ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇವರ್ಗಿ: ಹೆದ್ದಾರಿ ತಡೆದು ಪ್ರತಿಭಟನೆ

ಶಿವಲಿಂಗಪ್ಪ ಭಾವಿಕಟ್ಟಿ ಹತ್ಯೆ: ಆರೋಪಿಗಳ ಬಂಧನಕ್ಕೆ ಆಗ್ರಹ
Last Updated 8 ನವೆಂಬರ್ 2019, 10:34 IST
ಅಕ್ಷರ ಗಾತ್ರ

ಜೇವರ್ಗಿ: ತಾಲ್ಲೂಕಿನ ಮಯೂರ ಗ್ರಾಮದ ದಲಿತ ಮುಖಂಡ ಶಿವಲಿಂಗಪ್ಪ ಭಾವಿಕಟ್ಟಿ ಹತ್ಯೆ ಖಂಡಿಸಿ ತಾಲ್ಲೂಕಿನ ವಿವಿಧ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಗುರುವಾರ ಇಲ್ಲಿ ಅಖಂಡೇಶ್ವರ ವೃತ್ತದಲ್ಲಿ ಒಂದು ಗಂಟೆ ಜೇವರ್ಗಿ–ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ,‘ಶಿವಲಿಂಗಪ್ಪ ಭಾವಿಕಟ್ಟಿ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಅವರನ್ನು
ನ.4ರಂದು ರಾತ್ರಿ 8.30ರ ಸುಮಾರಿಗೆ ಶರಣ ಶಿರಸಗಿ ಹತ್ತಿರ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಂತಕರನ್ನು ಶೀಘ್ರ ಬಂಧಿಸಿ ಉಗ್ರ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.

‘ಕೊಲೆ ಆರೋಪಿ, ಈ ಮೊದಲು ರೌಡಿ ಶೀಟರ್‌ ಆಗಿದ್ದ ಶಾಂತಪ್ಪ ಕೂಡಲಗಿಯನ್ನು ಪುನಃ ರೌಡಿ ಪಟ್ಟಿಗೆ ಸೇರಿಸಿ ಬಂಧಿಸಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು’ ಅವರು ಆಗ್ರಹಿಸಿದರು.

ಮುಖಂಡ ಚಂದ್ರಶೇಖರ ಹರನಾಳ ಮಾತನಾಡಿ, ಶಿವಲಿಂಗಪ್ಪ ಭಾವಿಕಟ್ಟಿ ಅವರ ಕುಟುಂಬ ವರ್ಗದವರಿಗೆ ಜೀವಭಯ ಇರುವುದರಿಂದ ಅವರಿಗೆ ರಕ್ಷಣೆ ನೀಡಬೇಕು. ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಶಿವಲಿಂಗಪ್ಪ ಭಾವಿಕಟ್ಟಿ ಅವರ ಸಹೋದರ ಶಿವಪುತ್ರ ಭಾವಿಕಟ್ಟಿ ಮಯೂರ, ಮರೆಪ್ಪ ಬಡಿಗೇರ, ಸಿ.ಎಚ್.ಭೀಮರಾಯ ನಗನೂರ ಇತರರು ಮಾತನಾಡಿ, ಮೃತ ಶಿವಲಿಂಗಪ್ಪ ಭಾವಿಕಟ್ಟಿ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಕೂಡಲೇ ಎಲ್ಲಾ ಆರೋಪಿಗಳನ್ನು
ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಂತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಸಿದ್ದರಾಯ ಭೋಸಗಿ ಅವರ ಮುಖಾಂತರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮುಖಂಡರಾದ ಮಲ್ಲಿನಾಥ ಪಾಟೀಲ ಯಲಗೋಡ, ಬಸವರಾಜ ಪಾಟೀಲ ನರಿಬೋಳ, ಎಂ.ಬಿ.ಪಾಟೀಲ ಹರವಾಳ, ರಮೇಶಬಾಬು ವಕೀಲ, ಮಹಾದೇವಪ್ಪ ದೇಸಾಯಿ ಕೊಡಚಿ, ರೇವಣಸಿದ್ದಪ್ಪ ಸಂಕಾಲಿ, ಹಳ್ಳೆಪ್ಪಾಚಾರ್ಯ ಜೋಶಿ, ಸಾಯಬಣ್ಣ ದೊಡ್ಡಮನಿ, ಭೀಮರಾವ್ ಆರ್.ಗುಜಗೊಂಡ, ಸಿದ್ದಣ್ಣ ಹೂಗಾರ, ಮಲ್ಲಿಕಾರ್ಜುನ ದಿನ್ನಿ, ಅಕ್ಬರಸಾಬ್ ಅಂಕಲಗಾ, ರವಿ ಕುಳಗೇರಿ, ಶ್ರೀಹರಿ ಕರಕಿಹಳ್ಳಿ, ಬಸಣ್ಣ ಸರ್ಕಾರ, ಪ್ರಭು ಜಾಧವ, ಬಸವರಾಜಗೌಡ ಕುಕನೂರ, ಬಸವರಾಜ ಮುಕ್ಕಾಣಿ ಸೇರಿದಂತೆ ಶಿವಲಿಂಗಪ್ಪ ಭಾವಿಕಟ್ಟಿ ಅವರ ಕುಟುಂಬ ವರ್ಗದವರು, ಜೇವರ್ಗಿ ತಾಲ್ಲೂಕು ವಿವಿಧ ಸಂಘಟನೆಗಳ ಒಕ್ಕೂಟದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT