ಗುರುವಾರ , ನವೆಂಬರ್ 26, 2020
19 °C
2019ರ ಉಪ ಚುನಾವಣೆ ನಂತರ ಚಿಂಚೋಳಿ ಮರೆತ ಬಿಜೆಪಿ ಸರ್ಕಾರ

ಚಿಂಚೋಳಿ: ಮುಲ್ಲಾಮಾರಿ ಪ್ರವಾಹ ಸಮಸ್ಯೆಗೆ ಮುಕ್ತಿ ಎಂದು?

ಜಗನ್ನಾಥ ಡಿ.ಶೇರಿಕಾರ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕಿನ ನಾಗರಾಳ ಜಲಾಶಯದಿಂದ ನದಿಗೆ ಹೆಚ್ಚುವರಿ ನೀರು ಬಿಟ್ಟಾಗಲೆಲ್ಲ ಸಂಪರ್ಕ ಕಡಿತಗೊಳ್ಳುವ ಮುಲ್ಲಾಮಾರಿ ನದಿ ಪಾತ್ರದ ಗ್ರಾಮಗಳ ಜನರ ಸಮಸ್ಯೆಗೆ ಮುಕ್ತಿ ಮರೀಚಿಕೆಯಾಗಿದೆ.

ಜಲಾಶಯದಿಂದ ನೀರು ಬಿಟ್ಟರೆ ಚಿಮ್ಮನಚೋಡ– ಬೀದರ್ ಸಂಪರ್ಕ ಕಡಿತವಾಗುತ್ತಿದೆ. ಇದಕ್ಕೆ ಚಿಮ್ಮನಚೋಡ ಬಳಿ ಮುಲ್ಲಾಮಾರಿ ನದಿಗೆ ನಿರ್ಮಿಸಿದ ಸೇತುವೆ ಮುಳುಗುವುದು ಕಾರಣ. ಈಗ ಚಿಮ್ಮನಚೋಡ ಹೊಸ ಬಡಾವಣೆಯೂ ಈ ಸೇತುವೆ ದಾಟಿ ನಿರ್ಮಾಣವಾಗಿದ್ದರಿಂದ ಹಳೆ ಊರು ಮತ್ತು ಹೊಸ ಊರಿನ ಮಧ್ಯೆಯೂ ಸಂಪರ್ಕ ಕಡಿತವಾಗುತ್ತಿದೆ.

ಮುಲ್ಲಾಮಾರಿ ನದಿ ದಂಡೆಯ ಮೇಲಿರುವ ತಾಜಲಾಪುರ ಗ್ರಾಮವೂ ನದಿಗೆ ನೀರು ಬಿಟ್ಟರೆ ಪ್ರವಾಹದಿಂದ ಬಾಧಿತವಾಗುತ್ತಿದೆ. ಭಾಲ್ಕಿ– ಚಿಂಚೋಳಿ ರಾಜ್ಯ ಹೆದ್ದಾರಿ–75ರಿಂದ ಗ್ರಾಮಕ್ಕೆ ಸಂಪರ್ಕ ಬೆಸೆಯಲು ಮುಲ್ಲಾಮಾರಿ ನದಿಗೆ ಸೇತುವೆ ನಿರ್ಮಿಸಲಾಗಿದೆ. ಜಲಾಶಯದಿಂದ ನೀರು ಬಿಟ್ಟರೆ ಈ ಸೇತುವೆಯೂ ಮುಳುಗಡೆಯಾಗುತ್ತದೆ.

ತಾಲ್ಲೂಕಿನ ಗಾರಂಪಳ್ಳಿ ಗ್ರಾಮಕ್ಕೆ ಸಂಪರ್ಕ ಬೆಸೆಯುವ ಸೇತುವೆಯೂ ಪ್ರವಾಹದಲ್ಲಿ ನೀರಿನಲ್ಲಿ ಮುಳುಗುತ್ತದೆ, ಇದರಿಂದ ಈ ಗ್ರಾಮವು ಸಂಪರ್ಕ ಕಡಿದುಕೊಳ್ಳುತ್ತಿದೆ.

