ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಜಿಮ್ಸ್‌ನ ನವಜಾತ ಶಿಶು ಘಟಕಕ್ಕೆ ಹೈಟೆಕ್‌ ಸ್ಪರ್ಶ

Last Updated 15 ಮೇ 2022, 4:57 IST
ಅಕ್ಷರ ಗಾತ್ರ

ಕಲಬುರಗಿ: ನವಜಾತ ಶಿಶು ಮರಣ ಪ್ರಮಾಣ ಇಳಿಕೆ, ಕಡಿಮೆ ತೂಕ, ಅವಧಿಗೆ ಪೂರ್ವ ಜನನ, ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಚಿಕಿತ್ಸೆಗಾಗಿ ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಮ್ಸ್) ಆವರಣದಲ್ಲಿ ವಿಶೇಷ ನವಜಾತ ಶಿಶು ನಿಗಾ ಘಟಕಕ್ಕೆ (ಎಸ್‌ಎನ್‌ಸಿಯು) ಪ್ರತ್ಯೇಕ ಕಟ್ಟಡ ನಿರ್ಮಿಸಲಾಗಿದೆ. ಅದು ಎಲ್ಲಾ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಒಳಗೊಂಡಿದೆ.

ನೂತನ ಎಸ್‌ಎನ್‌ಸಿಯು ಹವಾನಿಯಂತ್ರಿತ ವ್ಯವಸ್ಥೆ ಹೊಂದಿದೆ. ಶಿಶು ಬೆಚ್ಚಗಿರಿಸಲು ವಿಶೇಷ ಕಾವು ಪೆಟ್ಟಿಗೆ (ರೇಡಿಯಂಟ್ ವಾರ್ಮರ್‌), ಕೃತಕ ಉಸಿರಾಟಕ್ಕೆ ಇನ್‌–ಕ್ಯೂ–ಬೇಡರ್, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕಾಂಶ ನೀಡುವ ವ್ಯವಸ್ಥೆ, ಕ್ಯಾನ್ಸರ್ ತಪಾಸಣೆ, ಡಿ.ಸಿ ಮತ್ತು ಶಾಕ್ ಟ್ರಿಟ್‌ಮೆಂಟ್ ಯಂತ್ರಗಳು, ಇಸಿಜಿ, ಸಿರಿಂಜ್ ಪಂಪ್‌, ಇಕೊ ಬೇಬಿ ಕೇರ್, ಇನ್ ಕ್ಯೂಬೇಟರ್ (ಕಾಂಗರೂ ಮದರ್ ಕೇರ್), ಪ್ರತಿ ಬೆಡ್‌ಗೂ ವೆಂಟಿಲೇಟರ್‌ ಹಾಗೂ ಮಾನಿಟರ್‌ನಂತಹ ಸೌಕರ್ಯಗಳು ಒಂದೇ ಸೂರಿನಡಿ ಇವೆ. ಶಸ್ತ್ರಚಿಕಿತ್ಸೆ ಹಾಗೂ ಹೃದಯ ಸಂಬಂಧಿ ಕಾಯಿಲೆ ಹೊರತುಪಡಿಸಿ ಎಲ್ಲ ರೋಗಗಳಿಗೆ ಇಲ್ಲಿ ಚಿಕಿತ್ಸೆ ಲಭ್ಯ.

‘ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಹಳೆ ಕಟ್ಟಡದ ಮಕ್ಕಳ ವಿಭಾಗಕ್ಕೆ ಪ್ರತಿ ತಿಂಗಳು 120 ಶಿಶು ದಾಖಲಾಗುತ್ತವೆ. ಜಾಗ ಹಾಗೂ ವೈದ್ಯಕಿಯ ಸೌಕರ್ಯಗಳ ಅಭಾವದಿಂದ ತುರ್ತು ಸ್ಥಿತಿಯಲ್ಲಿದ್ದ ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಮಹಿಳೆ ಮತ್ತು ಮಕ್ಕಳಿಗೆ ಪ್ರತ್ಯೇಕ ಆಸ್ಪತ್ರೆ ಕಟ್ಟಡ ನೀಡುವಂತೆ ಈ ಹಿಂದಿನ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರಿಗೆ ಕೋರಲಾಗಿತ್ತು’ ಎಂದು ಜಿಮ್ಸ್ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಸಂದೀಪ ಹರಸಂಗಿ ತಿಳಿಸಿದರು.

‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಕೆಆರ್‌ಡಿಬಿ) ₹ 3 ಕೋಟಿ ಮತ್ತು ವೈದ್ಯಕೀಯ ಉಪಕರಣಗಳಿಗೆ ಡಿಎಂಎಫ್‌ನ ಸಿಎಸ್‌ಆರ್‌ ನಿಧಿಯಿಂದ ₹ 6.5 ಕೋಟಿ ಅನುದಾನದಿಂದ ಕಟ್ಟಡ ನಿರ್ಮಾಣಗೊಂಡಿತು. ಉಪಕರಣಗಳ ಜೋಡಣೆ ಕಾರ್ಯ ಮುಗಿಯುತ್ತಿದ್ದಂತೆ ಮಕ್ಕಳ ಚಿಕಿತ್ಸೆಗೆ ಎಸ್‌ಎನ್‌ಸಿಯು ಲಭ್ಯವಾಗಲಿದೆ’ ಎಂದು ಅವರು ವಿವರಿಸಿದರು.

