಬಂದ ವರದಿಯನ್ನು ನಾನು ಖುದ್ದಾಗಿ ನಿಮ್ಮ ಗಮನಕ್ಕೆ ತಂದಿದ್ದೆ. ಆದರೆ, ನೀವು ಸೌಜನ್ಯದ ಪ್ರತಿಕ್ರಿಯೆ ಕೂಡ ನೀಡಲಿಲ್ಲ. ನಾನು ಸನ್ನತಿ ಹೋಗುವ ಮೊದಲು ನಿಮ್ಮನ್ನು ಯಾವ ಸೌಜನ್ಯಕ್ಕಾಗಿ ಕೇಳಬೇಕಿತ್ತು? ಚಿತ್ತಾಪುರ ಕೂಡ ನನ್ನ ಕ್ಷೇತ್ರದ ಭಾಗವಾದ್ದರಿಂದ ಅಲ್ಲಿಗೆ ಹೋಗಲು ನನಗೆ ಯಾರ ಅಪ್ಪಣೆಯೂ ಬೇಕಾಗಿಲ್ಲ’ ಎಂದೂ ಸಂಸದ ಹೇಳಿದ್ದಾರೆ.

‘ವಾಡಿಯಲ್ಲಿ ನಡೆದ ಸರ್ಕಾರಿ ಕಾಮಗಾರಿಯ ಅಡಿಗಲ್ಲು ಸಮಾರಂಭದಲ್ಲಿ ಮುಖ್ಯಮಂತ್ರಿ ಅವರ ಭಾವಚಿತ್ರ ಹಾಕದೇ ಅವಮಾನ ಮಾಡಿದ್ದೀರಿ. ಕೇವಲ ನಿಮ್ಮ ಹಾಗೂ ನಿಮ್ಮ ತಂದೆಯವರ ಭಾವಚಿತ್ರಗಳನ್ನು ಬ್ಯಾನರ್‌ನಲ್ಲಿ ಹಾಕಿಕೊಳ್ಳುವುದು ಸೌಜನ್ಯವಲ್ಲ’ ಎಂದಿದ್ದಾರೆ.

‘ಎಎಸ್‌ಐನ 22 ಅಧಿಕಾರಿಗಳ ತಂಡವು ಚಿತ್ತಾಪುರದಲ್ಲೇ ಬೀಡು ಬಿಟ್ಟಿತ್ತು. ಅವರೊಂದಿಗಾದರೂ ನೀವು ಚರ್ಚೆ ಮಾಡಬಹುದಿತ್ತು. ಅದನ್ನು ಬಿಟ್ಟು ವಿನಾಕಾರಣ ರಾಜಕೀಯ ಮಾಡುವುದು ಸರಿಯಲ್ಲ. ಜಿಲ್ಲೆಯ ಜನರು ನನ್ನನ್ನು ಸಂಸದನಾಗಿ ಆಯ್ಕೆ ಮಾಡಿದ್ದಾರೆ. ‘ಡ್ರಾಮಾ ಸಂಸದ’ ಎಂದು ಹೀಯಾಳಿಸುವ ಮೂಲಕ ನೀವು ಜನರ ಭಾವನೆಗೆ ಅವಮಾನ ಮಾಡಿದ್ದೀರಿ’ ಎಂದೂ ಡಾ.ಉಮೇಶ ಜಾಧವ ಕಿಡಿ ಕಾರಿದ್ದಾರೆ.

‘20 ದಿನಗಳ ಹಿಂದೆ ಸನ್ನತಿಗೆ ಹೋಗಿ ಬಂದ ಮೇಲೆ ಅಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸ್ತೂಪದ ಸುತ್ತ ಗಿಡಗಂಟಿ ಸ್ವಚ್ಛ ಮಾಡಲಾಗಿದೆ. 20 ವರ್ಷಗಳಿಂದ ಬಯಲಲ್ಲೇ ಬಿದ್ದಿದ್ದ ಸಾಮ್ರಾಟ್ ಅಶೋಕನ ಶಿಲಾಶಾಸನವನ್ನು ತಕ್ಷಣವೇ ಗಾಜಿನ ಪೆಟ್ಟಿಗೆಯಲ್ಲಿ ಸಂರಕ್ಷಣೆ ಮಾಡಿ ಇಡಲಾಗಿದೆ. ಮೂರೇ ದಿನದಲ್ಲಿ ದೆಹಲಿಗೆ ಹೋಗಿ ಸಚಿವರನ್ನು ಭೇಟಿ ಮಾಡಿ, ಅಧಿಕಾರಿಗಳ ತಂಡವನ್ನು ಕರೆತಂದು ಕೆಲಸ ಮಾಡಿಸಿದ್ದೇನೆ. ಸನ್ನತಿಯನ್ನು ವಿಶ್ವ ಮಟ್ಟದ ಪ್ರವಾಸಿ ತಾಣ ಮಾಡುವವರೆಗೂ ನಾನು ವಿಶ್ರಮಿಸುವುದಿಲ್ಲ’ ಎಂದೂ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.