ಗರಕಪಳ್ಳಿ ಭಕ್ತಂಪಳ್ಳಿ, ಕೊಟಗಾ, ಗೌಡನಹಳ್ಳಿ, ನೀಮಾಹೊಸಳ್ಳಿ, ಜಟ್ಟೂರು ಬ್ರಿಜ್ ಕಂ ಬ್ಯಾರೇಜ್‌, ಕಾಗಿಣಾ ನದಿಗೆ ಹಲಕೋಡಾ ಬಳಿ ನಿರ್ಮಿಸಿದ ಸತುವೆ ಮುಳುಗಡೆ ಆಗುತ್ತಿರುವುದರಿಂದ ಎತ್ತರ ಹೆಚ್ಚಿಸಬೇಕೆಂಬ ಕೂಗು ಕೇಳಿ ಬಂದಿದೆ.

ನಾಗರಾಳ ಜಲಾಶಯದ ಗರಿಷ್ಠ ಮಟ್ಟ 491 ಮೀಟರ್ ಇದೆ. ಇದನ್ನು 495 ಮೀಟರ್‌ಗೆ ಹೆಚ್ಚಿಸಿದರೆ ತಾಲ್ಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಮತ್ತು ಅದರ ಹಾನಿ ತಡೆಯಬಹುದು. ಎತ್ತರ ಹೆಚ್ಚಿಸಿ 492 ಮೀಟರ್ ನೀರು ಸಂಗ್ರಹಿಸುತ್ತ ಹೆಚ್ಚುವರಿ ನೀರನ್ನು ನಿರಂತರವಾಗಿ ನದಿಗೆ ಬಿಟ್ಟರೆ ಪ್ರವಾಹದ ನೀರು ಜನರ ಮನೆಗಳಿಗೆ ನುಗ್ಗುವುದನ್ನು ಮತ್ತು ಹಾನಿ ಸಂಭವಿಸುವುದನ್ನು ತಪ್ಪಿಸಬಹುದಾಗಿದೆ ಎನ್ನುತ್ತಾರೆ ಪರಿಣತರು.

ಚಿಂಚೋಳಿ ಮರೆತ ಬಿಜೆಪಿ ನಾಯಕರು: 2019ರ ಉಪ ಚುನಾವಣೆಯ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು 15 ತಿಂಗಳು ಗತಿಸುತ್ತಿದ್ದರೂ ಒಬ್ಬ ಮಂತ್ರಿಯೂ ಬಂದು ಹೋಗಿಲ್ಲ. ಇದೇ ಮಾರ್ಗವಾಗಿ ಪ್ರತಿ ವಾರ ಓಡಾಡುವ ಪ್ರಭು ಚವ್ಹಾಣ ಅವರೂ ಈ ಕ್ಷೇತ್ರದಲ್ಲಿ ಪಾದಸ್ಪರ್ಶ ಮಾಡಿಲ್ಲ ಇದು ಕ್ಷೇತ್ರದ ಜನರಲ್ಲಿ ಅಸಮಾಧಾನ ಮಡುಗಟ್ಟಲು ಕಾರಣವಾಗಿದೆ.

ಯಡಿಯೂರಪ್ಪ ಸರಿದಂತೆ  ರಾಜ್ಯ ಬಿಜೆಪಿ ನಾಯಕರು ಚಿಂಚೋಳಿ ಅಭಿವೃದ್ಧಿಗೆ ಭಾಗ್ಯದ ಬಾಗಿಲು ತೆರೆಯಲು ಬಿಜೆಪಿ ಗೆಲ್ಲಿಸಿ ಎಂದಿದ್ದರು. ಆದರೆ ಗೆದ್ದ ನಂತರ  ಕ್ಷೇತ್ರದ ಕಡೆ ಯಾರೂ ಮುಖ ಮಾಡಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.