ವಿಶೇಷ ನವಜಾತ ಶಿಶು ಮತ್ತು ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆಯ 34 ಹಾಸಿಗೆ ಸಾಮರ್ಥ್ಯ ಇದೆ. ಮೊದಲನೇ ಮಹಡಿಯಲ್ಲಿ 22 ಕೆಎಂಸಿ ಹಾಸಿಗೆ ಮತ್ತು ನೆಲ ಮಹಡಿಯಲ್ಲಿ 12 ಪಿಐಎಸ್‌ಯು ಬೆಡ್‌ಗಳಿವೆ. ಎಲ್ಲ ಬೆಡ್‌ಗಳು ತುರ್ತು ಚಿಕಿತ್ಸೆಗೆ ಪೂರಕವಾಗಿವೆ. ಕಡಿಮೆ ತೂಕದ ಮಕ್ಕಳ ಚಿಕಿತ್ಸೆಗೆ ಮೂರು ಇನ್ ಕ್ಯೂಬೇಟರ್ ಸಹ ಇವೆ. ಸಿಬ್ಬಂದಿ ಹಾಗೂ ರೋಗಿಗಳ ಸಮಾಲೋಚನೆಗೆ ಪ್ರತ್ಯೇಕ ಕೊಠಡಿಗಳಿವೆ. ‘ಇಲ್ಲಿ ಸಿಗುವ ಇನ್ ಕ್ಯೂಬೇಟರ್ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಪಡೆದರೇ ಪ್ರತಿ ದಿನಕ್ಕೆ ₹ 8 ಸಾವಿರದಿಂದ ₹ 12 ಸಾವಿರದವರೆಗೆ ಖರ್ಚು ತಗಲುತ್ತದೆ. ಒಂದು ವಾರಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಆದರೆ, ಜಿಮ್ಸ್‌ನ ಎಸ್‌ಎನ್‌ಸಿಯುನಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಹಿರಿಯ ಶುಶ್ರೂಷಕಿ ಮಂಗಲಾ ತಿಳಿಸಿದರು.

ನರ್ಸಿಂಗ್ ಸಿಬ್ಬಂದಿ ಹೆಚ್ಚಳಕ್ಕೆ ಮನವಿ
‘ಸದ್ಯ 2 ನಿಯೋನಾಟಾಲಜಿಸ್ಟ್ (ನವಜಾತ ಶಿಶುತಜ್ಞರು), ತಲಾ ಒಬ್ಬರು ಪಿಐಸಿಯು ಹಾಗೂ ಕಿಡ್ನಿತಜ್ಞರು, 12 ಮಕ್ಕಳ ರೋಗ ತಜ್ಞರು ಸೇರಿ 16 ಜನ ನುರಿತ ವೈದ್ಯರಿದ್ದಾರೆ. ಮುಂದಿನ ದಿನಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಲಿದ್ದು, ಇನ್ನಷ್ಟು ಸಿಬ್ಬಂದಿ ನೇಮಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸಿದೆ’ ಎಂದು ಡಾ. ಸಂದೀಪ್ ಹರಸಂಗಿ ತಿಳಿಸಿದರು.

*

ಆಸ್ಪತ್ರೆಯಲ್ಲಿ ಅತ್ಯಾಧುನಿಕ ನವಜಾತ ಶಿಶು ನಿಗಾ ಘಟಕ ಆರಂಭವಾದ ಬಳಿಕ ಜಿಲ್ಲೆಯಲ್ಲಿ ಸಂಭವಿಸುತ್ತಿದ್ದ ತಾಯಿ, ಶಿಶು ಮರಣ ದರದ ಪ್ರಮಾಣ ತಗ್ಗಲಿದೆ.
-ಡಾ.ಎ.ಎಸ್‌.ರುದ್ರವಾಡಿ, ಜಿಮ್ಸ್ ಆಸ್ಪತ್ರೆ ಅಧೀಕ್ಷಕ ಹಾಗೂ ಜಿಲ್ಲಾ ಶಸ್ತ್ರಜ್ಞರು

*

ಕಾಂಗರೂ ಮದರ್ ಕೇರ್‌, ಬೆಡ್‌ಸೈಡ್ ಅಲ್ಟ್ರಾಸೌಂಡ್‌, ಡಿಆರ್‌ ವೈರ್‌ಲೆಸ್‌ ಎಕ್ಸ್‌ ರೇ ಯಂಥ ಉಪಕರಣಗಳು ನವಜಾತ ಶಿಶುಗಳ ಚಿಕಿತ್ಸೆಗೆ ಸಜ್ಜಾಗುತ್ತಿವೆ.
-ಡಾ. ಸಂದೀಪ್ ಹರಸಂಗಿ, ‘ಜಿಮ್ಸ್’ ಮಕ್ಕಳ ವಿಭಾಗದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT